ಆರ್'ಎಸ್ಎಸ್ ರುದ್ರೇಶ್ ಕೊಲೆ ಯೋಜಿತ ಪಿತೂರಿ: ಪೊಲೀಸರು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ರುದ್ರೇಶ್ ಕೊಲೆಯೊಂದು ಯೋಜಿತ ಪಿತೂರಿಯಾಗಿದ್ದು ಎಂದು ರಾಜ್ಯ ಪೊಲೀಸ್ ಇಲಾಖೆ ಹೈಕೋರ್ಟ್ ಗೆ ಗುರುವಾರ...
ಹತ್ಯೆಯಾದ ಆರ್'ಎಸ್ಎಸ್ ಕಾರ್ಯಕರ್ತ ರುದ್ರೇಶ್
ಹತ್ಯೆಯಾದ ಆರ್'ಎಸ್ಎಸ್ ಕಾರ್ಯಕರ್ತ ರುದ್ರೇಶ್
ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ರುದ್ರೇಶ್ ಕೊಲೆಯೊಂದು ಯೋಜಿತ ಪಿತೂರಿಯಾಗಿದ್ದು ಎಂದು ರಾಜ್ಯ ಪೊಲೀಸ್ ಇಲಾಖೆ ಹೈಕೋರ್ಟ್ ಗೆ ಗುರುವಾರ ಮಾಹಿತಿ ನೀಡಿದೆ. 
ಆರ್'ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ ತನ್ನ ವಿರುದ್ಧ ನಡೆಸುತ್ತಿರುವ ತನಿಖೆಯನ್ನು ರದ್ದುಪಡಿಸುವಂತೆ ಕೋರಿ ಇರ್ಫಾನ್ ಪಾಷಾ ಸೇರಿ ಇತರ ಐವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನಿನ್ನೆಯಷ್ಟೇ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಕುರಿತು ಅರ್ಜಿದಾರರು ಮತ್ತು ಪ್ರತಿವಾದಿಗಳ ವಾದ ಆಲಿಸಿದ ನ್ಯಾ.ಮೈಕಲ್ ಡಿ. ಕುನ್ಹಾ ಅವರು ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದಾರೆ. 
ವಿಚಾರಣೆ ವೇಳೆ ಆರೋಪಿಗಳ ಅರ್ಜಿಗೆ ಅಕ್ಷೇಪಣೆ ವ್ಯಕ್ತಪಡಿಸಿ ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರ ಪರ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು, ಆರೋಪಿಗಳು ಒಂದು ಸಂಘಟನೆಯ ಸದಸ್ಯಕರಾಗಿದ್ದು, ಹತ್ಯೆಯೊಂದು ವ್ಯವಸ್ಥಿತ ಪಿತೂರಿಯಾಗಿದೆ. ಹತ್ಯೆಯಾದ ರುದ್ರೇಶ್ ಹಾಗೂ ಆರೋಪಿಗಳ ನಡುವೆ ಯಾವುದೇ ರೀತಿಯ ವೈಯಕ್ತಿಕ ದ್ವೇಷಗಳಿರಲಿಲ್ಲ. ವ್ಯವಸ್ಥಿತ ಪಿತೂರಿ ರುದ್ರೇಶ್ ರನ್ನು ಕೊಂದಿರುವ ಬಗ್ಗೆ ವಿಚಾರಣೆ ವೇಳೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಮೊಬೈಲ್ ಕರೆಗಳ ದಾಖಲೆ ಪರಿಶೀಲಿಸಿದಾಗ, ಹೊರರಾಜ್ಯದಲ್ಲಿ ಪಿತೂರಿ ಸಂಚು ನಡೆದಿರುವುದು ಹಾಗೂ ನಿರ್ದಿಷ್ಟ ಸಮುದಾಯದ ವಿರುದ್ಧ ಭಯೋತ್ಪಾದನಾ ಕೃತ್ಯ ನಡೆಸಲು ಉದ್ದೇಶಿಲಾಗಿತ್ತು ಎಂಬುವುದೂ ಕೂಡ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. 
ಮೊದಲನೇ ಆರೋಪಿಗೆ ಅಂತಾರಾಜ್ಯ ಸಂಘಟನೆಗಳೊಂದಿಗೆ ಸಂಪರ್ಕವಿದ್ದು, ಇದು ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯ ಮೇಲೆ ದುಷ್ಪರಿಣಾಮ ಬೀರುವಂತಿದೆ. ತನಿಖಾ ದಾಖಲೆಗಳು ಪೂರಕವಾಗಿರುವ ಕಾರಣ ಅಧೀನ ನ್ಯಾಯಾಲಯ ಆರೋಪಿಗಳ ವಿರುದ್ಧ ಕಾನೂನು ಬಾರಿರ ಚಟುವಟಿಕೆಗಳ ಕಾಯ್ದೆಯಡಿಯಲ್ಲಿ ತನಿಖೆ ನಡೆಸಲು ಅನುಮತಿ ನೀಡಿದೆ. ಹೀಗಾಗಿ ಆರೋಪಿಗಳ ವಿರುದ್ಧದ ಎನ್ಐಎ ತನಿಖೆಯನ್ನು ರದ್ದುಪಡಿಸಬಾರದು ಎಂದು ಮನವಿ ಮಾಡಿದರು.
2016ರ ಅಕ್ಟೋಬರ್ ತಿಂಗಳಿನಲ್ಲಿ ಶಿವಾಜಿನಗರದಲ್ಲಿರುವ ಕಾಮರಾಜ ರಸ್ತೆ ಬಳಿ ಬೈಕ್ ನಲ್ಲಿ ಬಂದ ಕೆಲ ದುಷ್ಕರ್ಮಿಗಳು ರುದ್ರೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರನೇ ಆರೋಪಿ ಈಗಲೂ ತಲೆಮರೆಸಿಕೊಂಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com