

ಮಡಿಕೇರಿ: ದಕ್ಷಿಣ ಕೊಡಗು ಜಿಲ್ಲೆಯ ಕಾಫಿ ತೋಟವೊಂದರ ಕಾರ್ಮಿಕನ ಮೇಲೆ ದಾಳಿ ಮಾಡಿದ್ದ 8 ವರ್ಷ ಪ್ರಾಯದ ಗಂಡು ಹುಲಿ ಇದೀಗ ಶವವಾಗಿ ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ ದಂಡೆಯಲ್ಲಿ ಪತ್ತೆಯಾಗಿದೆ. ಇದರಿಂದಾಗಿ ಕಳೆದ 23 ದಿನಗಳಲ್ಲಿ 5 ಹುಲಿಗಳು ದುರ್ಮರಣವನ್ನಪ್ಪಿದೆ.
ನಂದಿ ದಂಡೆಯಲ್ಲಿ ಶವವಾಗಿ ಕಂಡುಬಂದಿರುವ ಈ ಹುಲಿಯ ಮುಖದಲ್ಲಿ ಗಂಭೀರವಾದ ಗಾಯಗಳಾಗಿರುವುದು ಕಂಡು ಬಂದಿದ್ದು, ಕೊಳೆತ ಸ್ಥಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಲಿ ಸತ್ತು ಹಲವು ದಿನಗಳಾಗಿದ್ದು ವಾಸನೆ ಬರುತ್ತಿದ್ದರಿಂದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಶು ವೈದ್ಯರು ಕಾದಾಟದಲ್ಲಿ ಹುಲಿ ಗಾಯಗೊಂಡು ಮೃತಪಟ್ಟಿದೆ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಾಗರಹೊಳೆ ಉದ್ಯಾನವನದಿಂದ ತಪ್ಪಿಸಿಕೊಂಡಿದ್ದ ಈ ಹುಲಿ ಬಾಳೆಲೆಯಲ್ಲಿ ಜಾನುವಾರುವೊಂದನ್ನು ಹಿಡಿಯಲು ಮುಂದಾಗಿತ್ತು. ಈ ವೇಳೆ ಸ್ಥಳದಲ್ಲಿದ್ದ ಕಾರ್ಮಿಕನೊಬ್ಬನ ಮೇಲೆ ದಾಳಿ ಮಾಡಿತ್ತು. ಇದಾದ ಬಳಿಕ ಹುಲಿ ಕಣ್ಮರೆಯಾಗಿದ್ದ ಈ ಹುಲಿ ಮುಳ್ಳುಹಂದಿಯನ್ನು ಬೇಟೆಯಾಡಿ ತಿಂದಿದೆ. ಈ ವೇಲೆ ಮುಳ್ಳು ಹಂದಿಯ ಮುಳ್ಳುಗಳು ಹುಲಿಯ ಮುಖಕ್ಕೆ ಚುಚ್ಚಿದ್ದು ಮುಖದಲ್ಲಿ ತೀವ್ರ ಗಾಯಗಳಾಗಿರುವುದು ಕಂಡುಬಂದಿದೆ.