"ಪ್ರತಿಷ್ಠೆಯ ಬಂದ್"; ಪರಸ್ಪರ ಕೆಸರೆರಚಾಟದಲ್ಲಿ ಕನ್ನಡಪರ ಸಂಘಟನೆಗಳು!

ಬಯಲು ಸೀಮೆ ಭಾಗಕ್ಕೆ ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವಂತೆಯೇ ಕನ್ನಡ ಪರ ಸಂಘಟನೆಗಳಲ್ಲಿನ ಬಿರುಕು ಕೂಡ ಬಟಾ ಬಯಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಯಲು ಸೀಮೆ ಭಾಗಕ್ಕೆ ಕುಡಿಯುವ ನೀರು  ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್  ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವಂತೆಯೇ ಕನ್ನಡ ಪರ ಸಂಘಟನೆಗಳಲ್ಲಿನ ಬಿರುಕು ಕೂಡ ಬಟಾ ಬಯಲಾಗಿದೆ.

ಕನ್ನಡ ಪರ ಸಂಘಟನೆಗಳ ಮುಖಂಡರ ನಡುವಿನ ಸ್ವಪ್ರತಿಷ್ಠೆಯಿಂದಾಗಿ ಒಗ್ಗಟ್ಟು ಮುರಿದು ಹೋದಂತಾಗಿದ್ದು, ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳಿಗೆ ಬಂದ್ ಗೆ ಅನುಮತಿ ನೀಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಏತನ್ಮಧ್ಯೆ ಕೋಲಾರ-ಹುಬ್ಬಳ್ಳಿ ಹೊರತು ಪಡಿಸಿ ರಾಜ್ಯಾದ್ಯಂತ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನ ಜೀವನ ಎಂದಿನಂತೆ ಸಾಗಿದೆ.

ಇನ್ನು ಬಂದ್ ವಿಫಲವಾಗಿರುವುದಕ್ಕೆ ಕನ್ನಡಪರ ಸಂಘಟನೆಗಳಲ್ಲಿನ ಒಗ್ಗಟ್ಟಿನ ಕೊರೆತೆಯೇ ಕಾರಣ ಎಂದು ಹೇಳಲಾಗುತ್ತಿದ್ದು, ಬಂದ್ ಗೆ ಕರೆ ನೀಡಿದ ವಾಟಾಳ್ ನಾಗರಾಡ್ ಮತ್ತು ಬಂದ್ ನಿಂದ ದೂರ ಉಳಿದಿರುವ ಕರವೇ ಅಧ್ಯಕ್ಷ  ನಾರಾಯಣ ಗೌಡ ಅವರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಬಂದ್ ವಿಫಲಕ್ಕೆ ರಾಜ್ಯ ಸರ್ಕಾರವೇ ಹೊಣೆ: ವಾಟಾಳ್

ಇತ್ತ ಬಂದ್ ನಿಮಿತ್ತ ಟೌನ್ ಹಾಲ್ ಬಳಿ ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ " ರಾಜ್ಯದ ನೆಲ, ಜಲದ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿ ಇಲ್ಲ.  ಹಾಗಾಗಿ ಕೋಲಾರ, ಚಿಕ್ಕಬಳ್ಳಾಪುರ ಜನರ ಬೇಡಿಕೆ ಈಡೇರಿಸುವಂತೆ, ಕಳಸಾ ಬಂಡೂರಿ ಹೋರಾಟಕ್ಕೆ ಕೇಂದ್ರ ಸರ್ಕಾರ ಪರಿಹಾರ ಒದಗಿಸುವಂತೆ, ರೈತರ ಸಾಲ ಮನ್ನಾ ಆಗ್ರಹಿಸಿ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದೇವೆ. ಆದರೆ  ರಾಜ್ಯ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಿದೆ. ಬೆಂಗಳೂರಿನಾದ್ಯಂತ ಪೊಲೀಸ್ ಸರ್ಪಗಾವಲು ಹಾಕಿ ಬಂದ್ ಅನ್ನು ವಿಫಲಗೊಳಿಸಿದೆ. ಮೂರು ದಿನದ ಮೊದಲೇ ಸೆಕ್ಷನ್ 107ರ ಪ್ರಕಾರ ಸುಮಾರು 500 ಕನ್ನಡ ಪರ  ಹೋರಾಟಗಾರರಿಗೆ ನೋಟಿಸ್ ಜಾರಿ ಮಾಡಿದ್ದರು. 2 ಸಾವಿರಕ್ಕೂ ಅಧಿಕ ಕನ್ನಡ ಹೋರಾಟಗಾರರನ್ನು ಬಂಧಿಸಿದ್ದರು ಎಂದು ಹೇಳಿದರು.

ಅಂತೆಯೇ ಬಂದ್ ವಿಫಲತೆಗೆ ಮಾಧ್ಯಮದವರು ಕಾರಣ ಎಂದ ವಾಟಾಳ್ ನಾಗರಾಜ್, ನಾರಾಯಣ ಗೌಡರಿಗೆ ಬೆಂಗಳೂರು ಗುತ್ತಿಗೆ ಕೊಟ್ಟಿದ್ದೇವೆ ಎಂದು ಕಿಡಿಕಾರಿದರು. "ನಾರಾಯಣ ಗೌಡ ಅವರು ಯಾವತ್ತೂ ಬೆಂಬಲ ಕೊಟ್ಟಿಲ್ಲ.  ಅವರ ಬೆಂಬಲಕ್ಕೂ ಬಂದ್ ಗೂ ಸಂಬಂಧವಿಲ್ಲ. ಪೊಲೀಸರು ನಮ್ಮ ಬಂದ್ ಹತ್ತಿಕ್ಕಿದ್ದಾರೆ ಎಂದು ಹೇಳಿದರು. ಏತನ್ಮಧ್ಯೆ ಕರವೇ ಅಧ್ಯಕ್ಷ ನಾರಾಯಣ ಗೌಡ ಅವರ ವಿರುದ್ಧ ಕಿಡಿಕಾರಿದ ಅವರು, "ಹೌದು ನಾಳೆಯಿಂದ ಬೆಂಗಳೂರನ್ನು  ನಾರಾಯಣ ಗೌಡರಿಗೆ ಗುತ್ತಿಗೆ ಕೊಡ್ತಿದ್ದೇವೆ. ಅವರೇ ಬಂದ್ ಗೆ ಕರೆ ಕೊಡಲಿ. ಆಗ ನಾವೇನು ಮಾಡಬೇಕು ಅಂತ ಯೋಚಿಸುತ್ತೇವೆ" ಎಂದು ಟಾಂಗ್ ನೀಡಿದರು.

ಬಂದ್ ಗೆ ನಮ್ಮ ವಿರೋಧ: ನಾರಾಯಣ ಗೌಡ
ವಾಟಾಳ್ ನಾಗರಾಜ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ನಾರಾಯಣ ಗೌಡ ಅವರು, "ರಾಜ್ಯದ ನೆಲ, ಜಲದ ವಿಚಾರದಲ್ಲಿ ನಮಗೆ ಕಾಳಜಿ ಇದೆ. ವಾಟಾಳ್ ನಾಗರಾಜ್ ಅವರು ನಮಗಿಂತ ಹಿರಿಯರು. ನಾನು  ಕೂಡಾ ಕಳೆದ 25 ವರ್ಷಗಳಿಂದ ಹೋರಾಟದಲ್ಲಿ ತೊಡಗಿಕೊಂಡಿದ್ದೇನೆ. ಆದರೆ ಶ್ರೀಸಾಮಾನ್ಯರಿಗೆ ತೊಂದರೆ ಕೊಡುವ ಬಂದ್ ಗೆ ನಮ್ಮ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಬಂದ್ ನಿಂದ ಸಮಸ್ಯೆಗಳಿಗೆ ಪರಿಹಾರ ಸಿಗಲ್ಲ.  ಹಾಗಾಗಿ ವಾಟಾಳ್ ನಾಗರಾಜ್ ಅವರು ನಮಗೆ ಬೆಂಗಳೂರನ್ನು ಗುತ್ತಿಗೆ ಕೊಡಲು ಅದು ನಮ್ಮಪ್ಪನ ಆಸ್ತಿಯೂ ಅಲ್ಲ, ವಾಟಾಳ್ ನಾಗರಾಜ್ ಅವರ ಆಸ್ತಿಯೂ ಅಲ್ಲ. ಇದು ಹೋರಾಟದ ವಿಚಾರ ಎಂದು ಹೇಳಿದ್ದಾರೆ.

ವಾಟಾಳ್ ನಾಗರಾಜ್ ತುಂಬ ಹಿರಿಯರು, ಬುದ್ದಿವಂತರು. ಅವರಿಗೆ ಹೇಳುವಷ್ಟು ದೊಡ್ಡವರು ನಾವಲ್ಲ. ಅವರು ಒಂದು ಬಾರಿ ಬಂದ್ ಎಂದು ಹೇಳಿದ ಮೇಲೆ ಮುಗಿಯಿತು. ಹಾಗಂತ ನಮ್ಮ ಕನ್ನಡ ಸಂಘಟನೆಗಳ ನಡುವೆ ಬಿರುಕು  ಇದೆ ಎಂದು ಅರ್ಥ ಅಲ್ಲ. ನಮ್ಮ ಸಂಘಟನೆ ಒಗ್ಗಟ್ಟಿನಲ್ಲೇ ಇದೆ. ನಮ್ಮ ಸಂಘಟನೆ ಯಾವುದೇ ಕರೆ ಕೊಟ್ಟಿಲ್ಲ. ನಮ್ಮ ಸಂಘಟನೆಯಿಂದ ಬಂದ್ ಗೆ ಬೆಂಬಲ ಇಲ್ಲ.  ಕನ್ನಡಪರ ಸಂಘಟನೆಗಳು ಸಚಿವರು, ಶಾಸಕರು, ಸಚಿವರ ಮನೆ  ಎದುರು ಪ್ರತಿಭಟನೆ ನಡೆಸಬೇಕು. ಅದನ್ನು ಬಿಟ್ಟು ನಾನು ಹೇಳಿದ್ದೇ ಅಂತಿಮ ಎನ್ನುವವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಅವರು ಕಿಡಿಕಾರಿದರು.

ವಾಟಾಳ್ ನಾಗರಾಜ್ ವಿರುದ್ಧವೇ ಪ್ರತಿಭಟನೆ!

ಏಕಾಏಕಿ ಕರ್ನಾಟಕ ಬಂದ್ ಗೆ ಕರೆ ನೀಡಿರುವ ವಾಟಾಳ್ ನಾಗರಾಜ್ ವಿರುದ್ಧವೇ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಬೆಂಗಳೂರಿನಲ್ಲಿ ನಡೆಯಿತು. ಸುಮ್ಮನಹಳ್ಳಿ ಸೇತುವೆ ಸಮೀಪ ವಾಟಾಳ್ ವಿರುದ್ಧ  ರೈತ ಸಂಘದಿಂದ ಪ್ರತಿಭಟನೆ ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com