ಕಂಡಕ್ಟರ್ ವಿರುದ್ಧ ಅಸಭ್ಯ ವರ್ತನೆ ಆರೋಪ ಮಾಡಿದ್ದ ಯುವತಿ ನಾಪತ್ತೆ!

ಬಿಎಂಟಿಸಿ ಬಸ್ ಕಂಡಕ್ಟರ್ ಚಿಲ್ಲರೆ ಕೇಳಿದರೆ ಪ್ರೇಮಪತ್ರ ನೀಡು ಎಂದು ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿದ್ದ ಯುವತಿ ಇದೀಗ ನಾಪತ್ತೆಯಾಗಿದ್ದು, ಕೇವಲ ಅಷ್ಟು ಮಾತ್ರವಲ್ಲದೇ ತನ್ನ ಫೇಸ್ ಬುಕ್ ಪೋಸ್ಟ್ ಅನ್ನು ಕೂಡ ಡಿಲೀಟ್ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಬಿಎಂಟಿಸಿ ಬಸ್ ಕಂಡಕ್ಟರ್ ಚಿಲ್ಲರೆ ಕೇಳಿದರೆ ಪ್ರೇಮಪತ್ರ ನೀಡು ಎಂದು ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿದ್ದ ಯುವತಿ ಇದೀಗ ನಾಪತ್ತೆಯಾಗಿದ್ದು, ಕೇವಲ ಅಷ್ಟು ಮಾತ್ರವಲ್ಲದೇ ತನ್ನ ಫೇಸ್ ಬುಕ್ ಪೋಸ್ಟ್  ಅನ್ನು ಕೂಡ ಡಿಲೀಟ್ ಮಾಡಿದ್ದಾರೆ.

ಯುವತಿ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದ ಪೋಸ್ಚ್ ಅನ್ನೇ ಆಧಾರವಾಗಿಟ್ಟುಕೊಂಡ ಪೊಲೀಸರು ಇದೀಗ ಬಸ್ ಕಂಡಕ್ಟರ್ ನನ್ನು ಬಂಧಿಸಿದ್ದು, ಆತನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಹೊಸ  ವರ್ಷಾಚರಣೆ ವೇಳೆ ನಡೆದ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಳಿಕ ಇಂತಹ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿದ್ದು, ಅದರಂತೆ ವಿಚಾರ ತಿಳಿದ ಕೂಡಲೇ ಆರೋಪಿ ಕಂಡಕ್ಟರ್ ನನ್ನು  ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಆದರೆ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಹೊಸದೊಂದು ತಲೆನೋವು ಶುರುವಾಗಿದ್ದು, ಅಂದು ಫೇಸ್ ಬುಕ್ ನಲ್ಲಿ ಪೋಸ್ಚ್ ಹಾಕಿದ್ದ ಯುವತಿ ನಾಪತ್ತೆಯಾಗಿದ್ದು, ಅಷ್ಟು ಮಾತ್ರವಲ್ಲದೇ ಪೋಸ್ಟ್ ಅನ್ನು ಕೂಡ ಡಿಲೀಟ್  ಮಾಡಿದ್ದಾರೆ. ಹೀಗಾಗಿ ಯುವತಿ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಅವರ ಪತ್ತೆಗೆ ಸೈಬರ್ ಪೊಲೀಸರ ನೆರವು ಕೋರಿದ್ದಾರೆ. ಯುವತಿ ನಾಪತ್ತೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದ್ದು, ವಿಚಾರಣೆಗೆ ಹೆದರಿ  ಯುವತಿ ನಾಪತ್ತೆಯಾಗಿದ್ದಾರೆಯೇ ಅಥವಾ ಆರೋಪಿ ಕಂಡಕ್ಟರ್ ನಿಂದ ತನಗೆ ತೊಂದರೆಯಾಗುತ್ತದೆ ಎಂದು ಹೆದರಿ ವಿಚಾರಣೆಯಿಂದ ದೂರ ಉಳಿದಿದ್ದಾರೆ ಎಂಬ ಹಲವು ಅನುಮಾನಗಳು ಮೂಡುತ್ತಿವೆ.

ಇನ್ನು ಈ ಹಿಂದೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿದ್ದ ಯುವತಿ,  ಜನವರಿ10ರ ರಾತ್ರಿ 8.10ಕ್ಕೆ ಕಂಪೆನಿ ಕ್ಯಾಬ್‌ನಲ್ಲಿ ರಾಗಿಗುಡ್ಡಕ್ಕೆ ಬಂದಿಳಿದ ನಾನು, ಅಲ್ಲಿಂದ ಉತ್ತರಹಳ್ಳಿಗೆ ಹೋಗಲು ಬಿಎಂಟಿಸಿ ಬಸ್ (ಮಾರ್ಗ  ಸಂಖ್ಯೆ 500ಸಿ) ಹತ್ತಿದೆ. ಬನಶಂಕರಿ ನಿಲ್ದಾಣದಲ್ಲಿ ಕೆಲ ಮಹಿಳಾ ಪ್ರಯಾಣಿಕರು ಇಳಿದರು. ನಂತರ ನಾನು, ಇನ್ನೊಬ್ಬ ಯುವತಿ ಹಾಗೂ ಐದಾರು ಮಂದಿ ಪುರುಷರು ಮಾತ್ರ ಬಸ್‌ನಲ್ಲಿದ್ದೆವು. ಇನ್ನೊಬ್ಬ ಯುವತಿ ಕದಿರೇನಹಳ್ಳಿ  ಪೆಟ್ರೋಲ್ ಬಂಕ್ ಬಳಿ ಇಳಿಯಲು ಮುಂದಾದಳು. ರು. 6 ಚಿಲ್ಲರೆ ಕೇಳಿದ ಆಕೆ ಜತೆ ಅಸಭ್ಯವಾಗಿ ವರ್ತಿಸಿದ ಕಂಡಕ್ಟರ್, ಚಿಲ್ಲರೆ ಕೊಡುವ ನೆಪದಲ್ಲಿ ಕೈ ಸೋಕಿಸಿ ನಕ್ಕ. ಚಾಲಕ ಕೂಡ ಆತನನ್ನು ನೋಡುತ್ತ ವ್ಯಂಗ್ಯವಾಗಿ ನಗುತ್ತಿದ್ದ.’

