ಹಾಡು ಕದ್ದ ಆರೋಪ: ಓಲಾ ಕ್ಯಾಬ್ ವಿರುದ್ಧ ಲಹರಿ ವೇಲು ದೂರು!

ಖ್ಯಾತ ಕ್ಯಾಬ್ ಸೇವಾ ಸಂಸ್ಥೆ ಓಲಾ ವಿರುದ್ಧ ಲಹರಿ ವೇಲು ಗರಂ ಆಗಿದ್ದು, ಅನುಮತಿ ಇಲ್ಲದೇ ತಮ್ಮ ಸಂಸ್ಥೆಯ ಹಾಡುಗಳನ್ನು ಕದ್ದು ಕ್ಯಾಬ್ ನಲ್ಲಿ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಖ್ಯಾತ ಕ್ಯಾಬ್ ಸೇವಾ ಸಂಸ್ಥೆ ಓಲಾ ವಿರುದ್ಧ ಲಹರಿ ವೇಲು ಗರಂ ಆಗಿದ್ದು, ಅನುಮತಿ ಇಲ್ಲದೇ ತಮ್ಮ ಸಂಸ್ಥೆಯ ಹಾಡುಗಳನ್ನು ಕದ್ದು ಕ್ಯಾಬ್ ನಲ್ಲಿ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೂರು  ದಾಖಲಿಸಿದ್ದಾರೆ.

ಓಲಾ ಕಂಪೆನಿಯು ‘ಲಹರಿ’ ಆಡಿಯೊ ಸಂಸ್ಥೆಗೆ ಸೇರಿದ ಚಿತ್ರಗೀತೆಗಳನ್ನು ಅಕ್ರಮವಾಗಿ ಡೌನ್‌ಲೋಡ್ ಮಾಡಿಕೊಂಡು ತನ್ನ ಎಲ್ಲ ಕ್ಯಾಬ್‌ ಗಳಲ್ಲೂ ಬಳಸುತ್ತಿದೆ ಎಂದು ಆರೋಪಿಸಿ ಲಹರಿ ವೇಲು ಅವರು ದೂರು ನೀಡಿದ್ದಾರೆ. ಈ  ಸಂಬಂಧ ಲಹರಿ ಸಂಸ್ಥೆಯ ಮಾಲೀಕರೂ ಕೂಡ ಆಗಿರುವ ವೇಲು ಅವರು ಮೇ 20ರಂದು ಜೀವನ್‌ ಭಿಮಾನಗರ ಠಾಣೆಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ದೂರಿನ ಅನ್ವಯ ಓಲಾ ಸಿಇಒ ಭಾವೀಶ್ ಅಗರವಾಲ್‌ ಹಾಗೂ  ಮುಖ್ಯ ತಾಂತ್ರಿಕ ಅಧಿಕಾರಿ (ಸಿಟಿಒ) ಅಂಕಿತ್ ಭಾತಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಚಳ್ಳಘಟ್ಟದಲ್ಲಿರುವ ಓಲಾ ಕಚೇರಿ ಮೇಲೆ ದಾಳಿ ನಡೆಸಿ ಸಿಪಿಯು, ಡಿಸ್‌ ಪ್ಲೇ ಬೋರ್ಡ್, ಟ್ಯಾಬ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ  ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಲಹರಿ ಸಂಸ್ಥೆ ಹಕ್ಕು ಪಡೆದುಕೊಂಡಿರುವ ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಗಳ ಚಿತ್ರೆಗೀತೆಗಳನ್ನು ಬಿಡುಗಡೆಗೂ ಮೊದಲೇ ‘ಪ್ರೈಮ್ ಪ್ಲೇ ಟ್ಯಾಪ್’ ಉಪಕರಣ ಬಳಸಿ ಓಲಾ ಸಂಸ್ಥೆ ಡೌನ್‌ಲೋಡ್  ಮಾಡುತ್ತಿತ್ತು ಎಂದು ಆರೋಪಿಸಲಾಗಿದೆ. ಅಂತೆಯೇ ಹೀಗೆ ಡೌನ್ ಲೋಡ್ ಮಾಡಿದ ಹಾಡುಗಳನ್ನು ಗ್ರಾಹಕರನ್ನು