ಒಂದೇ ತಿಂಗಳಲ್ಲಿ ಇಬ್ಬರು ಮಾವುತರ ಸಾವು; ಆನೆಯ ಮದ್ಯ ವ್ಯಸನವೇ ಕಾರಣ ಎಂಬ ಶಂಕೆ
ಮಡಿಕೇರಿ: ಕೇವಲ ಒಂದು ತಿಂಗಳ ಅವಧಿಯಲ್ಲಿ ಆನೆಯೊಂದು ಇಬ್ಬರು ಮಾವುತರ ಬಲಿ ತೆಗೆದುಕೊಂಡಿರುವ ