
ಶಿವಮೊಗ್ಗ: ಕರ್ನಾಟಕದ ಅತ್ಯಂತ ಹಿರಿಯ ಆನೆ (93 ವರ್ಷ) ಇಂದಿರಾ ಸಕ್ರೇಬೈಲು ಆನೆ ಶಿಬಿರದಲ್ಲಿ ಸೋಮವಾರ ಕೊನೆಯುಸಿರೆಳೆದಿದೆ.
ವಯ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಇಂದಿರಾ ಸೋಮವಾರ ಸಾವನ್ನಪ್ಪಿದ್ದು, ಸಕ್ರೇ ಬೈಲು ಆನೆ ಶಿಬಿರದ ಬಳಿ ಇರುವ ಸೇನಾ ಶಿಬಿರದ ಬಳಿ ಆನೆ ಮೃತಪಟ್ಟಿದೆ. ಆನೆಯನ್ನು ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಳೆದ ಹಲವು ದಿನಗಳಿಂದ ಜೀರ್ಣ ಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದ ಇಂದಿರಾಗೆ ಬೇಯಿಸಿದ ಆಹಾರವನ್ನು ನೀಡಲಾಗುತ್ತಿತ್ತು. ಆದರೆ ಮೂರು ದಿನಗಳಿಂದ ಆಹಾರ ತ್ಯಜಿಸಿದ್ದ ಇಂದಿರಾ ಆನೆ ಸಂಪೂರ್ಣ ಕೃಶವಾಗಿತ್ತು. ಹೀಗಾಗಿ ಆನೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರಾದರೂ ನಿನ್ನೆ ಆನೆ ಮೃತಪಟ್ಟಿದೆ.
1968ರಲ್ಲಿ ಇಂದಿರಾ ಆನೆಯನ್ನು ಕಾಕನಕೋಟೆಯಲ್ಲಿ ನಡೆದ ಖೆಡ್ಡಾ ಆಪರೇಷನ್ ವೇಳೆ ಸೆರೆ ಹಿಡಿಯಲಾಗಿತ್ತು. ಬಳಿಕ ಆನೆಗೆ ತರಬೇತಿ ನೀಡಿ ಪುಂಡ ಆನೆಗಳನ್ನು ಬಂಧಿಸುವ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಸಕ್ರೇ ಬೈಲು ಆನೆ ಶಿಬಿರಕ್ಕೆ ಬರುವ ಬಹುತೇಕ ಎಲ್ಲ ಪುಂಡ ಆನೆಗಳನ್ನು ಬಂಧಿಸುವಲ್ಲಿ ಮತ್ತು ಅವುಗಳನ್ನು ಪಳಗಿಸುವಲ್ಲಿ ಇಂದಿರಾ ಪ್ರಮುಖ ಪಾತ್ರ ವಹಿಸಿತ್ತು. ಅಂತೆಯೇ ಅರಣ್ಯ ಇಲಾಖೆಯಲ್ಲೂ ಸೇವೆ ಸಲ್ಲಿಸಿದ್ದ ಇಂದಿರಾ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬಾರಿ ಪ್ರಮಾಣದ ಮರಗಳನ್ನು ತೆರವುಗೊಳಿಸುವಲ್ಲಿ ಇಲಾಖೆಗೆ ನೆರವಾಗಿತ್ತು.
ಇನ್ನು ಇಂದಿರಾ ಆನೆಯ ಸಾವಿನಿಂದಾಗಿ ಅದರ ಮಾವುತ ಜಲೀಲ್ ಅಹ್ಮದ್ ತೀವ್ರ ನೋವು ವ್ಯಕ್ತಪಡಿಸಿದ್ದು, ಇಂದಿರಾ ನಮ್ಮ ಮನೆಯ ಸದಸ್ಯೆಯಂತ್ತಿತ್ತು. ನನ್ನ 20 ವರ್ಷಗಳ ಅವಧಿಯಲ್ಲಿ ಇಂದಿರಾ ಕೋಪಗೊಂಡಿದ್ದನ್ನು ನಾನು ನೋಡಿಲ್ಲ. ಅಷ್ಟು ಸೌಮ್ಯ ಸ್ವಭಾದ ಆನೆಯಾಗಿತ್ತು. ರಾಜ್ಯೋತ್ಸವ ಆಚರಣೆ ಮತ್ತು ಶಿವಮೊಗ್ಗ ದಸಾರ ಆಚರಣೆಯಲ್ಲಿ ಇಂದಿರಾ ಆನೆಯನ್ನು ಕರೆದೊಯುತ್ತಿದ್ದೆ ಎಂದು ಅಹ್ಮದ್ ಹೇಳಿದ್ದಾರೆ.
Advertisement