8ನೇ ತರಗತಿ ಮಕ್ಕಳಿಗೆ 2ನೇ ತರಗತಿ ಪಠ್ಯಪುಸ್ತಕ ಕಬ್ಬಿಣದ ಕಡಲೆ!

ಕರ್ನಾಟಕ ಗ್ರಾಮೀಣ ಪ್ರದೇಶದ 8ನೇ ತರಗತಿಯ ಹಲವು ಮಕ್ಕಳಿಗೆ 2ನೇ ತರಗತಿಯ ಪಠ್ಯಪುಸ್ತಕವನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ಗ್ರಾಮೀಣ  ಪ್ರದೇಶದ 8ನೇ ತರಗತಿಯ ಹಲವು ಮಕ್ಕಳಿಗೆ 2ನೇ ತರಗತಿಯ ಪಠ್ಯಪುಸ್ತಕವನ್ನು ಓದಲು ಸಾಧ್ಯವಾಗುತ್ತಿಲ್ಲ. ಇದು ಪ್ರಥಮ್ ಎಜ್ಯುಕೇಶನ ಫೌಂಡೇಶನ್ ಎಂಬ ಎನ್ ಜಿಒ ಕಳೆದ ವರ್ಷ ನಡೆಸಿದ ಶಿಕ್ಷಣ ವರದಿಯ ವಾರ್ಷಿಕ ಸ್ಥಿತಿಯಲ್ಲಿ(ಎಎಸ್ಇಆರ್) ಬಹಿರಂಗಗೊಂಡಿದೆ. ಈ ವರದಿ ಮೊನ್ನೆ ಬಿಡುಗಡೆಯಾಗಿದೆ. 
ಫೌಂಡೇಶನ್ ನ ಸುಮಾರು 25,000 ಕಾರ್ಯಕರ್ತರು 589 ಜಿಲ್ಲೆಗಳಲ್ಲಿ 17,473 ಗ್ರಾಮಗಳಲ್ಲಿ, 3,50,232 ಮನೆಗಳಲ್ಲಿ ಮತ್ತು 5,62,305 ಮಕ್ಕಳ ಮೇಲೆ ಅಧ್ಯಯನ ನಡೆಸಿದ್ದಾರೆ. 
ಸಮೀಕ್ಷೆ ಪ್ರಕಾರ, ಸರ್ಕಾರಿ ಶಾಲೆಗಳ 8ನೇ ತರಗತಿಯಲ್ಲಿ ಓದುತ್ತಿರುವ ಶೇಕಡಾ 69.7 ಮಕ್ಕಳು ಮತ್ತು ಶೇಕಡಾ 71.2 ಖಾಸಗಿ ಶಾಲೆಯಲ್ಲಿ ಅಧ್ಯಯನ ನಡೆಸುತ್ತಿರುವ ಮಕ್ಕಳು 2ನೇ ತರಗತಿಯ ಪುಸ್ತಕಗಳನ್ನು ಓದುತ್ತಾರೆ. ಇದು 2014ರಲ್ಲಿ ಕ್ರಮವಾಗಿ ಶೇಕಡಾ 70.1 ಮತ್ತು ಶೇಕಡಾ 72.2ರಷ್ಟಿತ್ತು.
2005ರಿಂದ ಪ್ರಥಮ್ ಫೌಂಡೇಶನ್ ಸಮೀಕ್ಷೆ ನಡೆಸುತ್ತಾ ಬಂದಿದ್ದು ದೇಶಾದ್ಯಂತ 3ರಿಂದ 16 ವರ್ಷದವರೆಗಿನ ಮಕ್ಕಳನ್ನು ಸಮೀಕ್ಷೆಗೊಳಪಡಿಸುತ್ತದೆ.
ಕರ್ನಾಟಕದಲ್ಲಿ 5ನೇ ತರಗತಿ ಮಕ್ಕಳಲ್ಲಿ ಸರ್ಕಾರಿ ಶಾಲೆಗಳ ಶೇಕಡಾ 41.9 ಮತ್ತು ಖಾಸಗಿ ಶಾಲೆಗಳ ಶೇಕಡಾ 42.8 ಮಕ್ಕಳು 2ನೇ ತರಗತಿ ಮಕ್ಕಳ ಪಠ್ಯಪುಸ್ತಕಗಳನ್ನು ಓದಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಮಕ್ಕಳಲ್ಲಿ ಲೆಕ್ಕದ ಸಾಮರ್ಥ್ಯ, ಕೂಡು-ಕಳೆಯುವಿಕೆ, ಭಾಗಾಕಾರ, ಗುಣಾಕಾರ, ಇಂಗ್ಲಿಷ್ ಶಬ್ದಗಳ ಸ್ಪೆಲ್ಲಿಂಗ್ ತಿಳಿದಿರುವಿಕೆ ಬಗ್ಗೆ ಕೂಡ ಪ್ರಥಮ್ ಫೌಂಡೇಶನ್ ಅಧ್ಯಯನ ನಡೆಸಿದೆ. ಒಟ್ಟಾರೆಯಾಗಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.
ಇನ್ನೊಂದು ಕಂಡುಬಂದ ಅಂಶವೆಂದರೆ ಶೇಕಡಾ 50ಕ್ಕಿಂತ ಹೆಚ್ಚು 3ನೇ ತರಗತಿಯಲ್ಲಿ ಓದುವ ಮಕ್ಕಳಿಗೆ 1ನೇ ತರಗತಿಯ ಪಠ್ಯಪುಸ್ತಕಗಳನ್ನು ಓದಲು ಸಾಧ್ಯವಾಗುತ್ತಿಲ್ಲ. ಈ ಪ್ರಮಾಣ ಉತ್ತರ ಪ್ರದೇಶದಲ್ಲಿ ಶೇಕಡಾ 7 ಇದ್ದರೆ ಶಿಕ್ಷಣದಲ್ಲಿ ಮುಂದುವರಿದ ರಾಜ್ಯ ಕೇರಳದಲ್ಲಿ ಶೇಕಡಾ 38, ಹಿಮಾಚಲ ಪ್ರದೇಶದಲ್ಲಿ ಶೇಕಡಾ 45ರಷ್ಟಿದೆ. ತಮಿಳು ನಾಡು, ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಖಾಸಗಿ ಶಾಲೆಗಳ  ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಜಾಣರಿದ್ದಾರೆ ಎಂದು ವರದಿಯಿಂದ ಗೊತ್ತಾಗಿದೆ.
ಇನ್ನು ಶಿಕ್ಷಣ ಹಕ್ಕು ಕಾಯ್ದೆ ಇಡೀ ದೇಶದಲ್ಲಿ ಅಷ್ಟೊಂದು ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿಲ್ಲ ಎಂಬುದು ಕೂಡ ವರದಿಯಿಂದ ತಿಳಿದುಬಂದಿದೆ.
ಕರ್ನಾಟಕದ ಶಾಲೆಗಳ ಕುರಿತ ವರದಿಗೆ ಪ್ರತಿಕ್ರಿಯಿಸಿದ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ,ಸಮೀಕ್ಷೆ ಹೊರಬಂದ ನಂತರ ಇನ್ನಾದರೂ ಸರ್ಕಾರ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಶಿಕ್ಷಕರಿಗೆ ಉಳಿದ ಕೆಲಸಗಳ ಹೊರೆ ಹೊರಿಸುವುದನ್ನು ಬಿಟ್ಟು ಹೆಚ್ಚಿನ ಸಮಯ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com