ಖುಷಿಪಡಿಸಲು ಎಲ್ಲ ಕ್ಯಾಬ್‌ಗಳಲ್ಲಿ ಬಳಸುತ್ತಿದ್ದರು. ಹೊಸ ಹಾಡುಗಳನ್ನು ಡೌನ್‌ಲೋಡ್ ಮಾಡುವುದಕ್ಕಾಗಿಯೇ  ಸಿಂಗಾಪುರದಲ್ಲಿ ವಿಶೇಷ ಸರ್ವರ್ ಸ್ಥಾಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ಇತ್ತೀಚೆಗೆ ಬಾಹುಬಲಿ, ರುದ್ರಮದೇವಿ, ಗೌತಮಿಪುತ್ರ ಶಾತಕರ್ಣಿ ಹಾಗೂ ಸುಂದರಾಂಗ ಜಾಣ ಚಿತ್ರಗಳ ಹಾಡುಗಳನ್ನು ಡೌನ್‌ಲೋಡ್ ಮಾಡಿದ್ದ ಆರೋಪಿಗಳು, ಅವುಗಳನ್ನು ದೆಹಲಿ, ಕೋಲ್ಕತ್ತಾ, ಕರ್ನಾಟಕ ಹಾಗೂ  ತಮಿಳುನಾಡು ರಾಜ್ಯಗಳಲ್ಲಿ ಸಂಚರಿಸುವ ಕ್ಯಾಬ್‌ಗಳಲ್ಲಿ ಬಳಸುತ್ತಿದ್ದರು ಎಂದು ಹೇಳಲಾಗಿದೆ. ಅಂಕಿತ್ ಭಾತಿ ಅವರು ಸಿಂಗಪುರದಲ್ಲಿದ್ದುಕೊಂಡೇ ಸರ್ವರ್ ಮೂಲಕ ಈ ಅಕ್ರಮ ನಡೆಸುತ್ತಿದ್ದರು. ಸಿಇಒ ಭಾವೀಶ್ ಸದ್ಯ  ಅಮೆರಿಕಾದಲ್ಲಿದ್ದಾರೆ. ಇಬ್ಬರ ಬಂಧನಕ್ಕೂ ಬಲೆ ಬೀಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಬಯಲಾಗಿದ್ದು ಹೇಗೆ?
ಈ ಹಿಂದೆ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳಿದ್ದ ಲಹರಿ ವೇಲು ಅವರು, ವಿಮಾನ ನಿಲ್ದಾಣದಿಂದ ಮನೆಗೆ ವಾಪಸ್ ಆಗಲು ಓಲಾ ಕ್ಯಾಬ್ ಬಳಕೆ ಮಾಡಿದ್ದರು. ಈ ವೇಳೆ ಕ್ಯಾಬ್ ನಲ್ಲಿ ಬಾಹುಬಲಿ ಚಿತ್ರದ ಹಾಡುಗಳನ್ನು ಪ್ರಸಾರ  ಮಾಡಲಾಗಿತ್ತು. ಹಾಡುಗಳನ್ನು ಕೇಳಿ ಅಚ್ಚರಿಗೊಂಡ ಲಹರಿ ವೇಲು ಅವರು ಈ ಬಗ್ಗೆ ಚಾಲಕನಲ್ಲಿ ಪ್ರಶ್ನಿಸಿದ್ದರು. ಅಂತೆಯೇ ಇನ್ನೂ ಆಡಿಯೋ ಬಿಡುಗಡೆಯಾಗೇ ಇಲ್ಲ. ಅದಾಗಲೇ ಅದು ಹೇಗೆ ಹಾಡುಗಳು ಸೋರಿಕೆಯಾಗಲು ಸಾಧ್ಯ  ಎಂದು ಶಂಕಿಸಿ ಇತರೆ ಕ್ಯಾಬ್ ಗಳಲ್ಲೂ ಪ್ರಸಾರವಾಗುತ್ತಿದೆಯೇ ಎಂದು ಪರೀಕ್ಷಿಸಿದ್ದರು. ಈ ವೇಳೆ ಓಲಾ ಸಂಸ್ಥೆಯೇ ಚಾಲಕರಿಗೆ ಕ್ಯಾಬ್ ನಲ್ಲಿ ಹಾಡುಗಳನ್ನು ಪ್ರಸಾರ ಮಾಡಲು ಅನುವು ಮಾಡಿಕೊಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.  ಕೂಡಲೇ ಹಕ್ಕುಸ್ವಾಮ್ಯದ ಹಕ್ಕಿನಡಿ ಲಹರಿ ವೇಲು ಅವರು ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com