ಮಿನರಲ್ ವಾಟರ್ ಸುಲಿಗೆ: ಮಾಲ್, ಮಲ್ಟಿಪ್ಲೆಕ್ಸ್'ಗಳ ಮೇಲೆ ಇಲಾಖೆ ದಾಳಿ

ಮಿನರಲ್ ವಾಟರ್ ಮಾರಾಟದಲ್ಲಿ ಸುಲಿಗೆ ಮಾಡುತ್ತಿರುವ ಮಾಲ್'ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳ ಮೇಲೆ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿರುವ ಆಹಾರ ಇಲಾಖೆ, ಅಂತಹವರಿಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಮಿನರಲ್ ವಾಟರ್ ಮಾರಾಟದಲ್ಲಿ ಸುಲಿಗೆ ಮಾಡುತ್ತಿರುವ ಮಾಲ್'ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳ ಮೇಲೆ ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸಿರುವ ಆಹಾರ ಇಲಾಖೆ, ಅಂಥಹವರಿಗೆ ನೋಟಿಸ್ ಜಾರಿ ಮಾಡಿದೆ. 
ಪ್ರವೇಶ ದರ ವಿಚಾರದಲ್ಲಿ ಮಲ್ಟಿಪ್ಲೆಕ್ಸ್ ಗಳಿಗೆ ಬಿಸಿ ಮುಟ್ಟಿಸಿದ್ದ ರಾಜ್ಯ ಸರ್ಕಾರ, ದುಬಾರಿ ಬೆಲೆಯ ಕುಡಿಯುವ ನೀರಿನ ಬಾಟಲ್ ಮಾರಾಟ ವಿಚಾರದಲ್ಲಿಯೂ ಮಲ್ಟಿಪ್ಲೆಕ್ಸ್ ಹಾಗೂ ಮಾಲ್ ಮೇಲೆ ನಿನ್ನೆ ಚಾಟಿ ಬೀಸಿದೆ. 
ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ನಗರ ಸೇರಿದಂತೆ ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿನ ಮಾಲ್ ಮತ್ತು ಇತರ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆದಿದೆ. ನಗರ 17 ಮಾಲ್ ಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಪ್ರತಿಷ್ಠಿತ ಯುಬಿ ಸಿಟಿ ಮಾಲ್ ನಲ್ಲಿ ರೂ.20 ನ ನೀರಿನ ಬಾಟಲಿಯನ್ನು ರೂ.120ಕ್ಕೆ ಮಾರಾಟ ಮಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. 
ಇದೇ ರೀತಿ ಇತರ ಮಾಲ್ ಗಳಲ್ಲಿಯೂ ರೂ.20 ನೀರಿನ ಬಾಟಲ್ ಗಳನ್ನು ವಿವಿಧ ದರಗಳಳ್ಲಿ ಮಾರಾಟ ಮಾಡುತ್ತಿರುವುದು ದಾಳಿ ವೇಳೆ ಕಂಡು ಬಂದಿದೆ. 
ದಾಳಿ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಯು.ಟಿ. ಖಾದರ್ ಅವರು, ಬೆಂಗಳೂರು ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಸುಮಾರು 188ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ದಾಳಿ ನಡೆಸಿ 46 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು. 
ಮಾಲ್ ಎಂಆರ್ ಪಿ ಗಿಂತಲೂ ಹೆಚ್ಚಿನ ಹಣವನ್ನು ಪಡೆಯಲಾಗುತ್ತಿದೆ ಎಂದು ಹೇಳಿ ಹಲವಾರು ದೂರುಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ಮಾಲ್ ಹಾಗೂ ಮಲ್ಟಿಪ್ಲೆಕ್ಸ್ ಗಳ ಮೇಲೆ ದಾಳಿ ಮಾಡಲಾಗಿತ್ತು. 
ದಾಳಿ ನಡೆಸಿದ ಬಳಿದ ಎಂಆರ್ ಪಿ ಗಿಂತ ಹೆಚ್ಚಿನ ದರ ನಿಗದಿ ಮಾಡಿದ ತಯಾರಕರು, ಮಾರಾಟ ಮಾಡುವವರ ವಿರುದ್ಧ ಕೇಸು ದಾಖಲಿಸಲಾಗಿದೆ. ಅಲ್ಲದೆ, ಎಂಆರ್ ಪಿ ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ನೀರನ್ನು ವಶಪಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. 
ಮಾಲ್ ಗಳಲ್ಲಿ ಗ್ರಾಹಕರು ಹೊರಗಿನಿಂದ ನೀರನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಮಾಲ್ ಗಳಲ್ಲಿ ಮಾರಾಟ ಮಾಡುವ ಹೆಚ್ಚಿನ ದರದ ನೀರನ್ನೇ ಜನರು ಖರೀದಿಸುವಂತೆ ಮಾಡಲಾಗಿದೆ. ಇದು ಕೇಂದ್ರ ಸರ್ಕಾರದ ಕಾನೂನು ಮಾಪನ ಕಾಯ್ದೆ 2014ರ ಗ್ರಾಹಕರ ಸರಕುಗಳ ಪ್ಯಾಕೇಜ್ ನಿಯಮಗಳಿಗೆ ವಿರುದ್ಧವಾಗಿದೆ. ಆದ್ದರಿಂದ ನೀರನ್ನು ಅಗತ್ಯ ಸರಕು ವ್ಯಾಪ್ತಿಗೆ ತಂದು ಎಲ್ಲಾ ಕಡೆ ಒಂದೇ ಎಂಆರ್ ಪಿ ದರದಲ್ಲಿ ಸಿಗುವಂತೆ ಮಾಡಬೇಕು. ಇದಕ್ಕಾಗಿ ಕೇಂದ್ರದ ಕಾನೂನಿಗೆ ತಿದ್ದುಪಡಿ ತಂದು ನಿಯಮ ಬಲಿಷ್ಟಗೊಳಿಸಬೇಕಿದೆ ಎಂದಿದ್ದಾರೆ. 
ಪ್ರಸ್ತುತ ಇರುವ ಕಾಯ್ದೆ ಪ್ರಕಾರ ತಪ್ಪು ಮಾಡಿದ ಮಾಲ್ ಮತ್ತು ಮಾರಾಟಗಾರರು ಆರಂಭದಲ್ಲಿ ರೂ.2000 ದಂಡ ಪಾವತಿಸಬೇಕು. ಎರಡನೇ ಬಾರಿ ತಪ್ಪು ಮಾಡಿದರೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದನ್ನು ಇನ್ನೂ ಹೆಚ್ಚು ಮಾಡಬೇಕೆಂದು ಕೋರಿಕೆ ಸಲ್ಲಿಸಲಾಗುವುದು.
ಬೆಂಗಳೂರು ನಗರದಲ್ಲಿ ಈ ವರೆಗೂ 10 ಪ್ರಕರಣಗಳು, ಬೆಳಗಾವಿಯಲ್ಲಿ 17, ಕಲಬುರ್ಗಿಯಲ್ಲಿ 15 ಮತ್ತು ಇತರೆ ಪ್ರದೇಶದಲ್ಲಿ 2 ಪ್ರಕರಣಗಳು ದಾಖಲಾಗಿವೆ ಎಂದು ಖಾದರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com