
ಬೆಂಗಳೂರು: ಕಳೆದ ಜನವರಿ 4ರಂದು ಬಾಣಸವಾಡಿಯ ಗೋಲ್ಡ್ಸ್ ಜಿಮ್ ಬಳಿ ನಡೆದಿದ್ದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜನವರಿ 4ರಂದು ಬಾಣಸವಾಡಿ ಸಮೀಪದ ಗೋಲ್ಡ್ಸ್ ಜಿಮ್ ಬಳಿ ಜಿಮ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವತಿಯನ್ನು ಬೈಕಿನಲ್ಲಿ ಬಂದ ಇಬ್ಬರು ಕಾಮುಕರು ಚುಡಾಯಿಸಿದ್ದರು. ಅಲ್ಲದೆ ಆಕೆಯ ಟೀಶರ್ಟ್ ಎಳೆದಾಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು. ಈ ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೀಡಾಗಿತ್ತು. ಇದೀಗ ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳಾದ ನಂದ (25 ವರ್ಷ) ಹಾಗೂ ಅಮಿನ್ ಅಲಿಯಾಸ್ ಮುಬಾರಕ್ (26 ವರ್ಷ) ಎಂಬುವರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಅಂತೆಯೇ ಆರೋಪಿಗಳ ವಿರುದ್ಧ ಹಲ್ಲೆ ನಡೆಸಿ ಮಹಿಳೆ ಗೌರವಕ್ಕೆ ಧಕ್ಕೆ (ಐಪಿಸಿ 354) ಪ್ರಕರಣದ ಜತೆಗೆ ದರೋಡೆ ಯತ್ನ (ಐಪಿಸಿ 393) ಆರೋಪವನ್ನೂ ಸೇರಿಸಿ ಎಫ್‌ಐಆರ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರಾದ ನಂದ ದೇವರ ಜೀವನಹಳ್ಳಿ ನಿವಾಸಿಯಾಗಿದ್ದು, ಅಮಿನ್ ಕೆ.ಜಿ.ಹಳ್ಳಿಯವನು. ಬಾಲ್ಯ ಸ್ನೇಹಿತರಾದ ಇವರು, ಬೈಕ್'ನಲ್ಲಿ ಸುತ್ತಾಡಿ ಮಹಿಳೆಯರ ಬ್ಯಾಗ್ ಹಾಗೂ ಚಿನ್ನದ ಸರಗಳನ್ನು ದೋಚುತ್ತಿದ್ದರು. ಆರೋಪಿಗಳ ವಿರುದ್ಧ ಬಾಣಸವಾಡಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಆರೋಪಿಗಳನ್ನು ಬಂಧಿಸುಲ ಪೊಲೀಸರು ನಡೆಸಿದ ಕಾರ್ಯಾಚರಣೆ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದು, "ಘಟನಾ ಸ್ಥಳದಲ್ಲಿ ಯಾವುದೇ ಸಿ.ಸಿ ಟಿ.