
ಬೆಂಗಳೂರು: ನಗರದ ಎನ್ ಆರ್ ವೃತ್ತದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಅವರ ಮೇಲೆ ಭೀಕರ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಮಧುಕರ್ ರೆಡ್ಡಿ ಅಲಿಯಾಸ್ ಮದನ್ ರೆಡ್ಡಿಯನ್ನು ಸಂತ್ರಸ್ತೆ ಜ್ಯೋತಿ ಉದಯ್ ಅವರು ಗುರುತಿಸಿದ್ದಾರೆ.
ಪ್ರಕರಣ ಸಂಬಂಧ ಶುಕ್ರವಾರ ಆರೋಪಿ ಮಧುಕರ್ ರೆಡ್ಡಿಯನ್ನು 6ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಆರೋಪಿಯ ಗುರುತು ಪತ್ತೆಗೆ ಪರೇಡ್ ಸಹ ನಡೆಯಿತು. ನ್ಯಾಯಾಲಯಕ್ಕೆ ಬಂದಿದ್ದ ದೂರುದಾರರಾದ ಜ್ಯೋತಿ ಉದಯ್ ಅವರು ನ್ಯಾಯಾಧೀಶರು ಹಾಗೂ ತಹಸೀಲ್ದಾರ್ ಅವರ ಎದುರೇ ಆರೋಪಿಯನ್ನು ಗುರುತಿಸಿದರು. ಅಂದು ತಮ್ಮ ಮೇಲೆ ನಡೆದ ಭೀಕರ ಹಲ್ಲೆ ನಡೆಸಿದ್ದು, ಈತನೇ ಎಂದು ಖುದ್ಧ ಜ್ಯೋತಿ ಉದಯ್ ಹೇಳಿದ್ದಾರೆ. ಜ್ಯೋತಿ ಉದಯ್ ಅವರ ಗುರುತು ಪತ್ತೆ ಬಳಿಕೆ ಆರೋಪಿ ರೆಡ್ಡಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದ ಜೈಲಿನಿಂದ ರೆಡ್ಡಿಯನ್ನು ಕರೆದುಕೊಂಡು ಬಂದಿದ್ದ ಎಸ್.ಜೆ.ಪಾರ್ಕ್ ಠಾಣೆಯ ಪೊಲೀಸರು ನ್ಯಾಯಾಲಯದ ಅನುಮತಿಯಂತೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಪ್ರಕರಣದ ವಿಚಾರಣೆ ಬಹುತೇಕ ಮುಕ್ತಾಯವಾಗಿದ್ದರಿಂದ ಶುಕ್ರವಾರ ಪುನಃ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು."ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದೇವೆ. ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಿದ್ಧಪಡಿಸುತ್ತಿದ್ದು, ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ" ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಕಳೆದ ಜನವರಿ 31ರ ರಾತ್ರಿ ಆಂಧ್ರಪ್ರದೇಶದ ನಲ್ಲಪಲ್ಲಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಮಧುಕರ್ ರೆಡ್ಡಿಯನ್ನು ಅಲ್ಲಿಯ ಪೊಲೀಸರು ಬಂಧಿಸಿದ್ದರು. ಆತನೇ ಬೆಂಗಳೂರಿನ ಎಟಿಎಂನಲ್ಲಿ ಜ್ಯೋತಿ ಅವರ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಎಂಬುದು ಬಳಿಕ ಗೊತ್ತಾಗಿತ್ತು.ಜತೆಗೆ ಆತನ ವಿರುದ್ಧ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ವಶಕ್ಕೆ ಪಡೆದ ಪೊಲೀಸರು ಇದೀಗ ಆರೋಪಿಯನ್ನು ಬೆಂಗಳೂರು ಪೊಲೀಸರ ವಶಕ್ಕೆ ನೀಡಿದ್ದಾರೆ.
Advertisement