ರಾಷ್ಟ್ರಪತಿ ಚುನಾವಣೆಗೆ ಬೆಂಗಳೂರಿನಲ್ಲೂ ಸಕಲ ಸಿದ್ಧತೆ ಪೂರ್ಣ

ರಾಷ್ಟ್ರಪತಿ ಚುನಾವಣೆಗೆ ರಾಜಧಾನಿ ಬೆಂಗಳೂರಿನಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಧಾನಸೌಧದಲ್ಲಿ ಚುನಾವಣಾ ಆಯೋಗ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ.
ವಿಧಾನಸೌಧದಲ್ಲಿ ಸಿದ್ಧತೆ
ವಿಧಾನಸೌಧದಲ್ಲಿ ಸಿದ್ಧತೆ

ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ರಾಜಧಾನಿ ಬೆಂಗಳೂರಿನಲ್ಲೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಧಾನಸೌಧದಲ್ಲಿ ಚುನಾವಣಾ ಆಯೋಗ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ರಾಷ್ಟ್ರಪತಿ ಚುನಾವಣೆಯ ನಿಮಿತ್ತ ಜನಪ್ರತಿನಿಧಿಗಳ ಮತದಾನಕ್ಕಾಗಿ ವಿಧಾನಸೌಧದ ಮೊದಲನೆ ಮಹಡಿಯಲ್ಲಿರುವ 106ನೇ ಕೊಠಡಿಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕಳೆದ ವಾರವಷ್ಟೆೇ ನವದೆಹಲಿಯಿಂದ ತಂದಿರುವ  ಮತಪೆಟ್ಟಿಗೆಯನ್ನು 107ನೇ ಕೊಠಡಿಯಲ್ಲಿ(ಸ್ಟ್ರಾಂಗ್ ರೂಂ) ಭದ್ರವಾಗಿರಿಸಲಾಗಿತ್ತು. ಇದೀಗ ಮತಪೆಟ್ಟಿಗೆಯನ್ನು ಮತದಾನಕ್ಕಾಗಿ ಕೊಠಡಿಸಂಖ್ಯೆ 106ಕ್ಕೆ ತಂದಿರಿಸಲಾಗಿದೆ. ದೇಶಾದ್ಯಂತ ನಡೆಯುವ ಚುನಾವಣೆ ಪ್ರಕ್ರಿಯೆಗೆ  ಲೋಕಸಭೆ ಕಾರ್ಯದರ್ಶಿ ಅನೂಪ್ ಮಿಶ್ರಾ ಅವರು ಮುಖ್ಯ ಚುನಾವಣಾಧಿಕಾರಿಯಾಗಿದ್ದು, ಎಲ್ಲ ರಾಜ್ಯಗಳ ವಿಧಾನಸಭೆ ಕಾರ್ಯದರ್ಶಿಗಳನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ.

ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರ ಉಸ್ತುವಾರಿಯಲ್ಲಿ ಸೋಮವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಚುನಾವಣೆ ನಡೆಯಲಿದೆ.

ಈ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಬೆ ಕಾರ್ಯದರ್ಶಿ ಎಸ್. ಮೂರ್ತಿಯವರು, ಪರೋಕ್ಷ ಚುನಾವಣೆ ಮೂಲಕ ರಾಷ್ಟ್ರಪತಿ ಆಯ್ಕೆ ನಡೆಯುತ್ತದೆ. ಜನರು ತಮ್ಮ ಪ್ರತಿನಿಧಿಗಳ ಮೂಲಕ ಆಯ್ಕೆ  ಮಾಡುತ್ತಾರೆ. ರಾಜ್ಯದ ಶಾಸಕರೊಬ್ಬರಿಗೆ 131 ಹಾಗೂ ಸಂಸದರೊಬ್ಬರಿಗೆ 708 ಮತ ಮೌಲ್ಯ ನಿಗದಿಯಾಗಿದೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಚುನಾವಣಾ ವೀಕ್ಷಕರ ನೇಮಕ
ಚುನಾವಣೆ ಪ್ರಕ್ರಿಯೆ ಗಮನಿಸಲು ಕೇಂದ್ರದ ಐಎಎಸ್ ಅಧಿಕಾರಿ ಅರುಣ್ ಸಿಂಘಾಲ್ ಅವರನ್ನು ವೀಕ್ಷಕರಾಗಿ ಕರ್ನಾಟಕಕ್ಕೆ ನೇಮಿಸಲಾಗಿದ್ದು, ಶನಿವಾರವೇ ಆಗಮಿಸಿರುವ ಸಿಂಘಾಲ್, ಈಗಾಗಲೇ ಮತಗಟ್ಟೆಗೆ ತೆರಳಿ ಸಿದ್ಧತೆ  ಪರಿಶೀಲಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಮುಗಿದು ರಾಜ್ಯದಿಂದ ಮತಪೆಟ್ಟಿಗೆ ತೆರಳುವವರೆಗೂ ಅಗತ್ಯ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ವಿಧಾನಸೌಧ ಭದ್ರತೆ ವಿಭಾಗದ ಡಿಸಿಪಿ ಯೋಗೇಶ್ ತಿಳಿಸಿದ್ದಾರೆ.

224+1 ಸದಸ್ಯರ ಮತದಾನ
ಯಾವುದೇ ರಾಜ್ಯದ ಶಾಸಕ, ಸಂಸದರು ತಮಗಿಷ್ಟದ ರಾಜ್ಯದಲ್ಲಿ ಮತದಾನ ಮಾಡಬಹುದಾಗಿದೆಯ ಇದು ರಾಷ್ಟ್ರಪತಿ ಚುನಾವಣೆಯ ವಿಶೇಷತೆಯಾಗಿದ್ದು,  ಈ ಕುರಿತು ವಾರದ ಮೊದಲು ತಮ್ಮ ರಾಜ್ಯದ ವಿಧಾನಸಭೆಗೆ  ತಿಳಿಸಿದರೆ ಅವರಿಗಿಷ್ಠದ ರಾಜ್ಯದ ವಿಧಾನಸಭೆಗೆ ಮತಪತ್ರ ಹಾಗೂ ಮತಮೌಲ್ಯವನ್ನು ವರ್ಗಾವಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಕರ್ನಾಟಕದಲ್ಲಿ ಮತದಾನ ಮಾಡುವುದಾಗಿ ಯಾವುದೇ ರಾಜ್ಯದ ಜನಪ್ರತಿನಿಧಿಗಳಾಗಲಿ,  ಬೇರೆ ರಾಜ್ಯ ಬೇಕು ಎಂದು ರಾಜ್ಯದ ಜನಪ್ರತಿನಿಧಿಗಳ್ಯಾರೂ ತಿಳಿಸಿಲ್ಲ. ಹೀಗಾಗಿ ರಾಜ್ಯದ 28 ಸಂಸದರು ಹಾಗೂ 12 ರಾಜ್ಯಸಭೆ ಸದಸ್ಯರ ಪೈಕಿ ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಮಾತ್ರ ಬೆಂಗಳೂರಿನಲ್ಲಿ ಮತ  ಚಲಾಯಿಸುವುದಾಗಿ ತಿಳಿಸಿದ್ದಾರೆ. ಉಳಿದ 39 ಸದಸ್ಯರೂ ನವದೆಹಲಿಯಲ್ಲಿ ಮತದಾನ ಮಾಡಲಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 225 ಜನಪ್ರತಿನಿಧಿಗಳು ಮತದಾನ ಮಾಡಲು ಅರ್ಹರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com