ವಿ ಕ್ಯಾಮೆರಾ ಇರಲಿಲ್ಲ. ಹೀಗಾಗಿ, ಅಕ್ಕಪಕ್ಕದ ಜಂಕ್ಷನ್‌ಗಳ ಕ್ಯಾಮೆರಾಗಳನ್ನು ವಶಕ್ಕೆ ಪಡೆದೆವು. ಘಟನೆ ನಡೆದ ಸಮಯದ ಆಸುಪಾಸಿನಲ್ಲಿ ಹಾದುಹೋಗಿದ್ದ 300ಕ್ಕೂ ಹೆಚ್ಚು ಬಿಳಿ ಬಣ್ಣದ ಸ್ಕೂಟರ್'ಗಳ ನೋಂದಣಿ ಸಂಖ್ಯೆಗಳನ್ನು ಸಂಗ್ರಹಿಸಿದ್ದೆವು. ಒಬ್ಬೊಬ್ಬರ ವಿವರಗಳನ್ನೇ ಪರಿಶೀಲಿಸಿದಾಗ ಆರೋಪಿ ನಂದನ ಸ್ಕೂಟರ್ ಕೂಡ ಆ ಮಾರ್ಗವಾಗಿ ಹೋಗಿರುವುದು ಗೊತ್ತಾಗಿತ್ತು. ಮೊದಲು ನಂದನನ್ನು ವಶಕ್ಕೆ ಪಡೆದೆವು. ಆರಂಭದಲ್ಲಿ ಆತ ತಪ್ಪೊಪ್ಪಿಕೊಳ್ಳಲಿಲ್ಲ. ಸಂತ್ರಸ್ತೆಯನ್ನು ಠಾಣೆಗೆ ಕರೆಸಿದಾಗ ಆತನೇ ತನ್ನ ಟೀ-ಶರ್ಟ್ ಹಿಡಿದು ಎಳೆದಿದ್ದಾಗಿ ಅವರು ಹೇಳಿಕೆ ಕೊಟ್ಟರು. ಬಳಿಕ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬಾಯ್ಬಿಟ್ಟ. ಆತ ನೀಡಿದ ಸುಳಿವು ಆಧರಿಸಿ ಶುಕ್ರವಾರ ಬೆಳಿಗ್ಗೆ ಅಮಿನ್'ನನ್ನೂ ಬಂಧಿಸಲಾಯಿತು.
ಯುವತಿಯ ಬಳಿ ಇದ್ದ ಬ್ಯಾಗ್ ಕಿತ್ತುಕೊಳ್ಳಲು ಯತ್ನಿಸಿದಾಗ ಅವರು ಕೆಳಗೆ ಬಿದ್ದರು. ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶದಿಂದ ಅವರನ್ನು ಮುಟ್ಟಲಿಲ್ಲ ಎಂದ ಪೊಲೀಸರ ಬಳಿ ಆರೋಪಿಗಳು ಹೇಳಿಕೊಂಡಿದ್ದಾರೆ.
ಕಳೆದ ಜನವರಿ 4ರಂದು ಬಾಬುಸಾಪಾಳ್ಯ ನಿವಾಸಿಯಾದ ಸಂತ್ರಸ್ತೆ, ಜನವರಿ 4ರ ಸಂಜೆ 5 ಗಂಟೆ ಸುಮಾರಿಗೆ ಎನ್‌ಎಚ್ 44 ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿರುವ ಗೋಲ್ಡ್ ಜಿಮ್‌ಗೆ ಹೋಗಿದ್ದರು. ಕಸರತ್ತು ಮುಗಿಸಿಕೊಂಡು ರಾತ್ರಿ 8.30ರ ಸುಮಾರಿಗೆ ಮನೆಗೆ ವಾಪಸಾಗುತ್ತಿದ್ದಾಗ, ಆರೋಪಿಗಳು ಹಿಂಬಾಲಿಸಿ ದೌರ್ಜನ್ಯ ಎಸಗಿದ್ದರು. ‘ಬಿಳಿ ಬಣ್ಣದ ಸ್ಕೂಟರ್‌ನಲ್ಲಿ ಬಂದ ಇಬ್ಬರು, ನನ್ನ ಟಿ–ಶರ್ಟ್ ಹಿಡಿದು ಎಳೆದಾಡಿದರು. ಕೆಳಗೆ ಬಿದ್ದಾಗ ಹಲ್ಲೆ ನಡೆಸಿ ಪರಾರಿಯಾದರು’ ಎಂದು ಸಂತ್ರಸ್ತೆ ಅದೇ ದಿನ ದೂರು ಕೊಟ್ಟಿದ್ದರು. ದುಷ್ಕರ್ಮಿಗಳ ಪತ್ತೆಗೆ ಕೆ.ಆರ್.ಪುರ ಎಸಿಪಿ ರವಿಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
Advertisement