
ಬೆಂಗಳೂರು: ಮೊಬೈಲ್ ಬಳಕೆ ಮಾಡದಂತೆ ಗಂಡ ಗದರಿದ್ದಕ್ಕೇ ಆಕ್ರೋಶಗೊಂಡ ಪತ್ನಿ ಸುಪಾರಿ ಕೊಟ್ಟು ತನ್ನ ಪತಿಯನ್ನೇ ಹತ್ಯೆ ಮಾಡಿಸಿರುವ ಘಟನೆ ಬೆಂಗಳೂರಿನ ಪೀಣ್ಯಾದಲ್ಲಿ ಬೆಳಕಿಗೆ ಬಂದಿದೆ.
ಮೂಲತಃ ಮೈಸೂರು ಮೂಲದ 22 ವರ್ಷದ ವಿನುತಾ ಎಂಬಾಕೆ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನು ಕೊಲೆ ಮಾಡಿಸಿದ ಆರೋಪ ಮೇರೆಗೆ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಪ್ರಿಯಕರ ಶಶಿಕುಮಾರ್ ಜೊತೆ ಸೇರಿ ವಿನುತಾ ತನ್ನ ಪತಿ ವರದರಾಜುವನ್ನು ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣ ಸಂಬಂಧ ವಿನುತಾ, ಶಶಿಕುಮಾರ್ (25 ವರ್ಷ), ಮಂಡ್ಯದ ವಿಕಾಸ್ (22 ವರ್ಷ), ಕೆ.ರಘು (21 ವರ್ಷ) ಹಾಗೂ 17 ವರ್ಷದ ಅಪ್ರಾಪ್ತ ಬಾಲಕನೊಬ್ಬನನ್ನು ಬಂಧಿಸಲಾಗಿದೆ. ಪೊಲೀಸ್ ಮೂಲಗಳು ತಿಳಿಸಿರುವಂತೆ ವಿನುತಾ ಮತ್ತು ಶಿಶಕುಮಾರ್ ಅವರು ಶಾಲಾ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಗೆ ಒಪ್ಪದ ಪೋಷಕರು, ವಿನುತಾ ಅವರನ್ನು ಆರು ವರ್ಷಗಳ ಹಿಂದೆ ವರದರಾಜು ಜತೆ ವಿವಾಹ ಮಾಡಿದ್ದರು. ನಂತರ ನಗರಕ್ಕೆ ಬಂದ ದಂಪತಿ, ಪೀಣ್ಯದ ಎಂಎಐ ಲೇಔಟ್'ನಲ್ಲಿ ನೆಲೆಸಿದ್ದರು.
ಮದುವೆಯಾದ ಕೆಲವೇ ತಿಂಗಳಲ್ಲಿ ವಿನುತಾ ಮತ್ತು ವರದರಾಜು ಅವರ ಸಂಸಾರದಲ್ಲಿ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿತ್ತು. ಪತ್ನಿ ದಿನವೆಲ್ಲಾ ಮೊಬೈಲ್ ನಲ್ಲೇ ಬಿಸಿಯಾಗಿರುತ್ತಿದ್ದುದನ್ನು ನೋಡುತ್ತಿದ್ದ ಪತಿ ವರದರಾಜು ಆಕೆಯ ನಡತೆಯನ್ನು ಶಂಕಿಸಿದ್ದ. ಅಂತೆಯೇ ಇನ್ನು ಮುಂದೆ ಮೊಬೈಲ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದ. ವರದರಾಜುವಿನ ಈ ನಡೆಯಿಂದ ಆಕ್ರೋಶಗೊಂಡ ಗಂಡನನ್ನು ಕೊಲ್ಲಲು ನಿರ್ಧಾರ ಮಾಡಿದ್ದಳು. ಪ್ರಿಯಕರನಿಗೆ ಕರೆಮಾಡಿ ನೆರವು ಕೇಳಿದ್ದಳು. ಅಲ್ಲದೆ, ಈ ಕೆಲಸ ಮಾಡಿದರೆ ರು. 1.5 ಲಕ್ಷ ಕೊಡುವುದಾಗಿಯೂ ತಿಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಆರೋಪಿ ಶಶಿಕುಮಾರ್ ನನ್ನು ಈ ಬಗ್ಗೆ ವಿಚಾರಿಸಿದಾಗ ವಿನುತಾಳ ಗಂಡನನ್ನು ಕೊಂದರೆ ಆಕೆಯನ್ನು ತಾನೇ ವಿವಾಹವಾಗಬಹುದು ಎಂಬ ಉದ್ದೇಶದಿಂದ ತಾನು ಈ ಕೃತ್ಯ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಇದಕ್ಕಾಗಿ ಹಣದ ಆಮಿಷ ತೋರಿಸಿ ಹುಡುಗರನ್ನು ಹೊಂದಿಸಿದ ಶಿಶಕುಮಾರ್, ಜನವರಿ 9ರ ರಾತ್ರಿ 8.30ರ ಸುಮಾರಿಗೆ ವಿನುತಾ ಮನೆಯ ಹತ್ತಿರ ಬರುತ್ತಾನೆ. ಅಗ ವಿನುತಾ ಅಂಗಡಿಗೆ ಹೋಗುವವಳಂತೆ ಹೊರಗೆ ಹೋಗುತ್ತಾಳೆ. ವಿನುತಾ ಹೊರಗೆ ಹೋಗುತ್ತಲೇ ಮನೆಗೆ ನುಗ್ಗಿದ ಶಶಿ ಕುಮಾರ್ ಮತ್ತು ಆತನ ಗ್ಯಾಂಗ್ ಚಾಕುವಿನಿಂದ ವರದರಾಜು ಕತ್ತು ಸೀಳಿ ಹತ್ಯೆ ಮಾಡುತ್ತಾರೆ. ಬಳಿಕ ತನಗೇನೂ ತಿಳಿಯದಂತೆ ವಿನುತಾ ನಾಟಕವಾಡುತ್ತಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ವಿನುತಾ-ಶಶಿಕುಮಾರ್ ನೂರಾರು ಬಾರಿ ಕರೆ ಮಾಡಿ ಮಾತುಕತೆ ನಡೆಸಿರುವ ವಿಚಾರ ತಿಳಿಯುತ್ತದೆ. ಅಲ್ಲದೆ, ಹತ್ಯೆಗೂ ಕೆಲವೇ ನಿಮಿಷಗಳ ಮುನ್ನ ಆಕೆ, ಶಶಿಕುಮಾರ್'ಗೆ ಸಂದೇಶ ಕಳುಹಿಸಿದ ಸಂಗತಿಯೂ ತಿಳಿಯುತ್ತದೆ. ಹೀಗಾಗಿ, ಆಕೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆಕೆ ತಪ್ಪೊಪ್ಪಿಕೊಂಡಳು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement