
ಬೆಂಗಳೂರು: ಕೃಷ್ಣ ರಾಜೇಂದ್ರ ಮಾರುಕಟ್ಟೆಯಿಂದ ನ್ಯಾಷನಲ್ ಕಾಲೇಜು ನಡುವಿನ 4 ಕಿ.ಮೀ. ಮೆಟ್ರೋ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹಸಿರು ನಿಶಾನೆ ತೋರಿದ್ದಾರೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಕನಕಪುರ ರಸ್ತೆ ವರೆಗೆ ಕೆಆರ್ ಮಾರುಕಟ್ಟೆ ನಿಲ್ದಾಣದ ಮೂಲಕವಾಗಿ ಸಂಚರಿಸುವ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಹಸಿರು ನಿಶಾನೆ ತೋರಿದರು. ಕಾರ್ಯಕ್ರಮದಲ್ಲಿ ಬಿಎಂಆರ್ ಸಿಎಲ್ ನ ಹಿರಿಯ ಅಧಿಕಾರಿಗಳು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು.
ಈ ಹಿಂದೆ ತಿಂಗಳೊಳಗಾಗಿ ಪರೀಕ್ಷಾರ್ಥ ಸಂಚಾರ ಮುಗಿಸಿ, ಮೊದಲ ಹಂತವನ್ನು ಸಂಪೂರ್ಣವಾಗಿ ಪ್ರಯಾಣಕ್ಕೆ ಮುಕ್ತಗೊಳಿಸುವಂತೆ ಸರ್ಕಾರ ಗಡುವು ನೀಡಿತ್ತು. ಅದರಂತೆ ಉತ್ತರ-ದಕ್ಷಿಣ ಮೆಟ್ರೋ ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರಕ್ಕೆ ಅನುವು ಮಾಡಿಕೊಡಲು ತಾಂತ್ರಿಕ ಕಾಮಗಾರಿಗಳಿಗಾಗಿ ಮಾರ್ಚ್ 12ರಿಂದ 10 ದಿನ ರಾಜಾಜಿನಗರ-ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸುರಂಗ ಮಾರ್ಗದಲ್ಲಿ ಈವರೆಗೂ 18ಕ್ಕೂ ಹೆಚ್ಚು ಪರೀಕ್ಷೆ ಮುಗಿದಿದ್ದು, ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್, ಚಿಕ್ಕಪೇಟೆ ಹಾಗೂ ಕೆ.ಆರ್. ಮಾರ್ಕೆಟ್ ನೆಲದಾಳದ 3 ನಿಲ್ದಾಣಗಳಲ್ಲಿ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ನಡೆಸಿದೆ.
ಕೆ.ಆರ್. ಮಾರ್ಕೆಟ್ ನಿಂದ ಸುರಂಗದಿಂದ ಹೊರಬರುವ ರೈಲು ನ್ಯಾಷನಲ್ ಕಾಲೇಜು ದಾಟಿ ಕನಕಪುರ ರಸ್ತೆಯ ಯಲಚೇನಹಳ್ಳಿಯವರೆಗೆ ಸಾಗಲಿದೆ. ನಾಗಸಂದ್ರ-ಯಲಚೇನಹಳ್ಳಿ ನಡುವಿನ ಸುಮಾರು 24.2 ಕಿಮೀ ಮಾರ್ಗದಲ್ಲಿ ಕಳೆದ 4 ತಿಂಗಳಿನಿಂದ ಪರೀಕ್ಷಾರ್ಥ ಸಂಚಾರ ನಡೆಯುತ್ತಿದ್ದು, ನೆಲದಾಳದ ನಿಲ್ದಾಣಗಳ ಪೈಕಿ ಮೆಜೆಸ್ಟಿಕ್ ಹಾಗೂ ಕೆ.ಆರ್. ಮಾರ್ಕೆಟ್ ಮೆಟ್ರೋ ನಿಲ್ದಾಣಗಳ ಕಾಮಗಾರಿ ಮುಕ್ತಾಯವಾಗಿದೆ. ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಏಪ್ರಿಲ್ ಒಳಗೆ ಕಾಮಗಾರಿ ಮುಗಿಸಲು ನಿಗಮ ನಿರ್ಧರಿಸಿದೆ.
ಮೆಟ್ರೋ ರೈಲು ನಿಲ್ದಾಣಕ್ಕೆ ಮೋನೋ ರೈಲು ಸಂಪರ್ಕ: ಕೆಜೆ ಜಾರ್ಜ್
ಈ ವೇಳೆ ಮಾತನಾಡಿದ ಸಚಿವ ಕೆಜೆ ಜಾರ್ಜ್ ಅವರು, ಮೆಟ್ರೋ ರೈಲು ನಿಲ್ದಾಣಗಳಿಗೆ ಮೋನೋ ರೈಲು ಸಂಪರ್ಕ ನೀಡುವ ಕುರಿತು ಸರ್ಕಾರ ಚಿಂತನೆಯಲ್ಲಿದೆ. ಮೆಟ್ರೋ ರೈಲು ನಿಲ್ದಾಣದಿಂದ 5-6 ಕಿ.ಮೀ ದೂರದಲ್ಲಿರುವ ಪ್ರಮುಖ ಬಡಾವಣೆಗಳ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲು ಈ ಚಿಂತನೆ ನಡೆಸಿರುವುದಾಗಿ ತಿಳಿಸಿದರು.
Advertisement