ಐಐಎಸ್'ಸಿ ಭದ್ರತಾ ಸಿಬ್ಬಂದಿಗಳನ್ನು ಕಟ್ಟಿಹಾಕಿ ಶ್ರೀಗಂಧದ ಮರಗಳನ್ನು ಕದ್ದೊಯ್ದ ಕಳ್ಳರು

ನಗರದಲ್ಲಿ ಶ್ರೀಗಂಧ ಮರಗಳ ಕಳ್ಳತನ ಎಗ್ಗಿಲ್ಲದೆ ಸಾಗುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ ನಗರದ ಸಿ.ವಿ.ರಾಮನ್ ರಸ್ತೆಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯೊಂದರಲ್ಲಿ ಘಟನೆಯೊಂದು ನಡೆದಿದೆ...
ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು
Updated on

ಬೆಂಗಳೂರು: ನಗರದಲ್ಲಿ ಶ್ರೀಗಂಧ ಮರಗಳ ಕಳ್ಳತನ ಎಗ್ಗಿಲ್ಲದೆ ಸಾಗುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ ನಗರದ ಸಿ.ವಿ.ರಾಮನ್ ರಸ್ತೆಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯೊಂದರಲ್ಲಿ ಘಟನೆಯೊಂದು ನಡೆದಿದೆ.

ಅನಾಮಧೇಯ ಕಳ್ಳರ ಗುಂಪೊಂದು ಭಾರತೀಯ ವಿಜ್ಞಾನ ಸಂಸ್ಥೆಯ ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ಮಾಡಿದ್ದು, ಭದ್ರತಾ ಸಿಬ್ಬಂದಿಗಳನ್ನು ಕಟ್ಟಿ ಹಾಕಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಸಿ.ವಿ. ರಾಮನ್ ರಸ್ತೆಯ ಅರಣ್ಯ ಭವನದ ಹತ್ತಿರದಲ್ಲೇ ಇರುವ ಭಾರತೀಯ ವಿಜ್ಞಾನ ಸಂಸ್ಥೆಯ ಬಳಿ ಬಂದಿರುವ ದುಷ್ಕರ್ಮಿಗಳ ತಂಡವೊಂದು ಸ್ಥಳದಲ್ಲಿದ್ದ ಇಬ್ಬರು ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿಮಾಡಿದ್ದಾರೆ. ನಂತರ ಇಬ್ಬರನ್ನು ಕಟ್ಟಿ ಹಾಕಿ ಸ್ಥಳದಲ್ಲಿದ್ದ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ್ದಾರೆಂದು ತಿಳಿದುಬಂದಿದೆ.

ತೀವ್ರ ಚಳಿಯಿದ್ದರಿಂದಾಗಿ ಚಳಿಯನ್ನು ಕಡಿಮೆ ಮಾಡಿಕೊಳ್ಳಲು ಬೆಂಕಿ ಹಚ್ಚಿ ಕುಳಿತುಕೊಂಡಿದ್ದರು. ಈ ವೇಳೆ ಒಳಗೆ ಬಂದಿರುವ ಕಳ್ಳರು ಸಿಬ್ಬಂದಿಗಳ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೆ, ಇಬ್ಬರಿಗೂ ಬೆದರಿಕೆ ಹಾಕಿ ಕಟ್ಟಿಹಾಕಿದ್ದಾರೆ. ನಂತರ ಶ್ರೀಗಂಧದ ಮರಗಳನ್ನು ಕಡಿದು ಹೊತ್ತೊಯ್ದಿದ್ದಾರೆ. ಕಳ್ಳರು ಮರ ಕಡಿಯುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿಗಳು ಅವರ ಕಣ್ಣು ತಪ್ಪಿಸಿ ಓಡಿಬಂದಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನೂ ಮೂಲಗಳು ತಿಳಿಸಿರುವ ಪ್ರಕಾರ, ಈ ವರೆಗೂ ನಾಲ್ಕು ಘಟನೆಗಳು ನಡೆದಿದ್ದರೂ, ಸೂಕ್ತ ಭದ್ರತೆ ಕೈಗೊಳ್ಳುವುದಕ್ಕೆ ಐಐಎಸ್ ಸಿ ನಿರಾಕರಣೆ ತೋರುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಸೂಕ್ಷ್ಮ ಪ್ರದೇಶಗಳಲ್ಲೂ ಸಿಸಿಟಿವಿಗಳಿಲ್ಲ ಎಂಬುದು ಇದೀಗ ಬೆಳಕಿಗೆ ಬಂದಿದ್ದು, ಜೀವಭಯದಲ್ಲಿಯೇ ಅಲ್ಲಿನ ಭದ್ರತಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ಇದೇ ರೀತಿಯಲ್ಲಿಯೇ ಇನ್ನು ಕೆಲ ಪ್ರಕರಣಗಳಿದ್ದೂ, ಆ ಪ್ರಕರಣಗಳ ತನಿಖೆ ಕೂಡ ಪ್ರಗತಿಯಲ್ಲಿದೆ. ಐಐಎಸ್ ಸಿ ಆವರಣದಲ್ಲಿ ಭದ್ರತಾ ಕ್ರಮಗಳ ಕೊರತೆಯಿರುವುದು ಕಂಡು ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದೇವೆ. ಭದ್ರತಾ ಕ್ರಮ ಕೈಗೊಳ್ಳಲು ಇದೀಗ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ, ಭದ್ರತಾ ಸಂಸ್ಥೆಗಳ ಕಡೆಯಿಂದ ಸಹಾಯ ಕೇಳುವ ಬದಲು ಕೇಂದ್ರ ಸರ್ಕಾರದ ಕಡೆಯಿಂದ ಸೇನಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಐಐಎಸ್ ಸಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಳ್ಳತನ ಮಾಡಿರುವವರು ತಮಿಳುನಾಡು ಮೂಲದವರೆಂದು ಶಂಕಿಸಲಾಗಿದ್ದು, ಆರೋಪಿಗಳು ಸಾಕಷ್ಟು ಅಪರಾಧ ಕೃತ್ಯಗಳನ್ನು ಭಾಗಿಯಾಗಿರುವುದು ಕಂಡುಬಂದಿದೆ. ಸಾಕಷ್ಟು ಪೂರ್ವ ಸಿದ್ಧತೆಗಳೊಂದಿಗೆಯೇ ಕಳ್ಳರು ಈ ಕೃತ್ಯವೆಸಗಿದ್ದಾರೆ. ಈಗಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳನ್ನು ದೊರಕಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಪ್ರಕರಣ ಸಂಬಂಧ ಐಐಎಸ್ ಸಿ ನಿರ್ದೇಶಕ ಅನುರಾಗ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, ಘಟನೆ ಬಗ್ಗೆ ಮಾತನಾಡಲು ನಾನು ಸೂಕ್ತ ವ್ಯಕ್ತಿಯಲ್ಲ. ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದ ಭದ್ರತಾ ಕ್ರಮಗಳನ್ನು ನೋಡಿಕೊಳ್ಳು ಅಧಿಕಾರಿಗಳಿದ್ದು, ಅವರ ಬಳಿ ಪ್ರತಿಕ್ರಿಯೆ ಪಡೆಯುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com