ಮತ್ತೊಂದು ಬಂದ್ ಗೆ ಸಿದ್ಧರಾಗಿ; ಏಪ್ರಿಲ್ 7ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ ವಾಟಾಳ್!

ಕಾವೇರಿ ಮತ್ತು ಮಹದಾಯಿ ಹೋರಾಟದ ನಿಮಿತ್ತ ಸರಣಿ ಬಂದ್ ಗಳ ಆಚರಣೆ ಮಾಡಿದ್ದ ಕರ್ನಾಟಕ ಮತ್ತೊಂದು ಬಂದ್ ಗೆ ಸಾಕ್ಷಿಯಾಗಲಿದ್ದು, ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ..
ಕರ್ನಾಟಕ ಬಂದ್
ಕರ್ನಾಟಕ ಬಂದ್
Updated on

ಬೆಂಗಳೂರು: ಕಾವೇರಿ ಮತ್ತು ಮಹದಾಯಿ ಹೋರಾಟದ ನಿಮಿತ್ತ ಸರಣಿ ಬಂದ್ ಗಳ ಆಚರಣೆ ಮಾಡಿದ್ದ ಕರ್ನಾಟಕ ಮತ್ತೊಂದು ಬಂದ್ ಗೆ ಸಾಕ್ಷಿಯಾಗಲಿದ್ದು, ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಸಹಕಾರ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಲ್ ನಾಗರಾಜ್ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.

ಮುಂಬರುವ ಏಪ್ರಿಲ್ 7ರಂದು ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕರ್ನಾಟಕದ ಎಲ್ಲ  ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಪ್ರಮುಖವಾಗಿ ಕರ್ನಾಟಕದ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವವಿದೆ. ಹೀಗಾಗಿ ತ್ವರಿತಗತಿಯಲ್ಲಿ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅನುಮೋದನೆ  ನೀಡಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಏಪ್ರಿಲ್ 7ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು.  ಇದಕ್ಕೂ ಮೊದಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ತಿಳಿಸಿದರು.

ಬಯಲು ಸೀಮೆ ಭಾಗಕ್ಕೆ ನೀರಾವರಿ ಯೋಜನೆಗೆ ಆಗ್ರಹ
ಇನ್ನು ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿತ್ರದುರ್ಗ, ದಾವಣೆಗೆರೆ ಸೇರಿದಂತೆ ಬಯಲು ಸೀಮೆಭಾಗದಲ್ಲಿ ಕುಡಿಯುವ ನೀರಿಗೆ ಭಾರಿ ಅಭಾವವುಂಟಾಗಿದ್ದು, ಈ ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಕೂಡಲೇ ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.

ವಾಟಾಳ್ ಬಂದ್ ಗೆ ಬೆಂಬಲ ವಿಚಾರ: ಕನ್ನಡಪರ ಸಂಘಟನೆಗಳಲ್ಲೇ ಗೊಂದಲ

ಇನ್ನು ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಬಲ ನೀಡುವ ಕುರಿತು ಕನ್ನಡಪರ ಸಂಘಟನೆಗಳಲ್ಲೇ ಗೊಂದಲ ಮನೆ ಮಾಡಿದ್ದು, ಬಂದ್ ಗೆ ಬೆಂಬಲ ನೀಡಿ ಬೀದಿಗಳಿಯಬೇಕೇ ಅಥವಾ ಬಂದ್ ನಲ್ಲಿ ಪಾಲ್ಗೊಳ್ಳಬಾರದೇ ಎಂಬುದರ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿವೆ. ಪ್ರಮುಖವಾಗಿ ಕರ್ನಾಟಕದಲ್ಲಿ ಬೃಹತ್ ಪ್ರತಿಭಟನೆಯಾಗಿ ಮಾರ್ಪಟ್ಟಿರುವ ಮಹದಾಯಿ ಹೋರಾಟ ಇನ್ನೂ ಚಾಲ್ತಿಯಲ್ಲಿದ್ದು, ಇಷ್ಟು ದಿನ ಆ ಹೋರಾಟಕ್ಕೆ ಕೈ ಜೋಡಿಸದೇ ನೇರವಾಗಿ ಬಂದ್ ನಲ್ಲಿ ಪಾಲ್ಗೊಳ್ಳುವುದರಿಂದ ಜನರಲ್ಲಿ ಸಂಘಟನೆ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಹುದು ಎಂಬ ಕಾರಣದಿಂದಾಗಿ ಬಂದ್ ಗೆ ಬೆಂಬಲ ನೀಡುವ ಕುರಿತು ಸಂಘಟನೆಗಳು ಪರೋಕ್ಷವಾಗಿ ಹಿಂದೇಟು ಹಾಕುತ್ತಿವೆ ಎಂದು ಹೇಳಲಾಗುತ್ತಿದೆ.

ಆದರೆ ಬಂದ್ ಗೆ ಇನ್ನೂ ಕಾಲಾವಕಾಶವಿದ್ದು, ಈ ಸಮಯದೊಳಗೆ ಎಲ್ಲ ಸಂಘಟನೆಗಳ ಮನವೊಲಿಸಿ ಬಂದ್ ನಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕಾರ್ಯ ಕೂಡ ನಡೆಯುವ ಸಾಧ್ಯತೆ ಇದೆ. ಮತ್ತೊಂದೆಡೆ ಈಗಾಗಲೇ ಸತತ ಬಂದ್ ಗಳಿಂದ ಜನ ಹೈರಾಣಾಗಿದ್ದು, ಏಪ್ರಿಲ್ 7ರಂದು ನಡೆಯಲಿರುವ ಬಂದ್ ಗೆ ಎಂತಹ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com