ಬೆಂಗಳೂರು ಕಾಮುಕರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಕಮ್ಮನಹಳ್ಳಿಯಲ್ಲಿ ಮನೆಗೆ ತೆರಳುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಕಾಮುಕರು ಪೊಲೀಸರ ಬಲೆಗೆ ಬಿದ್ದಿದ್ದು, ಅವರ ಶೋಧಕ್ಕಾಗಿ ಪೊಲೀಸರು ಹರಸಾಹಸವನ್ನೇ ಪಟ್ಟಿದ್ದಾರೆ.
ಆರೋಪಿ ಗ್ಯಾಂಗ್ (ಸಂಗ್ರಹ ಚಿತ್ರ)
ಆರೋಪಿ ಗ್ಯಾಂಗ್ (ಸಂಗ್ರಹ ಚಿತ್ರ)

ಬೆಂಗಳೂರು: ಕಮ್ಮನಹಳ್ಳಿಯಲ್ಲಿ ಮನೆಗೆ ತೆರಳುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಕಾಮುಕರು ಪೊಲೀಸರ ಬಲೆಗೆ ಬಿದ್ದಿದ್ದು, ಅವರ ಶೋಧಕ್ಕಾಗಿ ಪೊಲೀಸರು ಹರಸಾಹಸವನ್ನೇ ಪಟ್ಟಿದ್ದಾರೆ.

ಅತ್ತ ಹೊಸ ವರ್ಷಾಚರಣೆ ವೇಳೆ ಎಂಜಿ ರಸ್ತೆಯಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ ಸುದ್ದಿಯಾಗುತ್ತಿದ್ದ ಬೆನ್ನಲ್ಲೇ ಅಂತಹುದೇ ಮತ್ತೊಂದು ಘಟನೆ ಕಮ್ಮನಹಳ್ಳಿಯಿಂದ ಕೇಳಿಬಂದಿತ್ತು. ಈ ಬಾರಿ ಲೈಂಗಿಕ  ದೌರ್ಜನ್ಯದ ಸಿಸಿಟಿವಿ ದೃಶ್ಯಾವಳಿ ಮಾಧ್ಯಮಗಳ ಕೈಗೆ ಸಿಗುವುದರೊಂದಿಗೆ ಈ ಪ್ರಕರಣ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ದೇಶವ್ಯಾಪಿ ಖಂಡನೆ  ಎದುರಿಸಬೇಕಾಯಿತು.

ಆದರೆ ಬೆಂಗಳೂರು ಪೊಲೀಸರು ಘಟನೆ ನಡೆದ 48 ಗಂಟೆಗಳ ಅವಧಿಯಲ್ಲೇ ಆರೋಪಿಗಳನ್ನು ಬಂಧಿಸುವ ಮೂಲಕ ಕರ್ತವ್ಯ ಮೆರೆದಿದ್ದರು. ಆದರೆ ಪೊಲೀಸರ ಕಾರ್ಯಾಚರಣೆ ಅಷ್ಟು ಸುಲಭವಾಗಿರಲಿಲ್ಲ. ಘಟನೆ ಸಂಬಂಧ  ತನಿಖೆಗೆ ಮುಂದಾಗಿದ್ದ ಪೊಲೀಸರು ಮೊದಲು ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಪ್ರದೇಶದ ಮಹಜರು ಮಾಡಿ, ಅಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಒಂದಷ್ಟು ಯುವಕರನ್ನು ವಿಚಾರಣೆಗೊಳಪಡಿಸಿದ್ದರು. ಅಲ್ಲದೆ  ಸ್ಥಳೀಯ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಕಲೆಹಾಕಿದರು. ಈ ಪೈಕಿ ಘಟನೆ ದಾಖಲಾಗಿದ್ದ ಪ್ರಶಾಂತ್ ಫ್ರಾನ್ಸಿನ್ಸ್ ಎಂಬುವವರ ಮನೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು ಕೂಡ ಸೇರಿತ್ತು.