‘ಆಕೆ ಇಳಿದು ಹೋದ ಬಳಿಕ ನನ್ನ ಬಳಿ ಬಂದ ಕಂಡಕ್ಟರ್‌'ಗೆ, ರು.5 ಚಿಲ್ಲರೆ ಕೊಡುವಂತೆ ಕೇಳಿದೆ. ಅದಕ್ಕೆ ಆತ, ‘ಪ್ರೇಮ ಪತ್ರ ಬರೆದುಕೊಟ್ಟರೆ ಮಾತ್ರ ಚಿಲ್ಲರೆ ಕೊಡುತ್ತೇನೆ ಎಂದ. ಕಂಡಕ್ಟರ್ ವರ್ತನೆಯಿಂದ ಗಾಬರಿಯಾಯಿತು.  ಬಸ್ ನಿಲ್ಲಿಸುವಂತೆ ಹೇಳಿದಾಗ ಚಾಲಕ, ‘ಕುಳಿತುಕೊಳ್ಳಿ ಮೇಡಂ. ನಿಮ್ಮ ಮನೆ ಹತ್ತಿರವೇ ಬಿಟ್ಟು ಹೋಗುತ್ತೇವೆ’ ಎಂದು ಲೇವಡಿ ಮಾಡಿದ. ಬಸ್ ನಿಲ್ಲಿಸುವಂತೆ ಏರು ಧ್ವನಿಯಲ್ಲಿ ಹೇಳಿದಾಗ, ಹಿಂದೆ ಕುತ್ತಿದ್ದ ಪುರುಷರು ನನ್ನ ಹಿಂದಿನ  ಸೀಟಿಗೆ ಬಂದು ಕುಳಿತರು. ಒಬ್ಬಾತ, ನನ್ನ ಬೆರಳನ್ನು ಹಿಡಿದುಕೊಂಡ.’ ‘ಕೂಡಲೇ ಅಲ್ಲಿಂದ ಎದ್ದು ಬಂದ ನಾನು, ಚಲಿಸುತ್ತಿದ್ದ ಬಸ್‌ನಿಂದಲೇ ಹೊರಗೆ ಜಿಗಿಯಲು ಮುಂದಾದೆ. ಅದೃಷ್ಟವಶಾತ್, ಅದೇ ಸಂದರ್ಭದಲ್ಲಿ ಆಂಬುಲೆನ್ಸ್  ಬಂದಿದ್ದರಿಂದ ಸಂಚಾರ ಪೊಲೀಸರೊಬ್ಬರು ಬಸ್ ನಿಲ್ಲಿಸಿದರು. ಕೂಡಲೇ ಕೆಳಗಿಳಿದ ನಾನು, ನಡೆದ ಘಟನೆ ವಿವರಿಸಿದೆ. ಬಸ್‌ ನೋಂದಣಿ ಸಂಖ್ಯೆ ಹಾಗೂ ಮಾರ್ಗಸಂಖ್ಯೆ ಬರೆದುಕೊಂಡ ಅವರು, ಸುಬ್ರಹ್ಮಣ್ಯಪುರ ಠಾಣೆಗೆ ದೂರು  ಕೊಟ್ಟರು. ಬಸ್‌ನಲ್ಲಿದ್ದವರ  ವರ್ತನೆಯಿಂದ ಬೇಸರವಾಗಿದೆ. ಒಬ್ಬರೇ ಪ್ರಯಾಣಿಸುವಾಗ ಯುವತಿಯರು ಎಚ್ಚರವಾಗಿರಬೇಕು ಎಂಬುದನ್ನು ತಿಳಿಸಲು ವಿವರ ಪ್ರಕಟಿಸಿದ್ದೇನೆ’ ಎಂದು ಯುವತಿ ಬರೆದಿದ್ದರು.

ಯುವತಿಯ ಈ ಪೋಸ್ಟ್ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದರ ಬೆನ್ನಲ್ಲೇ ಆರೋಪಿ ಕಂಡಕ್ಟರ್ ನನ್ನು ಪೊಲೀಸರು ಬಂಧಿಸಿದ್ದರು. ಆದರೆ ಪೊಲೀಸರ ವಿಚಾರಣೆ ವೇಳೆ ಕಂಡಕ್ಟರ್ ಯುವತಿ ಆರೋಪವನ್ನು ನಿರಾಕರಿಸಿದ್ದು,  "ಆ  ದಿನ ಚಿಲ್ಲರೆ ವಿಚಾರಕ್ಕೆ ಯುವತಿ ಜತೆ ಜಗಳವಾಗಿದ್ದು ನಿಜ. ಆ ಗಲಾಟೆ ನಡೆದಾಗ ಹತ್ತಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಬಸ್‌ನಲ್ಲಿದ್ದರು. ಅಲ್ಲದೆ, ಏಳೆಂಟು ವರ್ಷಗಳಿಂದ ನಿತ್ಯ ನಮ್ಮ ಬಸ್‌ನಲ್ಲೇ ಓಡಾಡುವ ಇಬ್ಬರು ಶಿಕ್ಷಕಿಯರೂ  ಇದ್ದರು. ನನ್ನ ಮೇಲೆ ಅನುಮಾನವಿದ್ದರೆ ಅವರನ್ನೂ ವಿಚಾರಿಸಿ. ‘ನನಗೆ 40 ವರ್ಷ. ಚಾಲಕನಿಗೆ 45 ವರ್ಷ. ಆ ಯುವತಿಗೆ ನಮ್ಮ ಮಗಳ ವಯಸ್ಸು. ಏಕೆ ಸುಳ್ಳು ಆರೋಪ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ. ಅವರು ಠಾಣೆಗೆ ಬಂದು  ಒಂದಾದರು ಸಾಕ್ಷ್ಯ ಕೊಡಲಿ ನೋಡೋಣ’ ಎಂದು ಕಂಡಕ್ಟರ್ ಹೇಳಿಕೆ ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com