ಬೆಂಗಳೂರು: ನಾಯಿ ರಕ್ಷಿಸಲು ಹೋದ ಯುವಕನ ಕೈ ಕಿತ್ತು ತಿಂದ ಮೊಸಳೆ

ಪ್ರವಾಸಕ್ಕೆ ತೆರಳಿದ್ದ ವೇಳೆ ನಾಯಿ ರಕ್ಷಿಸಲು ಕೆರೆಗೆ ಇಳಿದಿದ್ದ ಯುವಕನೊಬ್ಬನನ್ನು ಮೊಸಳೆಯೊಂದು ಕಚ್ಚಿ ಹಿಡಿದು ಎಳೆದೊಯ್ಯಲು ಯತ್ನಿಸಿದಾಗ ಎಡಗೈ ತುಂಡಾಗಿರುವ ಘಟನೆಯೊಂದು...
ಬೆಂಗಳೂರು: ನಾಯಿ ರಕ್ಷಿಸಲು ಹೋಗಿದ್ದ ಯುವಕನ ಕೈ ಕಿತ್ತು ತಿಂದ ಮೊಸಳೆ
ಬೆಂಗಳೂರು: ನಾಯಿ ರಕ್ಷಿಸಲು ಹೋಗಿದ್ದ ಯುವಕನ ಕೈ ಕಿತ್ತು ತಿಂದ ಮೊಸಳೆ
ಬೆಂಗಳೂರು: ಪ್ರವಾಸಕ್ಕೆ ತೆರಳಿದ್ದ ವೇಳೆ ನಾಯಿ ರಕ್ಷಿಸಲು ಕೆರೆಗೆ ಇಳಿದಿದ್ದ ಯುವಕನೊಬ್ಬನನ್ನು ಮೊಸಳೆಯೊಂದು ಕಚ್ಚಿ ಹಿಡಿದು ಎಳೆದೊಯ್ಯಲು ಯತ್ನಿಸಿದಾಗ ಎಡಗೈ ತುಂಡಾಗಿರುವ ಘಟನೆಯೊಂದು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ತಟ್ಟಿಕೆರೆ ಗ್ರಾಮ ಬಳಿಯಿರುವ ಕಣಿವೆ ಮಾದಾಪುರ ಕೆರೆಯಲ್ಲಿ ಭಾನುವಾರ ನಡೆದಿದೆ. 
ನಾಗ್ಪುರ ಮೂಲದವಾಗಿರುವ ಬೆಂಗಳೂರು ಇಂದಿರಾನಗರದ ಹಾಲಿ ನಿವಾಸಿ ಮುದಿತ್ ದಂಡವತೆ(26) ಕೈ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಮುದಿತ್ ಅವರು ನಗರದಲ್ಲಿ ಸ್ಟಾರ್ಟ್ ಅಪ್ ಕಂಪನಿಯೊಂದನ್ನು ನಡೆಸುತ್ತಿದ್ದಾರೆ. 
ನಿನ್ನೆ ತಮ್ಮ ಗೆಳೆಯರೊಂದಿಗೆ ನಗರದ ಬನ್ನೇರುಘಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮುದಿತ್ ಆಗಮಿಸಿದ್ದರು. 
ಮುದಿತ್ ತಮ್ಮೊಂದಿಗೆ ಎರಡು ನಾಯಿಗಳನ್ನು ಕರೆದೊಯ್ದಿದ್ದರು. ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ದೇಗುಲದ ಬಳಿಯಿದ್ದ ಕೆರೆಯನ್ನು ನೋಡುತ್ತಿದ್ದಂತೆಯೇ ನಾಯಿಗಳು ನೀರಿಗೆ ಇಳಿದಿವೆ.

ನಾಯಿಗಳ ರಕ್ಷಿಸಲು ಕೆರೆ ಬಳಿಯ ಎಚ್ಚರಿಕೆಯ ಫಲಕವನ್ನು ಗಮನಿಸದ ಮುದಿತ್ ಕೆರೆಗೆ ಇಳಿದಿದ್ದಾರೆ. ಈ ವೇಳೆ ಮೊಸಳೆಯೊಂದು ಮುದಿತ್ ಅವರನ್ನು ಕಚ್ಚಿ ಎಳೆದೊಯ್ಯಲು ಮುಂದಾಗಿದೆ. ಮೊಸಳೆ ಬಲವಾಗಿ ಕಚ್ಚಿದ್ದರಿಂದಾಗಿ ಮುದಿತ್ ಅವರ ಎಡಗೈ ತುಂಡಾಗಿದೆ. 
ಪ್ರಸ್ತುತ ಮುದಿತ್ ಅವರು ಹಾಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. 
ಮುದಿತ್ ಅವರ ಎಡಗೈಯನ್ನು ಮೊಸಳೆ ಸಂಪೂರ್ಣವಾಗಿ ತಿಂದು ಹಾಕಿದೆ. ಚಿಕಿತ್ಸೆ ಬಳಿಕ ಕೃತಕ ಕೈ ಜೋಡಿಸಲಾಗುತ್ತದೆ ಎಂದು ಹಾಸ್ಮಾಟ್ ಆಸ್ಪತ್ರೆಯ ನಿರ್ದೇಶಕ ಮತ್ತು ಮೂಳೆರೋಗ ತಜ್ಞ ಡಾ.ಧಾಮಸ್ ಚಾಂಡಿಯವರು ಹೇಳಿದ್ದಾರೆ. 
ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇನ್ನು ತಮ್ಮ ಸ್ನೇಹಿತರೊಂದಿಗೆ ಮಾತನಾಡಿರುವ ಮುದಿತ್ ಅವರು ಕೆರೆ ಸಮೀಪ ಯಾವುದೇ ರೀತಿಯ ಎಚ್ಚರಿಕೆ ಫಲಕಗಳಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಇದನ್ನು ತಿರಸ್ಕರಿಸಿರುವ ಅರಣ್ಯ ಇಲಾಖೆ ಸ್ಥಳದಲ್ಲಿ ಮೊಸಳೆಗಳಿವೆ ಎಚ್ಚರಿಕೆ ಎಂದು ಎಚ್ಚರಿಕೆಯ ಫಲಕವನ್ನು ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. 
ಸಂರಕ್ಷಿತ ಅರಣ್ಯಕ್ಕೆ ಅಕ್ರಮ ಪ್ರವೇಶ: ಮುದಿತ್'ಗೆ ದಂಡ ಸಾಧ್ಯತೆ
ಕೆರೆ ಬಳಿ ಎಚ್ಚರಿಕೆ ಫಲಕವನ್ನು ಹಾಕಿದ್ದರು ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಕ್ಕೆ ಗಾಯಗೊಂಡಿರುವ ಮುದಿತ್'ಗೆ ಅರಣ್ಯಾಧಿಕಾರಿಗಳು ದಂಡ ವಿಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಖಾಸಗಿ ಸುದ್ದಿ ವಾಹಿನಿಯೊಂದರ ಬಳಿ ಮಾತನಾಡಿರುವ ರಾಮನಗರ ಪೊಲೀಸ್ ಅಧಿಕಾರಿ ಬಿ. ರಮೇಶ್ ಅವರು, ಪ್ರಕರಣ ಸಂಬಂಧ ಯಾವುದೇ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿಲ್ಲ. ಬದಲಾಗಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಅನುಮತಿಯಿಲ್ಲದೆಯೇ ಅಕ್ರಮವಾಗಿ ಪ್ರವೇಶ ಮಾಡಿದ್ದಕ್ಕೆ ಮುದಿತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com