ಈ ವಿಡಿಯೋದಲ್ಲಿ ಯುವಕರು ಯುವತಿ ಮೇಲೆ ಎರಗಿದ್ದ ವೇಳೆ ರಸ್ತೆ ತುದಿಯಲ್ಲಿ ಮತ್ತೊಂದಷ್ಟು ಯುವಕರು ಇರುವುದು ಸ್ಪಷ್ಟವಾಗಿ ಗೋಚರವಾಗಿತ್ತು. ಹೀಗಾಗಿ ಈ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು  ಕಲೆಹಾಕಿದ್ದ ಪೊಲೀಸರು ಅದರ ಪರಿಶೀಲನೆ ನಡೆಸಿದ್ದರು. ಈ ಪೈಕಿ ಆರೋಪಿಗಳಾದ ಲಿನೋ, ಅಯ್ಯಪ್ಪ, ಸೋಮಶೇಖರ್ ಮತ್ತು ಸುದೇಶ್ ಸೇರಿದಂತೆ ಸುಮಾರು ಐದಾರು ಮಂದಿ ಯುವಕರು ಕುಳ್ಳಪ್ಪ ಸರ್ಕಲ್ ಬಳಿ ಇರುವ ರಾಜ್  ಕುಮಾರ್ ಪಾರ್ಕ್ ಬಳಿ ನಿಂತಿರುವ ದೃಶ್ಯ ಕಂಡಿತ್ತು. ಆದರೂ ಆ ದೃಶ್ಯಾವಳಿಗಳು ಇವರೇ ಆರೋಪಿಗಳು ಎನ್ನುವಷ್ಟರ ಮಟ್ಟಿಗಿನ ಸಾಕ್ಷಿಯೇನಾಗಿರಲಿಲ್ಲ.

ಮೊದಲ ಸುಳಿವು ನೀಡಿದ್ದ ಹೇರ್ ಕಟ್
ಆದರೆ ಲೈಂಗಿಕ ದೌರ್ಜನ್ಯದ ವಿಡಿಯೋ ದಾಖಲಾಗಿದ್ದ ಪ್ರಶಾಂತ್ ಅವರ ಮನೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಪಾರ್ಕ್ ಬಳಿಯ ದೃಶ್ಯಾವಳಿಗಳಲ್ಲಿ ಒಂದು ಸಾಮ್ಯತೆ ಇತ್ತು. ಅದೇನೆಂದರೆ ದೌರ್ಜನ್ಯ ನಡೆಸುತ್ತಿದ್ದ  ಯುವಕರ ಹೇರ್ ಕಟ್ ಹಾಗೂ ಪಾರ್ಕ್ ಬಳಿ ನಿಂತಿದ್ದ ಯುವಕರ ಹೇರ್ ಕಟ್ ಒಂದೇ ತೆರನಾಗಿದ್ದವು.

ವಿದ್ಯಾರ್ಥಿನಿ ನೀಡಿದ್ದ ಮಾಹಿತಿ ಮೇರೆಗೆ ಸಿಕ್ಕಿ ಬಿದ್ದ ಸೋಮಶೇಖರ್
ಇದೇ ಅಂಶದ ಮೇಲೆ ಒಂದಷ್ಟು ಸ್ಕೆಚ್ ಸಿದ್ಧಪಡಿಸಿಕೊಂಡ ಪೊಲೀಸರು ಕಮ್ಮನಹಳ್ಳಿ ಸುತ್ತಮುತ್ತ ವಿಚಾರಿಸತೊಡಗಿದರು. ಈ ವೇಳೆ ಓರ್ವ ಕಾಲೇಜು ವಿದ್ಯಾರ್ಥಿನಿ ಸ್ಕೆಚ್ ನಲ್ಲಿರುವ ಓರ್ವ ಯುವಕನನ್ನು ಗುರುತಿಸಿದ್ದಳು. ಈ ಹಿಂದೆ  ಇದೇ ಯುವಕ ಆ ವಿದ್ಯಾರ್ಥಿನಿಯನ್ನು ಚುಡಾಯಿಸಿದ್ದನಂತೆ. ಹೀಗಾಗಿ ಆ ಯುವಕನ ಮುಖಚರ್ಯೆಯನ್ನು ಯುವತಿ ಪತ್ತೆ ಮಾಡಿದ್ದಳು. ಅಲ್ಲದೆ ಆತನ ಬಗ್ಗೆ ಮಾಹಿತಿ ನೀಡಿದ್ದಳು. ಯುವತಿ ನೀಡಿದ ಮಾಹಿತಿಯಾಧಾರದ ಮೇಲೆ  ತನಿಖೆ ನಡೆಸಿದ ಪೊಲೀಸರಿಗೆ ಆತ ಓರ್ವ ಡೆಲಿವರಿ ಬಾಯ್ ಎಂದು ತಿಳಿಯಿತು. ಬಳಿಕ ಆತನ ಮೊಬೈಲ್ ನಂಬರ್ ಸಂಪಾದಿಸಿದ ಪೊಲೀಸರು ಅದರ ಟವರ್ ಲೊಕೇಶನ್ ಪರಿಶೀಲಿಸಿದಾಗ ಘಟನೆ ನಡೆದ ಸಂದರ್ಭದಲ್ಲಿ  ಆರೋಪಿ ಸೋಮಶೇಖರ್ ಅದೇ ಸ್ಥಳದಲ್ಲಿದ್ದ ವಿಚಾರವನ್ನು ತಿಳಿದುಕೊಂಡಿದ್ದಾರೆ.

