ಅಜಾತ ಶತೃವಿನ "ಧರ್ಮ"ದಾರಿ: ಧರಂ ಸಿಂಗ್ ನಡೆದು ಬಂದ ಹಾದಿ

ಧರಂ ಸಿಂಗ್ ಅವರು ಹುಟ್ಟಿದ್ದು 1936 ಡಿಸೆಂಬರ್ 25ರಂದು. ಅವರ ಹುಟ್ಟೂರು ಜೇವರ್ಗಿಯ ನೆಲೋಗಿ.. ಆಂಧ್ರ ಪ್ರದೇಶದ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಧರಂ ಸಿಂಗ್ ಎಂಎ ಮತ್ತು ಎಲ್ ಎಲ್ ಬಿ ಪದವಿ ವ್ಯಾಸಂಗ ಮಾಡಿದ್ದರು.
ಮಾಜಿ ಸಿಎಂ ಧರಂ ಸಿಂಗ್
ಮಾಜಿ ಸಿಎಂ ಧರಂ ಸಿಂಗ್

ಧರಂ ಸಿಂಗ್ ಅವರು ಹುಟ್ಟಿದ್ದು 1936 ಡಿಸೆಂಬರ್ 25ರಂದು. ಅವರ ಹುಟ್ಟೂರು ಜೇವರ್ಗಿಯ ನೆಲೋಗಿ.. ಆಂಧ್ರ ಪ್ರದೇಶದ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಧರಂ ಸಿಂಗ್ ಎಂಎ ಮತ್ತು ಎಲ್ ಎಲ್ ಬಿ ಪದವಿ ವ್ಯಾಸಂಗ  ಮಾಡಿದ್ದರು.

1960ರಲ್ಲಿ ಕಲಬುರಗಿ ನಗರ ಸಭಾ ಸದಸ್ಯರಾದ ಧರಂಸಿಂಗ್ ಅದೇ ವರ್ಷ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದಕ್ಕೂ ಮುನ್ನ ಕಮ್ಯುನಿಸ್ಟ್‌ ಪಕ್ಷದ ಒಡನಾಟದಲ್ಲಿದ್ದರು. 1972 ರಲ್ಲಿ ವಿಧಾನಸಭಾ ಚುನಾವಣೆಗೆ ಜೇವರ್ಗಿ  ಕ್ಷೇತ್ರದಿಂದ ಇಂದಿರಾ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾದೇವಪ್ಪ ರಾಂಪುರೆ ಇವರ ಎದುರಾಳಿ. ರಾಂಪುರೆ ಹೈದರಾಬಾದ್‌ ಕರ್ನಾಟಕ ಭಾಗದ  ಪ್ರಭಾವಿ ಲಿಂಗಾಯತ ನಾಯಕ. ಇವರನ್ನು ಜನ ‘ಹೈ.ಕ. ಹುಲಿ’ ಎಂದೇ ಕರೆಯುತ್ತಿದ್ದರು. ಆದರೆ, ಚುನಾವಣೆಯಲ್ಲಿ ಧರ್ಮಸಿಂಗ್‌ ಗೆಲುವು ಸಾಧಿಸಿದರು. ಈ ಗೆಲುವನ್ನು ಜನ ‘ಹುಲಿಯನ್ನು ಬೇಟೆಯಾಡಿದ ಸಿಂಹ’ ಎಂದು ಬಣ್ಣಿಸಿದರು.

ಜೇವರ್ಗಿ ವಿಧಾನಸಭೆ ಕ್ಷೇತ್ರದಿಂದ  ಸತತವಾಗಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಅಪರೂಪದ ಸಾಧನೆ ಧರಂ ಸಿಂಗ್ ಅವರದ್ದು.  ಹಿಂದುಳಿದ ವರ್ಗ ಆಯೋಗದ ಸದಸ್ಯರು, ಗೃಹ ಇಲಾಖೆ ಸಚಿವರು, ಗೃಹ-ಅಬಕಾರಿ ಸಚಿವರು  ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಧರಂ ಸಿಂಗ್ ಸೇವೆ ಸಲ್ಲಿಸಿದ್ದಾರೆ. ಅಂತೆಯೇ ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇದೇ ಕ್ಷೇತ್ರದ ಜನ ಎಂಟು ಬಾರಿ ವಿಧಾನಸಭೆಗೆ ಸತತವಾಗಿ ಗೆಲ್ಲಿಸಿ ‘ಸೋಲಿಲ್ಲದ  ಸರದಾರ’ ಎಂಬ ಕಿರೀಟ ತೊಡಿಸಿದ್ದರು.

2004ರಿಂದ 2006ರವರೆಗೆ ಕರ್ನಾಟಕದಲ್ಲಿ ರಚನೆಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಧರಂ ಸಿಂಗ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ  ಅವರು ಅಧಿಕಾರ ಕಳೆದುಕೊಳ್ಳುವಂತಾಯಿತು. 2006-2007ರ ಸಂದರ್ಭದಲ್ಲಿ ಧರಂ ಸಿಂಗ್ ವಿರೋಧ ಪಕ್ಷದ ನಾಯಕರಾದರು.  2008ರ ಚುನಾವಣೆಯಲ್ಲಿ ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ವಿರುದ್ಧ  70  ಮತಗಳ ಅಂತರದಿಂದ ಪರಾಭವಗೊಂಡರು.

2009ರ ಲೋಕಸಭಾ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರಕ್ಕೆ ವಲಸೆ ಹೋಗಿ ಸಂಸದರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಮರುಜೀವ ಪಡೆದರು. ಆದರೆ, 2014 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ಖೂಬಾ  ಎನ್ನುವ ಹೊಸ ಮುಖದ ಎದುರು ಸೋತು ಹೋದರು.

ಪಕ್ಷ ನಿಷ್ಠರು ಮತ್ತು ಅಜಾತ ಶತೃಗಳು
1980 ರಲ್ಲಿ ಕಲಬುರ್ಗಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ತಮ್ಮ ನಾಯಕಿ ಇಂದಿರಾಗಾಂಧಿ ಅವರ ಸೂಚನೆಯ ಮೇರೆಗೆ ರಾಜೀನಾಮೆ ನೀಡಿ, ಕೇರಳದ ಸಿ.ಎಂ.  ಸ್ಟೀಫನ್‌ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟರು. ಸ್ಟೀಫನ್‌ ಅವರು ವಿ.ಕೆ.ಕೃಷ್ಣನ್‌ ನಂತರದಲ್ಲಿ ಕಾಂಗ್ರೆಸ್‌ ಕಂಡ ಅತ್ಯುತ್ತಮ ವಾಗ್ಮಿ. ಅವರು ಆ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ವಿರುದ್ಧ ಸೋತಿದ್ದರು.  ಇಂದಿರಾಗಾಂಧಿ ಹಾಗೂ ಸಂಜಯ್‌ ಗಾಂಧಿ ಅವರಿಗೆ ಸ್ಟೀಫನ್‌ ಅವರು ಸಂಸತ್‌ ನಲ್ಲಿ ಇರಬೇಕು ಎನ್ನುವ ಉದ್ದೇಶವಿತ್ತು. ಈ ಕಾರಣಕ್ಕಾಗಿ ಧರ್ಮಸಿಂಗ್‌ ಅವರಿಂದ ರಾಜೀನಾಮೆ ಕೊಡಿಸಿದ್ದರು. ಧರ್ಮಸಿಂಗ್‌ 13 ಚುನಾವಣೆಗಳನ್ನು  ಎದುರಿಸಿದರು. ಅವುಗಳಲ್ಲಿ ಒಂದು ಬಾರಿ ಕಲಬುರ್ಗಿ ನಗರಸಭೆಯ ಸದಸ್ಯ, ಎಂಟು ಬಾರಿ ಶಾಸಕ, ಎರಡು ಬಾರಿ ಸಂಸತ್‌ ಸದಸ್ಯರಾಗಿದ್ದರು.ಕಳೆದ ಬಾರಿ ಲೋಕಸಭಾ ಚುನಾವಣೆ ಸ್ಪರ್ಧಿಸಿದ್ದಾಗ ‘ಪ್ರಜಾವಾಣಿ’ಗೆ ಸಂದರ್ಶನ  ನೀಡುವಾಗ ‘ಮುಂದಿನ ಚುನಾವಣೆ ತನಕ ಬದುಕಿದ್ದರೆ ನನಗೆ 81 ವರ್ಷವಾಗುತ್ತದೆ’ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com