
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಎಂಜಿರಸ್ತೆ ಮತ್ತು ಕಮ್ಮನ ಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಭಾರಿ ಚರ್ಚೆಗೀಡಾಗಿರುವಂತೆಯೇ ಅಂತಹುದೇ ಮತ್ತೊಂದು ಪ್ರಕರಣ ಕೆಜಿ ಹಳ್ಳಿಯಲ್ಲಿ ವರದಿಯಾಗಿದೆ.
ಕೆಲಸಕ್ಕೆಂದು ಮುಂಜಾನೆ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಯುವತಿಯೋರ್ವಳ ಮೇಲೆ ಕಾಮುನೋರ್ವ ಎರಗಿದ್ದು, ಆಕೆಯನ್ನು ಬಲವಂತವಾಗಿ ಚುಂಬಿಸಿ ಬಳಿಕ ಆಕೆಯ ತುಟಿ ಮತ್ತು ನಾಲಗೆಯನ್ನು ಕಚ್ಚಿ ಪರಾರಿಯಾಗಿದ್ದಾನೆ. ಶುಕ್ರವಾರ ಬೆಳಗ್ಗೆ ಸುಮಾರು 6.30ರ ಸಂದರ್ಭದಲ್ಲಿ ಕಾಡುಗೊಂಡನಹಳ್ಳಿಯಲ್ಲಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಯುವತಿಯನ್ನು ಹಿಂಬಾಲಿಸಿದ ದುಷ್ಕರ್ಮಿ ಯಾರೂ ಇಲ್ಲದ ಸಂದರ್ಭವನ್ನು ನೋಡಿ ಆಕೆಗೆ ಚುಂಬಿಸಿ ತುಟಿ ಕಚ್ಚಿದ್ದಾನೆ. ಈ ವೇಳೆ ಯುವತಿ ಕಿರುಚಿಕೊಂಡಿದ್ದು, ಯುವತಿ ಕಿರುಚಾಡುತ್ತಿದ್ದಂತೆಯೇ ಅಲ್ಲಿದ್ದ ನಾಯಿಗಳು ಬೊಗಳಲು ಆರಂಭಿಸಿವೆ. ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ನಿದ್ರಿಸುತ್ತಿದ್ದ ಮಂದಿ ಎದ್ದು ಹೊರಗೆ ಬರುತ್ತಿದ್ದಂತೆಯೇ ದುಷ್ಕರ್ಮಿ ಪರಾರಿಯಾಗಿದ್ದಾನೆ.
ಮೂಲಗಳ ಪ್ರಕಾರ ಸಂತ್ರಸ್ತಸ್ತೆ ವಿನೋಬಾನಗರ ನಿವಾಸಿ ಎಂದು ತಿಳಿದುಬಂದಿದ್ದು, ಕೋರಮಂಗಲದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಶುಕ್ರವಾರ ಬೆಳಗಿನ ಪಾಳಿಯ ಕೆಲಸವಿದ್ದರಿಂದ ಅಂದು ಆಕೆ ಮುಂಜಾನೆ ಬಸ್'ಗಾಗಿ ಗೋವಿಂದಪುರ ರಸ್ತೆಯಲ್ಲಿ ತೆರಳುತ್ತಿದ್ದಳು. ಈ ವೇಳೆ ಆಕೆ ಒಂಟಿಯಾಗಿರುವುದನ್ನು ಗಮನಿಸಿದ ದುಷ್ಕರ್ಮಿ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಕೆಜಿ ಹಳ್ಳಿಯ ನಿರ್ಜನ ರಸ್ತೆಯಲ್ಲಿ ಆಕೆಯ ಮೇಲೆ ದೌರ್ಜನ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಘಟನೆ ಸಂಬಂಧ ಕೆಜಿ ಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 354 (ಮಹಿಳೆ ಗೌರವಕ್ಕೆ ಧಕ್ಕೆ), 509 (ಅಶ್ಲೀಲ ಪದ ಬಳಕೆ ಅಥವಾ ಅಶ್ಲೀಲ ಸಂಜ್ಞೆ) ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಂತೆಯೇ ಸ್ಥಳದಲ್ಲಿರುವ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ ಪರಮೇಶ್ವರ ಅವರು, ಘಟನೆ ತಮ್ಮ ಗಮನಕ್ಕೆ ಬಂದಿದೆ. ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ ವರದಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮೊದಲೇ ಕಾಯುತ್ತಿದ್ದ ದುಷ್ಕರ್ಮಿ
ಇನ್ನು ಸಂತ್ರಸ್ತ ಯುವತಿ ಈ ಮಾರ್ಗವಾಗಿಯೇ ಕೋರಮಂಗಲಕ್ಕೆ ಪ್ರತಿನಿತ್ಯ ತೆರಳುತ್ತಿದ್ದಳು. ಇದನ್ನು ಗಮನಿಸಿದ್ದ ದುಷ್ಕರ್ಮಿ ಆಕೆ ಬರುವಿಕೆಯನ್ನೇ ಕಾಯುತ್ತಿದ್ದ. ಅಲ್ಲದೆ ಆಕೆ ಆಗಮಿಸುವ ಮೊದಲೇ ಆ ರಸ್ತೆಗೆ ಆಗಮಿಸಿ ಕಾಯುತ್ತಿದ್ದ ದೃಶ್ಯಾವಳಿಗಳು ಸ್ಥಳೀಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement