ಟಿಕೆಟ್ ಕಾಯ್ದಿರಿಸಿದ್ದರೂ ಸೀಟ್'ಗೆ ನಿರಾಕರಣೆ: ಕೆಎಸ್ಆರ್'ಟಿಸಿಗೆ ರೂ, 10,000 ದಂಡ

ಟಿಕೆಟ್ ಕಾಯ್ದಿರಿಸಿದ್ದರೂ ಸೀಟ್ ನೀಡಲು ನೀರಾಕರಿಸಿ ವ್ಯಕ್ತಿಯೊಬ್ಬರಿಗೆ ಸಹ ಪ್ರಯಾಣಿಕರ ಎದುರು ಅವಮಾನಿಸಿದ್ದ ಕಾರಣಕ್ಕೆ ಕೆಎಸ್ಆರ್'ಟಿಸಿಗೆ ಗ್ರಾಹಕರ ವೇದಿಕೆ ರೂ. 10,000 ದಂಡವನ್ನು ವಿಧಿಸಿದೆ...
ಕೆಎಸ್ಆರ್'ಟಿಸಿ
ಕೆಎಸ್ಆರ್'ಟಿಸಿ

ಬೆಂಗಳೂರು: ಟಿಕೆಟ್ ಕಾಯ್ದಿರಿಸಿದ್ದರೂ ಸೀಟ್ ನೀಡಲು ನೀರಾಕರಿಸಿ ವ್ಯಕ್ತಿಯೊಬ್ಬರಿಗೆ ಸಹ ಪ್ರಯಾಣಿಕರ ಎದುರು ಅವಮಾನಿಸಿದ್ದ ಕಾರಣಕ್ಕೆ ಕೆಎಸ್ಆರ್'ಟಿಸಿಗೆ ಗ್ರಾಹಕರ ವೇದಿಕೆ ರೂ. 10,000 ದಂಡವನ್ನು ವಿಧಿಸಿದೆ.

ಮುನೇಶ್ವರನಗರದ ನಿವಾಸಿಯಾಗಿರುವ ಜಿ.ಎಂ. ಪಂಚಾಕ್ಷರಿ ಎಂಬುವವರು 2012ರ ಅಕ್ಟೋಬರ್ 12 ರಂದು ಬೆಂಗಳೂರಿನಿಂದ ತಿರುಪತಿಗೆ ಹೋಗುವ ಸಲುವಾಗಿ  ಎಂ/ಎಸ್ ತೋರಣ ಎಂಟರ್'ಪ್ರೈಸಸ್ ಗೆ ಸೇರಿದ ಬಸ್ ವೊಂದರಲ್ಲಿ ಪತ್ನಿ, ಇಬ್ಬರು ಮಕ್ಕಳಿಗಾಗಿ ನಾಲ್ಕು ಟಿಕೆಟ್ ಗಳನ್ನು ಕಾಯ್ದಿರಿಸಿದ್ದರು. ರೂ.744 ಹಣವನ್ನು ನೀಡಿ ಟಿಕೆಟ್ ಗಳನ್ನು ಬುಕ್ ಮಾಡಿದ್ದರು. ಇದರಂತೆ ಬಸ್ ನ 18, 19, 20 ಮತ್ತು 21ನೇ ಸೀಟ್ ಗಳನ್ನು ನೀಡಲಾಗಿತ್ತು. ಅದೇ ದಿನದಂದು ಮೆಜೆಸ್ಟಿಕ್ ನಿಂದ ರಾತ್ರಿ 11.08ಕ್ಕೆ ಬಸ್ ಹೊರಡುತ್ತಿತ್ತು.

ಟಿಕೆಟ್ ಕಾಯ್ದಿರಿಸಿದಂತೆ ಪಂಚಾಕ್ಷರಿಯವರು ಕುಟುಂಬ ಸದಸ್ಯರೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಟಿಕೆಟ್ ಗಳನ್ನು ಪರಿಶೀಲಿಸಿರುವ ಬಸ್ ನಿರ್ವಾಹಕ ಈ ಟಿಕೆಟ್ ಗಳು ಕೆಎಸ್ಆರ್ ಟಿಸಿಗೆ ಸಂಬಂಧಿಸಿದ್ದಲ್ಲ ಎಂದು ಹೇಳಿ ಬಸ್ ಹತ್ತದಂತೆ ಸೂಚಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಸಾಕಷ್ಟು ವಾಗ್ವಾದಗಳು ನಡೆದಿವೆ. ನಂತರ ಯಾವುದೇ ಆಯ್ಕೆ ಇಲ್ಲದೆ ಪಂಚಾಕ್ಷರಿಯವರು ಮತ್ತೆ ರೂ, 764 ಹಣವನ್ನು ನೀಡಿ ಬೇರೊಂದು ಬಸ್ ನಿಂದ ತಮ್ಮ ಪ್ರಯಾಣವನ್ನು ಬೆಳೆಸಿದ್ದಾರೆ.

ನಂತರ ಗ್ರಾಹಕರ ವೇದಿಕೆಯ ಮೆಟ್ಟಿಲು ಹತ್ತಿದ ಪಂಚಾಕ್ಷರಿಯವರು ಕೆಎಸ್ಆರ್ ಟಿಸಿ ವಿರುದ್ಧ ದೂರು ದಾಖಲಿಸಿದ್ದಾರೆ. ಇತರೆ ಪ್ರಯಾಣಿಕರ ಎದುರು ಕೆಎಸ್ಆರ್ ಟಿಸಿ ತಮಗೆ ಅವಮಾನ ಮಾಡಿದೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿದ್ದ ಕೆಎಸ್ಆರ್ ಟಿಸಿ, ಟಿಕೆಟ್ ಗಳನ್ನು ಖಾಸಗಿ ಫ್ರಾಂಚೈಸಿಗಳು ಕಾಯ್ದಿರಿಸಿದ್ದರು. ಕೆಲ ತಾಂತ್ರಿಕ ದೋಷಗಳಿಂದಾಗಿ ಬುಕ್ ಮಾಡಿದ ಕೇವಲ ನಾಲ್ಕು ನಿಮಿಷಗಳಲ್ಲಿ ಟಿಕೆಟ್ ಗಳನ್ನು ರದ್ದು ಮಾಡಲಾಗಿತ್ತು. ಇದರಲ್ಲಿ ನಮ್ಮ ದುರುದ್ದೇಶವಿರಲಿಲ್ಲ ಎಂದು ಹೇಳಿತ್ತು.

ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ಗ್ರಾಹಕರ ವೇದಿಕೆ ಅಧ್ಯಕ್ಷ ಟಿ.ಶೋಭಾದೇವಿ ಮತ್ತು ಸದಸ್ಯೆ ವಿ. ಅನುರಾಧ ಅವರು, ತಾಂತ್ರಿಕ ದೋಷಗಳ ಕಾರಣಗಳನ್ನು ನೀಡಿ ಗ್ರಾಹಕ ಮೇಲೆ ಜವಾಬ್ದಾರಿಯನ್ನು ಹಾಕುವಂತಿಲ್ಲ. ಟಿಕೆಟ್ ರದ್ದು ಮಾಡಿದ ಬಳಿಕ ಪ್ರಯಾಣಿಕರಿಗೆ ಅವರ ಹಣವನ್ನು ಮರುಪಾವತಿ ಮಾಡುವುದು ಕೆಎಸ್ಆರ್ ಟಿಸಿಯ ಜವಾಬ್ದಾರಿಯಾಗಿತ್ತದೆ. ಹೀಗಾಗಿ ಕೆಎಸ್ಆರ್ ಟಿಸಿ ದೂರುದಾರರಿಗೆ ಅವರ ಟಿಕೆಟ್ ಹಣವನ್ನು ಮರುಪಾವತಿ ಮಾಡಬೇಕಿದೆ ಹಾಗೂ ದಂಡವಾಗಿ ಗ್ರಾಹಕನಿಗೆ ರು.8000, ಮಾನಸಿಕ ದುಃಖಕ್ಕಾಗಿ ರೂ.2000 ಹಣವನ್ನು ನೀಡಬೇಕೆಂದು ಸೂಚಿಸಿದ್ದಾರೆ.

ದೂರುದಾರ ಕುಟುಂಬಸ್ಥರೊಂದಿಗೆ ತಾನೂ ಕೂಡ ಪ್ರಯಾಣ ಬೆಳೆಸಲು ನಿರ್ಧರಿಸಿದ್ದ. ಹೀಗಾಗಿ ಟಿಕೆಟ್ ರದ್ದು ಮಾಡುವ ಉದ್ದೇಶ ಆತನಿಗಿರಲಿಲ್ಲ. ಟಿಕೆಟ್ ಕಾಯ್ದಿರಿಸಿದ್ದರೂ ಪ್ರಯಾಣ ಬೆಳಸಲು ಸಾಧ್ಯವಾಗದಿದ್ದಾಗ ವ್ಯಕ್ತಿಗೆ ಆಗುವ ನೋವು ಮತ್ತೊಬ್ಬರಿಗೆ ಅರ್ಥವಾಗುವುದಿಲ್ಲ. ಒಂದು ವೇಳೆ ಆತನ ಬಳಿ ಬೇರೆ ಹಣವಿಲ್ಲದಿದ್ದರೆ, ಆತನ ಪರಿಸ್ಥಿತಿ ಏನಾಗಬೇಕಿತ್ತು. ಆ ಸಮಯದಲ್ಲಿ ಆತನಿಗೆ ಹಣ ಕೊಟ್ಟು ಸಹಾಯ ಮಾಡಲು ಯಾರೂ ಬರುತ್ತಿದ್ದರು?. ತಾಂತ್ರಿಕ ಕಾರಣಗಳನ್ನು ನೀಡಿ ಕೆಎಸ್ಆರ್ ಟಿಸಿ ಪ್ರಯಾಣಿಕರಿಗೆ ಸಮಸ್ಯೆಗಳನ್ನು ನೀಡಬಾರದು. ಬೇಜವಾಬ್ದಾರಿಯುತವಾಗಿ ನಡೆದುಕೊಂಡ ಅಧಿಕಾರಿಗಳ ವಿರುದ್ಧ ಕೆಎಸ್ಆರ್ ಟಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಹಕರ ವೇದಿಕೆ ವಿಚಾರಣೆ ವೇಳೆ ಕೆಎಸ್ಆರ್ ಟಿಸಿಗೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com