
ಬೆಂಗಳೂರು: ಎಸಿ ಬಸ್ ಮತ್ತು ಕ್ಯಾಬ್ ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಇಳಿಕೆ ಮಾಡಿರುವ ಪರಿಣಾಮ ಶೀಘ್ರದಲ್ಲೇ ರಾಜ್ಯದಲ್ಲೂ ಕ್ಯಾಬ್ ಸೇವೆ ಮತ್ತು ಎಸಿ ಬಸ್ ಪ್ರಯಾಣ ಅಗ್ಗವಾಗಲಿದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ನೂತನ ಜಿಎಸ್ ಟಿ ಕಾಯ್ದೆಯಲ್ಲಿ ಎಸಿ ಬಸ್, ಕ್ಯಾಬ್ ಸೇವೆ ಮತ್ತು ಸಾರ್ವಜನಿಕ ಪ್ರಯಾಣದ ಮೇಲಿನ ತೆರಿಗೆಯನ್ನು ಶೇ.6ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದೆ. ಪರಿಣಾಮ ಶೀಘ್ರದಲ್ಲೇ ಸಾರ್ವಜನಿಕ ಬಸ್ ಪ್ರಯಾಣ ಟಿಕೆಟ್ ದರಗಳು ಕೂಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೊಸ ಜಿಎಸ್ ಟಿ ತೆರಿಗೆ ವಿಧಾನದ ಅನ್ವಯ 10ಕ್ಕಿಂತ ಹೆಚ್ಚುಮಂದಿಯನ್ನು ಕೊಂಡೊಯ್ಯುವ ಮಿನಿಬಸ್, ನಾನ್ ಎಸಿ ವಾಹನಗಳುಸ ಲೋಕಲ್ ರೈಲುಗಳು, ಮೆಟ್ರೋ ಮತ್ತು ಧಾರ್ಮಿಕ ಟ್ರಾವೆಲ್ ವಾಹನಗಳು ಈ ತೆರಿಗೆ ಪದ್ಧತಿಯಿಂದ ವಿನಾಯಿತಿ ಪಡೆದಿದ್ದು, 30ಕ್ಕೂ ಹೆಚ್ಚು ಮಂದಿಯನ್ನು ಸಾಗಿಸಬಲ್ಲ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿಯಂತಹ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ವಾಹನಗಳ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಲಾಗಿದೆ. ಈ ಹಿಂದೆ ಈ ಪ್ರಮಾಣ ಶೇ.6ರಷ್ಟಿತ್ತು, ಹೀಗಾಗಿ ಇನ್ನು ಮುಂದೆ ಇವುಗಳಲ್ಲಿನ ಪ್ರಯಾಣ ಇನ್ನಷ್ಟು ಅಗ್ಗವಾಗಲಿದೆ.
ಜಿಎಸ್ ಟಿಯಲ್ಲಿ ಎಸಿ ಬಸ್ ಪ್ರಯಾಣ ಸೇವೆಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗಿದೆ. ಈ ಹಿಂದೆ ಇದೇ ಪ್ರಮಾಣ ಶಏ.6ರಷ್ಟಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಎಸಿ ಬಸ್ ಗಳಲ್ಲಿನ ಪ್ರಯಾಣದರವನ್ನು ಇಳಿಕೆ ಮಾಡುವ ಸಾಧ್ಯತೆಗಳಿವೆ. ಆದರೆ ಈ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಪ್ರಸ್ತುತ ಜಿಎಸ್ ಟಿ ಕುರಿತಾದ ಒಂದಷ್ಟು ಗೊಂದಲಗಳು ಕಾಡುತ್ತಿದ್ದು, ಈ ಬಗ್ಗೆ ಚರ್ಚಿಸಿ ಮತ್ತು ಜಿಎಸ್ ಟಿ ಪರಿಣಾಮಗಳನ್ನು ಅವಲೋಕಿಸಿ ಮುಂದಿನ ನಿರ್ಧಾರಕ ಕೈಗೊಳ್ಳುತ್ತೇವೆ ಎಂದು ಕೆಎಸ್ ಆರ್ ಟಿಸಿ ಎಂಡಿ ಎಸ್ ಆರ್ ಉಮಾಶಂಕರ್ ಹೇಳಿದ್ದಾರೆ.
ಇದೇ ಜಿಎಸ್ ಟಿ ಕುರಿತಂತೆ ಮಾತನಾಡಿರುವ ಬಿಎಂಟಿಸಿ ಅಧಿಕಾರಿಯೊಬ್ಬರು, ಒಂದು ವೇಳೆ ತೆರಿಗೆ ಪ್ರಮಾಣ ಹೆಚ್ಚಾಗಿದ್ದರೆ ಅಗ ಅನಿವಾರ್ಯವಾಗಿ ಬಿಎಂಟಿಸ್ ಬಸ್ ಪ್ರಯಾಣ ದರವನ್ನು ಕೂಡ ಏರಿಕೆ ಮಾಡಲಾಗುತ್ತದೆ. ಆದರೆ ಪ್ರಸ್ತುತ ತೆರಿಗೆ ಏರಿಕೆ ಅಥವಾ ಇಳಿಕೆ ಬಗ್ಗೆ ತಮಗಿನ್ನೂ ಸ್ಪಷ್ಟಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಮಾಹಿತಿ ಲಭ್ಯವಾದ ಬಳಿಕ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನು ನಗರ ಪ್ರದೇಶಗಳಲ್ಲಿ ಹೆಚ್ಚಾಗಿರುವ ಓಲಾ, ಉಬರ್ ನಂತಹ ಕ್ಯಾಬ್ ಸೇವಗಳ ಮೇಲಿನ ತೆರಿಗೆ ಕೂಡ ಶೇ.1ರಷ್ಟು ಕಡಿತವಾಗಿದ್ದು, ಇದು ಗ್ರಾಹಕರಿಗೆ ಅನುಕೂಲವಾಗಲಿದೆ. ಆದರೆ ಮಧ್ಯವರ್ತಿಗಳಿಂದ ಕಾರುಗಳನ್ನು ಲೀಸ್ ಗೆ ಪಡೆದ ಚಾಲಕರು ಕೇಂದ್ರ ಸರ್ಕಾರ ವಿಧಿಸಿರುವ ಶೇ.43ರಷ್ಟು ತೆರಿಗೆಯನ್ನು ಪಾವತಿ ಮಾಡಲೇಬೇಕಿರುತ್ತದೆ. ಈ ಹಿಂದೆ ಇದರ ಪ್ರಮಾಣ ಶೇ.29ರಷ್ಟಿತ್ತು. ಹಳೆಯ ತೆರಿಗೆಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ.14.5ರಷ್ಟು ಹೆಚ್ಚುವರಿ ತೆರಿಗೆಯನ್ನು ಪಾವತಿ ಮಾಡಬೇಕಿರುತ್ತದೆ. ಹೀಗಾಗಿ ಸಂಸ್ಥೆಗಳು ಹೆಚ್ಚುವರಿ ತೆರಿಗೆಯನ್ನು ತಾವೇ ಪಾವತಿ ಮಾಡಬೇಕೆ ಅಥವಾ ಚಾಲಕರ ಮೇಲೆ ತೆರಿಗೆ ಹಾಕಬೇಕೆ ಎಂಬುದನ್ನು ಚರ್ಚೆ ನಡೆಸುತ್ತಿವೆ.
Advertisement