ರಾಯಚೂರು: ನಾಲ್ಕು ಕಾಲುಗಳುಳ್ಳ ಶಿಶು ಜನನ!

ನಾಲ್ಕು ಕಾಲು ಮತ್ತು ಎರಡು ಪುರುಷಾಂಗಗಳಿರುವ ವಿಚಿತ್ರ ಮಗುವೊಂದು ರಾಯಚೂರಿನಲ್ಲಿ ಜನಿಸಿದೆ.
ನಾಲ್ಕು ಕಾಲಿನ ವಿಚಿತ್ರ ಮಗು
ನಾಲ್ಕು ಕಾಲಿನ ವಿಚಿತ್ರ ಮಗು

ರಾಯಚೂರು: ನಾಲ್ಕು ಕಾಲು ಮತ್ತು ಎರಡು ಪುರುಷಾಂಗಗಳಿರುವ ವಿಚಿತ್ರ ಮಗುವೊಂದು ರಾಯಚೂರಿನಲ್ಲಿ ಜನಿಸಿದೆ.

ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಢೇಸೂಗೂರು ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ನಾಲ್ಕು ಕಾಲಿನ ಮತ್ತು ಎರಡು ಪುರುಷಾಂಗವಿರುವ ವಿಚಿತ್ರ ಮಗುವೊಂದು ಜನಿಸಿದೆ. ಸಿಂಧನೂರು  ತಾಲೂಕಿನ ಪುಲದಿನ್ನಿ ಗ್ರಾಮದ ನಿವಾಸಿಗಳಾದ ಲಲಿತಮ್ಮ (23 ವರ್ಷ)ಗಂಡ ಚನ್ನಬಸವ (26 ವರ್ಷ) ಉಪ್ಪಾಳ ಎಂಬ ದಂಪತಿಗೆ ಈ ವಿಚಿತ್ರ ಮಗು ಜನಿಸಿದ್ದು, ಮಗುವಿಗೆ ಎರಡು ಕೈ, ನಾಲ್ಕು ಕಾಲು, ಎರಡು ಜನಾಂಗಗಳಿದ್ದು,  ಮಲಮೂತ್ರ ವಿಸರ್ಜನೆ ಮಾಡುವ ಜಾಗ ಬೇರೆ ಕಡೆಯಿದೆ.

ಈ ಕುರಿತು ದಢೇಸೂಗೂರು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ವಿರುಪಾಕ್ಷಪ್ಪ ಅವರು ಮಾತನಾಡಿ, ಶನಿವಾರ ಬೆಳಗ್ಗೆ ಸುಮಾರು 4.23ರ ಹೊತ್ತಿನಲ್ಲಿ ಮಗು ಜನಿಸಿದ್ದು, ರಕ್ತ ಸಂಬಂಧಿಕರಲ್ಲಿ ಮದುವೆಯಾದರೆ, ಇಂತಹ ಮಗು  ಜನಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದೂ ತಿಳಿಸಿದರು.

ಪ್ರಸ್ತುತ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಇರಿಸಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಮ್ಸ್ ಆಸ್ಪತ್ರೆ ವೈದ್ಯರು  ಮಗು ನಾಲ್ಕು ಕಾಲು ಹೊಂದಿದೆಯಾದರೂ ಆರೋಗ್ಯವಾಗಿದೆ. ಮಗುವಿನ ತಾಯಿ ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ವಿಮ್ಸ್ ಆಸ್ಪತ್ರೆಯ ನುರಿತ ವೈದ್ಯ ದಿವಾಗರ್ ಗಡ್ಡಿ ಅವರು ಮಗುವಿನ ಚಿಕಿತ್ಸೆಯ ಮೇಲ್ವಿಚಾರಣೆ  ನಡೆಸುತ್ತಿದ್ದು, ನುರಿತ ಸರ್ಜನ್ ಗಳು ಮಗುವಿನ ಕುರಿತಂತೆ ಅಧ್ಯಯನ ನಡೆಸುತ್ತಿದ್ದಾರೆ. ಇದು ತುಂಬ ಕಠಿಣ ಕೇಸ್ ಆಗಿದ್ದು, ಶೀಘ್ರದಲ್ಲೇ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವಿಚಿತ್ರ ಮಗುವಿನ ಜನನ ಕುರಿತಂತೆ ಮಗುವಿನ ಪೋಷಕರನ್ನು ವಿಚಾರಿಸಿದಾಗ, ಗ್ರಾಮಕ್ಕೆ ಆಗಮಿಸಿದಾಗ ನೋವು ಕಾಣಿಸಿಕೊಂಡ ಕಾರಣ ದಢೇಸೂಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆರಿಗೆ ಮಾಡಲಾಯಿತು. ಕಾಲ ಕಾಲಕ್ಕೆ  ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಗು ಸಾಮಾನ್ಯ ಮತ್ತು ಆರೋಗ್ಯವಾಗಿರುವುದಾಗಿ ವರದಿ ನೀಡಲಾಗಿತ್ತು. ಆದರೆ ಇದೀಗ ವಿಚಿತ್ರವಾದ ಮಗು ಜನಿಸಿದೆ ಎಂದು ಹೇಳಿದ್ದಾರೆ. ಇನ್ನು ಮಗುವಿನ ತಾಯಿ ಲಲಿತಮ್ಮ  ಅವರು ಪ್ರತಿಕ್ರಿಯಿಸಿ ಇದು ದೇವರ ಕೊಟ್ಟ ಉಡುಗೊರೆ ಎಂದು ಹೇಳಿದ್ದಾರೆ.

ಅಂತೆಯೇ ಮಗುವಿನ ಚಿಕಿತ್ಸೆ ಕುರಿತಂತೆ ಮಾತನಾಡಿದ ಅವರು ನಾವು ಬಡವರು, ನಮ್ಮ ಕೈಯಲ್ಲಿ ದುಬಾರಿ ಚಿಕಿತ್ಸೆ ಕೊಡಿಸಲು ಸಾಧ್ಯವಿಲ್ಲ. ದೇವರ ದಯೆಯಿಂದ ಮಗು ಸಾಮಾನ್ಯರಂತೆ ಆಗಲಿದೆ ಎಂದು ಹೇಳಿದ್ದಾರೆ.

ಈ ವಿಚಿತ್ರ ಮಗುವನ್ನು ನೋಡಲು ಗ್ರಾಮದ ನೂರಾರು ಜನ ಆಸ್ಪತ್ರೆಯ ಮುಂದೆ ಜಮಾವಣೆಗೊಂಡಿದ್ದು, ಜನರನ್ನು ನಿಯಂತ್ರಿಸಲು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಹರಸಾಹಸಪಡಬೇಕಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com