ಜ.21ರಂದು ವಿಟಿಯು ಘಟಿಕೋತ್ಸವ; ಬೆಂಗಳೂರು ವಿದ್ಯಾರ್ಥಿಗೆ 12 ಚಿನ್ನದ ಪದಕ!

ಇದೇ ಜನವರಿ 21ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಲಿದ್ದು, ಬೆಂಗಳೂರು ಮೂಲದ ವಿದ್ಯಾರ್ಥಿ ಪ್ರಣವ್ ಪಿ ಒಟ್ಟು 12 ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಇದೇ ಜನವರಿ 21ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಲಿದ್ದು, ಬೆಂಗಳೂರು ಮೂಲದ ವಿದ್ಯಾರ್ಥಿ ಪ್ರಣವ್ ಪಿ ಒಟ್ಟು 12 ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವ ಇದೇ 21ರಂದು "ಜ್ಞಾನಸಂಗಮ" ಆವರಣದಲ್ಲಿ ನಡೆಯಲಿದ್ದು, ಈ ವರ್ಷ 71,116 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ  ಮಾಡಲಾಗುತ್ತದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ವಿವಿಯ ಕುಲಪತಿ ಡಾ.ಕರಿಸಿದ್ದಪ್ಪ ಅವರು, "ಭಾರತೀಯ ರಾಷ್ಟ್ರೀಯ ಎಂಜಿನಿಯರಿಂಗ್‌ ಅಕಾಡೆಮಿಯ ಮಾಜಿ ಉಪಾಧ್ಯಕ್ಷ ಡಾ. ಪ್ರೇಮ್‌ ಕೃಷ್ಣ ಅವರು  ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಪದವಿ ಪ್ರದಾನ ಮಾಡುತ್ತಾರೆ ಎಂದು ತಿಳಿಸಿದರು.

ಬೆಂಗಳೂರಿನ ಪ್ರಣವ್‌'ಗೆ 12, ವಿದ್ವತಾಗೆ 7 ಚಿನ್ನದ ಪದಕ
ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಬಿ.ಇ. ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ಎಲ್ಲ ಸೆಮಿಸ್ಟರ್‌'ಗಳಲ್ಲೂ ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ರ‍್ಯಾಂಕ್‌ ಪಡೆದ ಪಿ. ಪ್ರಣವ್‌ 12 ಚಿನ್ನದ    ಪದಕಗಳನ್ನು ಪಡೆದಿದ್ದರೆ, ಬೆಂಗಳೂರು ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಬಿ.ಇ. ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಎಂ.ವಿ. ವಿದ್ವತಾ 7 ಚಿನ್ನದ ಪದಕ ಪಡೆದಿದ್ದಾರೆ.  ಇದೇ ಸಂಸ್ಥೆಯ ಬಿ.ಇ. ಎಲೆಕ್ಟ್ರಾನಿಕ್ಸ್  ಅಂಡ್ ಕಮ್ಯುನಿಕೇಷನ್‌ ವಿಭಾಗದ ಆರ್‌. ಮಮತಾ 5 ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಪದಕ ಪಟ್ಟಿಯಲ್ಲಿ ಕ್ರಮವಾಗಿ 2 ಹಾಗೂ 3ನೇ ಸ್ಥಾನ ಗಳಿಸಿದ್ದಾರೆ.

ಬಿ.ಇ ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್‌'ನಲ್ಲಿ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಆರ್. ಮಮತಾ, ಬಿ.ಇ. ಮೆಕ್ಯಾನಿಕಲ್ ಎಂಜಿನಿಯರಿಂಗ್‌'ನಲ್ಲಿ ಗುಬ್ಬಿಯ ಚನ್ನಬಸವೇಶ್ವರ ತಾಂತ್ರಿಕ ಸಂಸ್ಥೆಯ ಪ್ರವೇಶ್‌ಕುಮಾರ್‌  ಯಾದವ್‌, ಬಿ.ಇ ಎಲೆಕ್ಟ್ರಿಕಲ್‌ ಹಾಗೂ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಬಿಎಂಎಸ್‌ ತಾಂತ್ರಿಕ ಸಂಸ್ಥೆಯ ಆರ್. ಶ್ವೇತಾ ಅವರು ಪ್ರಥಮ ರ‍್ಯಾಂಕ್‌ನೊಂದಿಗೆ ತಲಾ 5 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಬೆಂಗಳೂರಿನ ದಯಾನಂದ ಸಾಗರ ಎಂಜಿನಿಯರಿಂಗ್ ಕಾಲೇಜು ವಿವಿಧ ವಿಭಾಗಗಳಲ್ಲಿ ಒಟ್ಟು 32 ರ‍್ಯಾಂಕ್‌'ಗಳನ್ನು ಪಡೆಯುವ ಮೂಲಕ ರ‍್ಯಾಂಕ್‌ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com