ಕೂಡಲೇ ತಡ ಮಾಡದ ಪೊಲೀಸರು ಚಿನ್ನಿ ಅಲಿಯಾಸ್ ಸೋಮಶೇಖರ್ ನನ್ನು ವಿಚಾರಣೆಗೊಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಅಂತೆಯೇ ತನ್ನ ಸ್ನೇಹಿತರ ಬಗ್ಗೆ ಮಾಹಿತಿ ನೀಡಿದ್ದಾನೆ. ವಿಚಾರಣೆ ಆರಂಭದಲ್ಲಿ ಚಿನ್ನಿ  ತಾನು ನಿರಪರಾಧಿ ಎಂದು ವಾದಿಸಿಕೊಂಡಿದ್ದ. ಅಲ್ಲದೆ ತನ್ನದೇನು ತಪ್ಪಿಲ್ಲ ಎಂದು ಅತ್ತಿದ್ದ. ಇದಾದ ಕೆಲವೇ ಕ್ಷಣದಲ್ಲಿ ಈತ ಹಾಡು ಹಾಡುತ್ತಿದ್ದನ್ನು ಗಮನಿಸಿದ ಪೊಲೀಸರು ಅನುಮಾನಗೊಂಡು ಮತ್ತೆ ಗಟ್ಟಿಯಾಗಿ ವಿಚಾರಣೆ  ನಡೆಸಿದ್ದಾರೆ. ಆಗಲೇ ಈತ ಘಟನೆ ಕುರಿತಂತೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಿ ನೀಡಿದ ಮಾಹಿತಿ ಮೇರೆಗೆ ಪ್ರಕರಣದ ಪ್ರಮುಖ ಆರೋಪಿ ಲಿನೋ, ಅಯ್ಯಪ್ಪ ಹಾಗೂ ಸುದೇಶ್ ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿಗಳೆಲ್ಲರೂ ಅವಿತುಕೊಳ್ಳುವ ಪ್ರಯತ್ನ  ಮಾಡಿದ್ದರಾದರೂ, ಅವರು ಕಮ್ಮನ ಹಳ್ಳಿಯಿಂದ ದೂರ ಹೋಗಿರಲಿಲ್ಲ. ಹೀಗಾಗಿ ಬಂಧನ ಪ್ರಕ್ರಿಯೆ ವಿಳಂಬವಾಗಲಿಲ್ಲ ಎಂದು ಡಿಸಿಪಿ ಪಿಎಸ್ ಹರ್ಷಾ ಹೇಳಿದ್ದಾರೆ.

ಒಟ್ಟಾರೆ ಇಡೀ ದೇಶಾದ್ಯಂತ ಬೆಂಗಳೂರು ಮಾನ ಹರಾಜು ಹಾಕಿದ್ದ ಕಾಮುಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸು ಕಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com