ಬೆಂಗಳೂರು: ಬೆಂಗಳೂರು ಮತ್ತು ಹಾಸನ ನಡುವಿನ ನೇರ ರೈಲು ಮಾರ್ಗ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಶ್ರವಣಬೆಳಗೊಳ ಮಾರ್ಗವಾಗಿ ಇದು ಸಂಚರಿಸಲಿದೆ.ಯ ಇಂದು ಬೆಳಗ್ಗೆ 11 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಸಚಿವರ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಎರಡು ದಶಕಗಳ ಹಿಂದೆ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಮಂಜೂರಾಗಿದ್ದ ಈ 110 ಕಿಲೋ ಮೀಟರ್ ಉದ್ದದ ರೈಲು ಮಾರ್ಗ ಇಂದು ಉದ್ಘಾಟನೆಯ ಭಾಗ್ಯ ಕಾಣುತ್ತಿದೆ.
ಮೈಸೂರಿನಿಂದ ಸುತ್ತಿ ಬಳಸಿ ಮಾಡಬೇಕಿದ್ದ ಬೆಂಗಳೂರು-ಮಂಗಳೂರು ಪ್ರಯಾಣವನ್ನು ಈ ಮಾರ್ಗ ಕೊನೆಯಾಗಿಸಲಿದೆ. ಅಲ್ಲದೆ, ಪ್ರಯಾಣದ ಅವಧಿಯಲ್ಲೂ ಸುಮಾರು 4 ಗಂಟೆ ಉಳಿತಾಯ ವಾಗಲಿದೆ. ಈ ಹೊಸ ಮಾರ್ಗವು ಬೆಂಗಳೂರು ಹಾಸನ ನಡುವಿನ ಪ್ರಯಾಣವನ್ನೂ 50 ಕಿ.ಮೀ.ಗಳಷ್ಟು ಕಡಿಮೆಗೊಳಿಸಲಿದೆ. ಈ ಮೊದಲು ಬೆಂಗಳೂರು-ಮಂಗಳೂರು (ಮೈಸೂರು ಮೂಲಕ) 447 ಕಿ.ಮೀ. ಸಂಚರಿಸಬೇಕಾಗಿತ್ತು. ಈ ರೈಲು ಮಾರ್ಗದಿಂದಾಗಿ ಇನ್ನು ಮುಂದೆ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣದ ದೂರ 340 ಕಿಮೀಗೆ ಇಳಿಯಲಿದೆ.
ಬೆಂಗಳೂರು-ಮಂಗಳೂರು ನಡುವಣ ರೈಲ್ವೇ ಪ್ರಯಾಣ ಪುಣ್ಯಕ್ಷೇತ್ರಗಳ ಪಯಣವೂ ಆಗಲಿದೆ. ಯಡಿಯೂರು ಸಿದ್ದಲಿಂಗೇಶ್ವರ ದಿಂದ ಆರಂಭಗೊಳ್ಳುವ ಪುಣ್ಯಕ್ಷೇತ್ರಗಳ ಸಾಲು ಆದಿಚುಂಚನಗಿರಿ, ಶ್ರವಣಬೆಳಗೊಳ, ಸುಬ್ರಹ್ಮಣ್ಯ, ಧರ್ಮಸ್ಥಳಗಳನ್ನು ಜೋಡಿಸಲಿದೆ.
ಹಾಸನ-ಬೆಂಗಳೂರು ಇಂಟರ್ ಸಿಟಿ: ಹೊಸ ರೈಲು ಮಾರ್ಗವು ಹಾಸನ ಮತ್ತು ಬೆಂಗಳೂರು ನಡುವಿನ ಪ್ರಯಾಣವನ್ನು ಇನ್ನಷ್ಟು ಸುಲಲಿತವಾಗಿಸಿದೆ. ಹಾಸನ ಮತ್ತು ಬೆಂಗಳೂರು ನಡುವೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಕೂಡಾ ಇಂದು ಆರಂಭವಾಗಲಿದ್ದು ನಿತ್ಯ ಬೆಳಗ್ಗೆ 6 ಗಂಟೆಗೆ ಹಾಸನದಿಂದ ಹೊರಟ ರೈಲು ಯಶವಂತಪುರವನ್ನು 9.30ಕ್ಕೆ ತಲುಪಲಿದೆ.
ಯಶವಂತಪುರದಿಂದ ಸಂಜೆ 6 ಕ್ಕೆ ಹೊರಡುವ ರೈಲು ರಾತ್ರಿ 9.30ಕ್ಕೆ ಹಾಸನ ಸೇರಲಿದೆ. ಚಿಕ್ಕಬಾಣಾವರ, ಕುಣಿಗಲ್, ಯಡಿಯೂರು, ಬಾಲಗಂಗಾಧರ ನಗರ (ಆದಿಚುಂಚನಗಿರಿ ಕಾಲೇಜು/ಬೆಳ್ಳೂರು ಕ್ರಾಸ್), ಶ್ರವಣಬೆಳಗೊಳ, ಚೆನ್ನರಾಯಪಟ್ಟಣಗಳಲ್ಲಿ ನಿಲುಗಡೆ ಇರಲಿದೆ.
ಮಾ.26ರಿಂದ ಮೂರು ನೂತನ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಮೂರು ರೈಲುಗಳ ಪೈಕಿ ಒಂದಕ್ಕೆ ಗೊಮ್ಮಟೇಶ್ವರ, ಮತ್ತೊಂದಕ್ಕೆ ಹೇಮಾವತಿ ಹಾಗೂ ಇನ್ನೊಂದಕ್ಕೆ ಕಾಲಭೈರವೇಶ್ವರ ಎಂದು ಹೆಸರಿಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪತ್ರ ಬರೆದಿದ್ದೇನೆ ಎಂದು ಮಾಜಿ ಪ್ರಧಾನಿ ಸಂಸದ ಎಚ್.ಡಿ. ದೇವೇಗೌಡ, ತಿಳಿಸಿದ್ದಾರೆ.