ಭೀಕರ ಬರದ ಎಫೆಕ್ಟ್: ಗೋಶಾಲೆಗೆ ಕಳುಹಿಸಿದ್ದ ಮೇವಿಗಾಗಿ ರೈತರ ಕಿತ್ತಾಟ, ವಿಡಿಯೋ ವೈರಲ್

ರಾಸುಗಳಿಗೆ ಮೇವು ಕೊರತೆಯಾಗುತ್ತದೆ ಎಂಬ ಭೀತಿಯಿಂದ ಸ್ಥಳೀಯ ರೈತರು ಸರ್ಕಾರ ಕಳುಹಿಸಿದ್ದ ಮೇವನ್ನು ತಾ ಮುಂದು ನಾಮುಂದು ಎಂದು ತಳ್ಳಾಡಿ ಮೇವು ಬಾಚಿಕೊಂಡು ಹೋಗಿರುವ ಘಟನೆ ಚಿತ್ರದುರ್ಗದ ತುರುವನೂರಿನಲ್ಲಿರುವ ಗೋಶಾಲೆಯಲ್ಲಿ ನಡೆದಿದೆ.
ಮೇವಿಗಾಗಿ ಕಿತ್ತಾಡುತ್ತಿರುವ ಸ್ಥಳೀಯ ರೈತರು
ಮೇವಿಗಾಗಿ ಕಿತ್ತಾಡುತ್ತಿರುವ ಸ್ಥಳೀಯ ರೈತರು

ಚಿತ್ರದುರ್ಗ: ಭೀಕರ ಬರ ರಾಜ್ಯದ ರೈತನನ್ನು ಕಂಗೆಡಿಸಿರುವ ಬೆನ್ನಲ್ಲೇ ಎಲ್ಲಿ ತಮ್ಮ ರಾಸುಗಳಿಗೆ ಮೇವು ಕೊರತೆಯಾಗುತ್ತದೆ ಎಂಬ ಭೀತಿಯಿಂದ ಸ್ಥಳೀಯ ರೈತರು ಸರ್ಕಾರ ಕಳುಹಿಸಿದ್ದ ಮೇವನ್ನು ತಾ ಮುಂದು ನಾಮುಂದು  ಎಂದು ತಳ್ಳಾಡಿ ಮೇವು ಬಾಚಿಕೊಂಡು ಹೋಗಿರುವ ಘಟನೆ ಚಿತ್ರದುರ್ಗದ ತುರುವನೂರಿನಲ್ಲಿರುವ ಗೋಶಾಲೆಯಲ್ಲಿ ನಡೆದಿದೆ.

ರಾಜ್ಯದ ಇತರೆ ಭಾಗಗಳಂತೆಯೇ ಚಿತ್ರದುರ್ಗದಲ್ಲೂ ಸಹ ಭೀಕರ ಬರ ಪರಿಸ್ಥಿತಿ ಇದ್ದು, ರೈತರು ಜಾನುವಾರುಗಳನ್ನು ಸಾಕಲಾಗದೆ ಸರ್ಕಾರ ವಿತರಿಸುವ ಮೇವಿನ ಮೇಲೆ ಅವಲಂಬಿಸಬೇಕಾಗಿದೆ. ಜಿಲ್ಲೆಯ ತುರುವನೂರಿನಲ್ಲಿರುವ  ಗೋಶಾಲೆಯಲ್ಲಿ ಸುತ್ತಮುತ್ತಲ 50 ಹಳ್ಳಿಗಳ ರೈತರು ರಾಸುಗಳನ್ನು ಗೋಶಾಲೆಗೆ ಬಿಟ್ಟಿದ್ದಾರೆ. ಗೋಶಾಲೆಯ ರಾಸುಗಳಿಗಾಗಿ ಸರ್ಕಾರ ಇತ್ತೀಚೆಗೆ ಸರ್ಕಾರ 3 ಟನ್​ ಮೇವು ಕಳುಹಿಸಿತ್ತು. ಆದರೆ ಗೋಶಾಲೆಗೆ ಮೇವು  ರವಾನೆಯಾಗುತ್ತಿದ್ದಂತೆಯೇ ಗೋಶಾಲೆಯತ್ತ ಮುಗಿಬಿದ್ದ ರೈತರು ತಾಮುಂದು ನಾಮುಂದು ಎಂದು ಕೈಗೆ ಸಿಕ್ಕಷ್ಟು ಮೇವನ್ನು ಬಾಚಿಕೊಂಡು ಹೋಗಿದ್ದಾರೆ.

5-6 ಸಾವಿರ ಜಾನುವಾರುಗಳಿರುವ ಗೋಶಾಲೆಗೆ ಕೇವಲ 3 ಟನ್​ ಮೇವು ಕಳುಹಿಸಿದ್ದ ಕಾರಣ ರೈತರು ಮೇವು ಪಡೆಯಲು ಪೈಪೋಟಿ ನಡೆಸಿದ ದೃಶ್ಯ ಮನಕಲಕುವಂತಿತ್ತು. ಈ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆ  ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಮಾಧ್ಯಮಗಳಲ್ಲೂ ಈ ವಿಡಿಯೋ ಪ್ರಸಾರವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ತಹಶೀಲ್ದಾರ್ ಒಬ್ಬರು ಗೋಶಾಲೆಗಳಲ್ಲಿ ಮೇವಿನ ಕೊರತೆಯುಂಟಾಗಿಲ್ಲ.  ನಿತ್ಯ ಪ್ರತಿಯೊಂದು ರಾಸುಗಳಿಗೂ 7 ಕೆಜಿ ಮೇವು ನೀಡಲಾಗುತ್ತಿದೆ.

ಆದರೆ ರೈತರು ತಮ್ಮ ರಾಸುಗಳಿಗೆ ಎಲ್ಲಿ ಮೇವಿನ ಕೊರತೆಯುಂಟಾಗುತ್ತದೆಯೋ ಎಂದು ಹೆದರಿ ಮೇವನ್ನು ಬಾಚಿಕೊಂಡು ಹೋಗಿದ್ದಾರೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಅಂತೆಯೇ ಆಂಧ್ರ  ಪ್ರದೇಶದಿಂದ ರಾಜ್ಯಕ್ಕೆ ಮೇವನ್ನು ತರಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಬಾಕಿ ವೇತನ ಪಾವತಿ ಮಾಡಿಲ್ಲ. ಹೀಗಾಗಿ ಆಂಧ್ರ ಪ್ರದೇಶದ ಮೇವು ವರ್ತಕರು ಮೇವು ರವಾನೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ತಮ್ಮ  ಸಮಸ್ಯೆ ತೋಡಿಕೊಂಡಿದ್ದಾರೆ. ಸರ್ಕಾರ ಮೇವು ವರ್ತಕರಿಗೆ ಹಣ ಪಾವತಿ ಮಾಡಿದರೆ ಮೇವು ಕೊರತೆಯುಂಟಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಒಟ್ಟಾರೆ ಭೀಕರ ಬರ ರಾಜ್ಯದ ರೈತರನ್ನು ಯಾವ ಮಟ್ಟಿಗೆ ಕಂಗೆಡಿಸಿದೆ ಎನ್ನುವುದಕ್ಕೆ ಚಿತ್ರದುರ್ಗದ ಘಟನೆ ಸ್ಪಷ್ಟ ನಿದರ್ಶನವಾಗಿದೆ.  ರಾಜ್ಯದಲ್ಲಿ ಕಳೆದ 2 ವರ್ಷಗಳಿಂದ ಭೀಕರ ಬರ ಪರಿಸ್ಥಿತಿ ತಲೆ ದೋರಿದ್ದು, ರೈತರಂತೂ ಕೃಷಿ  ಮಾಡಲು ಮತ್ತು ತಮ್ಮ ಜಾನುವಾರುಗಳನ್ನು ಸಾಕಲು ಪರಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಜಾನುವಾರುಗಳಿಗೂ ಕನಿಷ್ಠ ಮೇವು ಒದಗಿಸಲು ಸಾಧ್ಯವಾಗದೇ ಪರದಾಡುತ್ತಿರುವ ರೈತರು ಸರ್ಕಾರಿ  ಗೋಶಾಲೆಗಳನ್ನೇ ನೆಚ್ಚಿಕೊಳ್ಳುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com