ಇನ್ನು ಬೆಳಗ್ಗೆ 8 ಗಂಟೆಗೇ ಪದವಿ ಕಾಲೇಜು ಆರಂಭ!

ಇನ್ನು ಮುಂದೆ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಬೆಳಗ್ಗೆ 8 ಗಂಟೆಯಿಂದಲೇ ಪ್ರಾರಂಭವಾಗಲಿದ್ದು, ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ (ಪದವಿ) ನೂತನ ಸು್ತೋಲೆಯೊಂದನ್ನು ಗುರುವಾರ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಪದವಿ ಕಾಲೇಜುಗಳು ಬೆಳಗ್ಗೆ 8 ಗಂಟೆಯಿಂದಲೇ ಪ್ರಾರಂಭವಾಗಲಿದ್ದು, ಈ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ (ಪದವಿ) ನೂತನ ಸು್ತೋಲೆಯೊಂದನ್ನು ಗುರುವಾರ  ಹೊರಡಿಸಿದೆ.

ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ ಪದವಿ ಕಾಲೇಜುಗಳು ಬೇಗ ತರಗತಿಗಳನ್ನು ಆರಂಭಿಸಬೇಕು ಎಂಬುದು ಕಾಲೇಜು ಶಿಕ್ಷಣ ಇಲಾಖೆ (ಪದವಿ) ಆಲೋಚನೆಯಾಗಿದ್ದು, ಇದೇ ಕಾರಣಕ್ಕೆ ಬೆಳಗ್ಗೆ 8 ಗಂಟೆಯಿಂದಲೇ  ಕಾಲೇಜು ಆರಂಭಕ್ಕೆ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಗುರುವಾರ ಸುತ್ತೋಲೆ ಹೊರಡಿಸಿರುವ ಇಲಾಖೆಯ ಆಯುಕ್ತ ಅಜಯ್ ನಾಗಭೂಷಣ್, ರಾಜ್ಯದ ಎಲ್ಲ 412 ಪದವಿ ಅಥವಾ ಪ್ರಥಮ ದರ್ಜೆ  ಕಾಲೇಜುಗಳು ಬೆಳಗ್ಗೆ 8ಕ್ಕೆ, ಈ ಕಾಲೇಜುಗಳಲ್ಲಿನ ಗ್ರಂಥಾಲಯಗಳು ಬೆಳಗ್ಗೆ 10ರಿಂದ ಸಂಜೆ 5.30ರವರೆಗೂ ತೆರೆದಿರಬೇಕು ಎಂದು ಸೂಚಿಸಿದ್ದಾರೆ.

ಸಮಯ ಬದಲಾವಣೆ ಏಕೆ?
ಈವರೆಗೂ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಪದವಿ ಕಾಲೇಜು ತರಗತಿಗಳು ನಡೆಯುತ್ತಿದ್ದವು. ಬೆಳಗ್ಗೆ 8 ಗಂಟೆಗೆ ಆರಂಭವಾದರೆ, ಮಧ್ಯಾಹ್ನ 2ರಿಂದ 2.30ರೊಳಗೆ ಮುಕ್ತಾಯವಾಗಲಿವೆ. ಆಗ ವಿದ್ಯಾರ್ಥಿಗಳು ಗ್ರಂಥಾಲಯ,  ಸಂಶೋಧನಾ ಚಟುವಟಿಕೆ, ಕ್ರೀಡೆ, ಪಾರ್ಟ್​ಟೈಮ್ ಜಾಬ್ ಮತ್ತಿತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಲಿದೆ. ಜತೆಗೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಬ್ಬರಿಗೂ ಕಾಲೇಜಿಗೆ ಬರಲು ಟ್ರಾಫಿಕ್  ಜಾಮ್ ಕಿರಿಕಿರಿ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ಸಮಯ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಕಾರಣಕ್ಕಾಗಿ ಎಲ್ಲ ಕಾಲೇಜುಗಳ ಪ್ರಾಂಶುಪಾಲರು ಟೈಂ ಟೇಬಲ್ ಸಮಿತಿಯಲ್ಲಿ ರ್ಚಚಿಸಿ  ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ಇಲಾಖೆ ನಿರ್ಧಾರಕ್ಕೆ ಬೋಧಕರ ವಿರೋಧ
ಇನ್ನು ಶಿಕ್ಷಣ ಇಲಾಖೆಯ ಸುತ್ತೋಲೆಗೆ ಬೋಧಕರು ವಿರೋಧ ವ್ಯಕ್ತಪಡಿಸುತ್ತಿದ್ದು, ರಾಜ್ಯದಲ್ಲಿರುವ ಬಹುತೇಕ ಪದವಿ ಕಾಲೇಜುಗಳಿಗೆ ಸ್ವಂತ ಕಟ್ಟಡವಿಲ್ಲ. ಬಹುತೇಕ ಕಾಲೇಜುಗಳು ಪಿಯು ಕಾಲೇಜಿನ ಕಟ್ಟಡಗಳಲ್ಲೇ ನಡೆಯುತ್ತಿವೆ.  ಪಾಳಿ ಆಧಾರದ ಮೇಲೆ ತರಗತಿಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ಪದವಿ ತರಗತಿಗಳ ಸಮಯ ಬದಲಾವಣೆ ಮಾಡಿದ್ದಾರೆ ಎಂದು ಉಪನ್ಯಾಸಕರ ವೃಂದ ಆರೋಪಿಸಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರ ಊರಿನಿಂದ  ಬರುವುದರಿಂದ ಬೆಳಗ್ಗೆ 8 ಗಂಟೆಗೆ ಕಾಲೇಜು ತಲುಪಲು ಸಾಧ್ಯವಿಲ್ಲ. ಸಮಯ ಬದಲಾವಣೆ ಮಾಡುವ ಮೊದಲು ಬೋಧಕರ ಅಭಿಪ್ರಾಯ ಕೂಡ ಪಡೆಯಬೇಕಾಗಿತ್ತು. ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಈ  ಸುತ್ತೋಲೆಯನ್ನು ಹಿಂಪಡೆಯಬೇಕು, ಇಲ್ಲವಾದಲ್ಲಿ ಪ್ರತಿಭಟಿಸುತ್ತೇವೆಂದು ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಪ್ರೊ. ಪ್ರಕಾಶ್ ಹೇಳಿದ್ದಾರೆ.

ಉಪನ್ಯಾಸಕಿಯರ ವಸ್ತ್ರಸಂಹಿತೆ ಸುತ್ತೋಲೆ ಹಿಂಪಡೆಯಲು ಸೂಚನೆ
ನಿನ್ನೆಯಷ್ಟೇ ಮೈಸೂರು ವಲಯದ ಜಂಟಿ ನಿರ್ದೇಶಕರು ಹೊರಡಿಸಿದ್ದ ಉಪನ್ಯಾಸಕಿಯರ ವಸ್ತ್ರ ಸಂಹಿತೆ ಸುತ್ತೋಲೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಅಜಯ್ ನಾಗಭೂಷಣ್  ಸ್ಪಷ್ಟನೆ ನೀಡಿದ್ದು, "ಪದವಿ ಕಾಲೇಜು ಉಪನ್ಯಾಸಕರಿಗೆ ಇಲಾಖೆ ಯಾವುದೇ ರೀತಿಯ ವಸ್ತ್ರಸಂಹಿತೆ ಜಾರಿ ಮಾಡಿಲ್ಲ. ಆದರೆ ತರಗತಿಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆಯಷ್ಟೆ. ವಸ್ತ್ರಸಂಹಿತೆ ವಿಚಾರವಾಗಿ ಮೈಸೂರು  ವಲಯ ಜಂಟಿ ನಿರ್ದೇಶಕರು ಹೊರಡಿಸಿರುವ ಸುತ್ತೋಲೆ ಸರಿಯಲ್ಲ. ಅದನ್ನು ಹಿಂಪಡೆಯಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com