ಐಎಎಸ್ ಅಧಿಕಾರಿ ತಿವಾರಿ ನಿಗೂಢ ಸಾವು ಪ್ರಕರಣ: ಸಿಎಂ ಸಿದ್ದರಾಮಯ್ಯ ಭೇಟಿಗೆ ಪೋಷಕರ ನಿರ್ಧಾರ

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿವಾರಿ ಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು...
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ
ಬೆಂಗಳೂರು: ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿವಾರಿ ಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಮಂಗಳವಾರ ನಿರ್ಧರಿಸಿದ್ದಾರೆ. 
ನಗರದಲ್ಲಿ ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅನುರಾಗ್ ತಿವಾರಿ ತಂದೆ ಬಿ.ಎನ್. ತಿವಾರಿ ಮತ್ತು ತಾಯಿ ಸುಶೀಲಾ ಅವರು, ಪುತ್ರನ ನಿಗೂಢ ಸಾವು ಕುರಿತಂತೆ ಹಲವು ಶಂಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದು, ನ್ಯಾಯ ಕೊಡಿಸುವಂತೆ ಆಗ್ರಹಿಸಲಾಗುತ್ತದೆ ಎಂದು ಹೇಳಿದ್ದಾರೆ. 
ಮುಖ್ಯಮಂದತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಅನುಮತಿ ಪಡೆದುಕೊಳ್ಳಲಾಗಿದೆ. ಪುತ್ರನ ಸಾವು ಕುರಿತಂತೆ ನಮ್ಮ ಬಳಿ ಕೆಲ ಮಾಹಿತಿಗಳಿದ್ದು, ಆ ಮಾಹಿತಿಗಳನ್ನು ಇತರರ ಮುಂದೆ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದ್ದೇವೆಂದು ತಿಳಿಸಿದ್ದಾರೆ. 
ತಿವಾರಿ ಕುಟುಂಬ ಸದಸ್ಯರು ಇದೀಗ ಉತ್ತರಪ್ರದೇಶ ವಿಶೇಷ ತನಿಖಾ ದಳದ ತನಿಖೆ ಮೇಲೆ ಆರೋಪಗಳನ್ನು ಮಾಡಿದ್ದು, ಅಧಿಕಾರಿಗಳು ವೃತ್ತಿಪರರಂತೆ ತನಿಖೆಯನ್ನು ನಡೆಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. 
ತನಿಖಾ ತಂಡದಲ್ಲಿ ವಿಧಿವಿಜ್ಞಾನ ತಜ್ಞರಿಲ್ಲ. ಅನುರಾಗ್ ಲ್ಯಾಪ್ ಟಾಪ್ ನಲ್ಲಿ ಸಾಕಷ್ಟು ದಾಖಲೆಗಳಿವೆ. ಆದರೆ, ಅವರು ಅದಾವುದನ್ನೂ ಪರಿಶೀಲನೆ ನಡೆಸುತ್ತಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. 
ತಿವಾರಿ ಸಹೋದರ ಮಯಾಂಕ್ ತಿವಾರಿ ಮಾತನಾಡಿ, ಎಸ್ಐಟಿ ಅಧಿಕಾರಿಗಳು ತರಾತುರಿಯಲ್ಲಿ ತನಿಖೆಯನ್ನು ನಡೆಸುತ್ತಿದ್ದು, ಪ್ರಕರಣವನ್ನು ಸಾಮಾನ್ಯ ಪ್ರಕರಣಗಳಂತೆ ಪರಿಗಣಿಸಿ ಬೇಗನೆ ಮುಚ್ಚಿ ಹಾಕಲು ನೋಡುತ್ತಿದ್ದಾರೆ. ಅನುರಾಗ್ ಸಾಕಷ್ಟು ಜೀವ ಬೆದರಿಕೆಗಳ ಮಧ್ಯೆ ಇದ್ದರು ಎಂಬುದು ನಮಗೆ ಗೊತ್ತಿತ್ತು. ಅತ್ಯಂತ ಸೂಕ್ಷ್ಮವಾದ ಹಗರಣಗಳನ್ನು ಆತ ತನಿಖೆ ನಡೆಸುತ್ತಿದ್ದ. ಶೀಘ್ರದಲ್ಲೇ ಪ್ರಕರಣ ಸಂಬಂಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಸಾಧ್ಯವಾದರೆ ತನಿಖೆಯನ್ನು ಉನ್ನತ ಮಟ್ಟದ ಸಂಸ್ಥೆಗೆ ವಹಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ. ಸಿಬಿಐ ತನಿಖೆಗೆ ವಹಿಸುವಂತೆ ಮನವಿ ಮಾಡುತ್ತೇವೆ. ನಮಗೆ ನ್ಯಾಯಬೇಕು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com