ಬೆಂಗಳೂರಿನಲ್ಲಿ ವೃದ್ಧೆಯ ಕೊಲೆ ಪ್ರಕರಣ: ಚಪ್ಪಲಿಯ ರಂಧ್ರದ ಸುಳಿವಿನಿಂದ ಆರೋಪಿ ಆರೆಸ್ಟ್

: ಜೂನ್ 16 ರಂದು ನಗರದಲ್ಲಿ ನಡೆದಿದ್ದ ವೃದ್ಧೆ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಸುಳಿವು ನೀಡಿದ್ದು ಚಪ್ಪಲಿ...
ಬಂಧಿತ ಆರೋಪಿ ನದೀಮ್
ಬಂಧಿತ ಆರೋಪಿ ನದೀಮ್
ಬೆಂಗಳೂರು:  ಜೂನ್ 16 ರಂದು ನಗರದಲ್ಲಿ ನಡೆದಿದ್ದ ವೃದ್ಧೆ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಸುಳಿವು ನೀಡಿದ್ದು ಚಪ್ಪಲಿ. ಚಪ್ಪಲಿಯಲ್ಲಿದ್ದ ತೂತುಗಳಿಂದ ಪೊಲೀಸರು ಕೊಲೆಗಾರನನ್ನ ಪತ್ತೆ ಹಚ್ಚಿದ್ದಾರೆ. 
ಆಡುಗೋಡಿಯ ಸಮತಾನಗರದಲ್ಲಿ ನಡೆದಿದ್ದ ಗಜಲಕ್ಷ್ಮಿ (65) ಎಂಬುವರ ಕೊಲೆ ರಹಸ್ಯವು ಹತ್ಯೆಯ ಸ್ಥಳದಲ್ಲಿ ಸಿಕ್ಕ ಚಪ್ಪಲಿಗಳ ಸುಳಿವಿನಿಂದ ಬಯಲಾಗಿದೆ.
ಗಜಲಕ್ಷ್ಮಿ ಅವರು ಗುಜರಿ ಅಂಗಡಿ ಇಟ್ಟುಕೊಂಡಿದ್ದರು. ಜೂನ್ 16ರ ಬೆಳಗಿನ ಜಾವ ಅಂಗಡಿಗೆ ನುಗ್ಗಿದ್ದ ಸೈಯದ್ ನದೀಮ್ ಅಲಿಯಾಸ್ ಚುವ್ವಿ (22) ಎಂಬಾತ, ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಅವರನ್ನು ಕೊಲೆಗೈದಿದ್ದ. ನಂತರ ಮೃತರು ಚೀಲದ ಕೆಳಗಿಟ್ಟಿದ್ದ 6,800 ರು. ತೆಗೆದುಕೊಂಡು ಪರಾರಿಯಾಗಿದ್ದ. ಇದೀಗ ಆಡುಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಮೊದಲು ನೀಲಸಂದ್ರದಲ್ಲಿ ನೆಲೆಸಿದ್ದ ಗಜಲಕ್ಷ್ಮಿ, ಗಂಡನ ನಿಧನದ ನಂತರ ವಾಸ್ತವ್ಯವನ್ನು ಸಮತಾನಗರಕ್ಕೆ ಬದಲಾಯಿಸಿದ್ದರು. ಅವರ ಗುಜರಿ ಅಂಗಡಿಯ ಹಿಂಭಾಗದಲ್ಲಿರುವ ಇಡಬ್ಲ್ಯೂಎಸ್‌ ವಸತಿ ಸಮುಚ್ಚಯದಲ್ಲೇ ಆರೋಪಿಯ ಕುಟುಂಬ ನೆಲೆಸಿತ್ತು.
ಆಡುಗೋಡಿಯ ರಾಜೇಂದ್ರನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ನದೀಮ್, ಕಬ್ಬಿಣದ ಚೂರುಗಳನ್ನು ಗಜಲಕ್ಷ್ಮಿ ಅವರಿಗೆ ಮಾರಿ ಹಣ ಪಡೆಯುತ್ತಿದ್ದ. ಹೀಗೆ, ಚೀಲದ ಕೆಳಗೆ ಅವರು ಹಣ ಇಡುತ್ತಿದ್ದುದನ್ನು  ಗಮನಿಸಿದ್ದ ಆತ, ಅದನ್ನು ದೋಚಲು ಸಂಚು ರೂಪಿಸಿದ್ದ. ಈ ವಿಚಾರವನ್ನು ಸ್ನೇಹಿತರ  ಬಳಿಯೂ ಹೇಳಿದ್ದ.
ಜೂನ್ 16ರ ನಸುಕಿನ ವೇಳೆ (2.30ರ ಸುಮಾರಿಗೆ) ಅಂಗಡಿ ಬಳಿ ಹೋಗಿದ್ದ ಹಂತಕ, ಸಮೀಪದ ಸುಲಭ್ ಶೌಚಾಲಯದ ಹಿಂಭಾಗದಲ್ಲಿ ಅವಿತುಕೊಂಡಿದ್ದ. ಜನರ ಓಡಾಟ ಕಡಿಮೆ ಆಗುತ್ತಿದ್ದಂತೆಯೇ ಅಂಗಡಿ ಬಳಿ ಹೋಗಿ, ತಲೆ ಮೇಲೆ ಸಿಮೆಂಟ್ ಇಟ್ಟಿಗೆಯನ್ನು ಎತ್ತಿಹಾಕಿ, ಕಬ್ಬಿಣದ ಸಲಾಕೆಯಿಂದ ಮುಖಕ್ಕೆ ಹೊಡೆದಿದ್ದ. ನಂತರ ಚೀಲದ ಕೆಳಗಿದ್ದ 6,800 ನಗದು ತೆಗೆದುಕೊಂಡು ಪರಾರಿಯಾಗಿದ್ದ.
ಮನೆಗೆ ಮರಳಿದ ನದೀಮ್,  ರಕ್ತಸಿಕ್ತ   ಬಟ್ಟೆಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ನೀಲಸಂದ್ರದ ಮೋರಿಯಲ್ಲಿ ಬಿಸಾಡಿದ್ದ. ದೋಚಿದ್ದ ಹಣದಲ್ಲೇ ಹೊಸ ಬಟ್ಟೆ ಹಾಗೂ ಶೂ ಖರೀದಿಸಿದ್ದ. ಅಲ್ಲದೆ, ಸ್ನೇಹಿತರಿಗೆ ರಾತ್ರಿ ಮದ್ಯಪಾನವನ್ನೂ ಮಾಡಿಸಿದ್ದ.
ಹತ್ಯೆಗೈದ ಬಳಿಕ ಆರೋಪಿ ಆತುರದಲ್ಲಿ ಚಪ್ಪಲಿಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದ. ಆ ಚಪ್ಪಲಿಗಳ ಮುಂಭಾಗದಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದವು. ಅಲ್ಲದೆ, ಅಲ್ಲಲ್ಲಿ ಸುಟ್ಟು ಹೋಗಿದ್ದವು. ಅವುಗಳನ್ನು ನೋಡಿದ ಎಫ್‌ಎಸ್‌ಎಲ್ ಅಧಿಕಾರಿಗಳು, ‘ವೆಲ್ಡಿಂಗ್ ಮಾಡುವಾಗ ಕಿಡಿಗಳು ಹಾರಿ ಚಪ್ಪಲಿಗಳ ಮೇಲೆ ಬಿದ್ದಾಗ ಇಂಥ ರಂಧ್ರಗಳಾಗುತ್ತವೆ’ ಎಂದು ಹೇಳಿದರು. ನಂತರ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಎಲ್ಲ ವೆಲ್ಡಿಂಗ್‌ಶಾಪ್‌ಗಳಿಗೂ ತೆರಳಿ ಪೊಲೀಸರು ಅಲ್ಲಿನ ನೌಕರರನ್ನು ವಿಚಾರಣೆ ನಡೆಸಿದ್ದಾರೆ. ನಂತರ ನದೀಂ ಬಗ್ಗೆ ವಿಚಾರಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com