ಇಂದಿರಾ ಕ್ಯಾಂಟೀನ್ ಗಾಗಿ ಐತಿಹಾಸಿಕ ರಾಮೇಶ್ವರ ದೇಗುಲದ ಕಾಂಪೌಂಡ್ ಧ್ವಂಸ!

ಸಿಎಂ ಸಿದ್ದರಾಮಯ್ಯ ಸರ್ಕಾರದ ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಐತಿಹಾಸಿಕ ದೇಗುಲದ ಕಾಂಪೌಂಡ್ ಧ್ವಂಸ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇತಿಹಾಸ ಪ್ರಸಿದ್ಧ ರಾಮೇಶ್ವರ ದೇವಾಲಯ
ಇತಿಹಾಸ ಪ್ರಸಿದ್ಧ ರಾಮೇಶ್ವರ ದೇವಾಲಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಐತಿಹಾಸಿಕ ದೇಗುಲದ ಕಾಂಪೌಂಡ್ ಧ್ವಂಸ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸುಮಾರು 300 ವರ್ಷಗಳಷ್ಟು ಹಳೆಯದಾದ ರಾಮೇಶ್ವರ ದೇಗುಲದ ಕಾಂಪೌಂಡ್ ಅನ್ನು ಇಂದಿರಾ ಕ್ಯಾಂಟೀನ್ ಗಾಗಿ ಧ್ವಂಸಗೊಳಿಸಲು ಮುಂದಾದಾಗ ಸ್ಥಳೀಯರು ಇದಕ್ಕೆ ವಿರೋಧ  ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಸ್ಥಳೀಯ ಪಾಲಿಕೆ ಆಧಿಕಾರಿಗಳು ಐತಿಹಾಸಿಕ ದೇಗುಲದ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಇಂದು ಬೆಳಗ್ಗೆ  ದೇಗುಲದ ಕಾಂಪೌಂಡ್ ನ ಒಂದು ಭಾಗವನ್ನು ಅಧಿಕಾರಿಗಳು ನೆಲಸಮ ಮಾಡಲು ಮುಂದಾಗಿದ್ದಾರೆ.

ಈ ವೇಳೆ ಇದನ್ನು ಕಂಡ ಸ್ಥಳೀಯರು ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಪಾಲಿಕೆ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಗಾಗಿ ಗೋಡೆ ಉರುಳಿಸುತ್ತಿರುವುದಾಗಿ ಹೇಳಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಸ್ಥಳೀಯರು ಅಧಿಕಾರಿಗಳ  ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಸ್ಥಳೀಯರು ಆರೋಪಿಸಿರುವಂತೆ ಈಗಾಗಲೇ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ನಿಂದ ಕೂಗಳತೆ ದೂರದಲ್ಲಿರುವ ಸುಮಾರು 300 ವರ್ಷಗಳಷ್ಟು ಹಳೆಯದಾದ ಇತಿಹಾಸ ಪ್ರಸಿದ್ದ  ರಾಮೇಶ್ವರ ದೇವಸ್ಥಾನದ 40 ಅಡಿ  ಕಾಂಪೌಂಡ್ ಅನ್ನು ಒಡೆದು ಹಾಕಲಾಗಿದೆ. ಇದನ್ನು ಖಂಡಿಸಿ ಸುಮಾರು 50ಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದ ಈ ಕ್ರಮವನ್ನು ಖಂಡಿಸಿ ಸರ್ಕಾರದ ವಿರುದ್ಧ ಧಿಕ್ಕಾರ  ಕೂಗುತ್ತಿದ್ದಾರೆ.

ಪ್ರಶ್ನಿಸಿದ ಹಿರಿಯ ಪತ್ರಕರ್ತನ ಮೇಲೆ ಕೈ ಮುಖಂಡನಿಂದ ಹಲ್ಲೆ?

ಇದೇ ವೇಳೆ ದೇಗುಲದ ಕಾಂಪೌಂಡ್ ಉರುಳಿ ಇಂದಿರಾ ಕ್ಯಾಂಟೀನ್ ನಿರ್ಮಾಣವನ್ನು ಪ್ರಶ್ನಿಸಿದ ಹಿರಿಯ ಪತ್ರಕರ್ತರೊಬ್ಬರನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಥಳಿಸಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ,  ಸ್ಥಳೀಯ ಕಾರ್ಪೋರೇಟರ್ ಕೋಕಿಲಾ ಚಂದ್ರಶೇಖರ್ ಅವರ ಪತಿ ಚಂದ್ರಶೇಖರ್ ಅವರು, ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು ಎಂದು ಹೇಳಲಾಗಿದೆ. ಇಂದಿರಾ ಕ್ಯಾಂಟೀನ್ ಗಾಗಿ  ಇತಿಹಾಸ ಪ್ರಸಿದ್ಧ ದೇಗುಲ ಕಾಂಪೌಂಡ್  ಧ್ವಂಸ ಏಕೆ ಪ್ರಶ್ನಿಸಿದಾಗ ಚಂದ್ರಶೇಖರ್ ಅವರು ಉಡಾಫೆ ಉತ್ತರ ನೀಡಿದ್ದಲ್ಲದೆ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯ ಶಾಸಕ ಜಮೀರ್ ಅಹಮ್ಮದ್​​ ಭೇಟಿ
ದೇವಾಲಯದ ದೇಗುಲ ಕಾಂಪೌಂಡ್​ ಹೊಡೆದು ಹಾಕಿರುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಸ್ಥಳೀಯ ಶಾಸಕ  ಜಮೀರ್​ ಅಹಮ್ಮದ್ ಖಾನ್ ಅವರು ಸ್ಥಳಕ್ಕೆ ದೌಡಾಯಿಸಿದ್ದು, ಆಕ್ರೋಶಿತ ಪ್ರತಿಭಟನಾಕಾರರೊಂದಿಗೆ  ಚರ್ಚೆ ನಡೆಸಿದ್ದಾರೆ. ಅಲ್ಲದೆ ರಾಮೇಶ್ವರ ದೇವಸ್ಥಾನ ಪುರಾತನ ದೇವಸ್ಥಾನವಾಗಿದ್ದು, ಸ್ಥಳೀಯರ ಒಪ್ಪಿಗೆ ಇಲ್ಲದೆ ಬಿಬಿಎಂಪಿ, ದೇವಸ್ಥಾನದ ಕಾಂಪೌಂಡ್ ಒಡೆದು ಹಾಕಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಅಂತೆಯೇ ಕೂಡಲೇ ಬಿಬಿಎಂಪಿ ಒಡೆದು ಹಾಕಿರುವ ದೇವಸ್ಥಾನದ ಕಾಂಪೌಂಡ್ ನಿರ್ಮಿಸಿ ಕೊಡಬೇಕು. ಇಲ್ಲದಿದ್ದರೆ ನಾನೇ ಸ್ವಂತ ದುಡ್ಡಿನಲ್ಲಿ ಕಾಂಪೌಂಡ್ ನಿರ್ಮಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಇಂದಿರಾ ಕ್ಯಾಂಟೀನ್ ಪರವಾಗಿ ಮಾತನಾಡಿದ ಅವರು ಒಳ್ಳೆಯ ಉದ್ದೇಶದಿಂದ ಸರ್ಕಾರ ಕ್ಯಾಂಟೀನ್ ನಿರ್ಮಾಣ ಮಾಡುತ್ತಿದೆ. ಆದರೆ ಬಿಬಿಎಂಪಿ ಸ್ಥಳೀಯರ ಅಭಿಪ್ರಾಯ ಕೇಳಬೇಕಿತ್ತು. ಸ್ಥಳೀಯ ಒಪ್ಪಿಗೆ ಇಲ್ಲದೆ  ದೇವಾಲಯದ ಗೋಡೆ ಒಡೆಯಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com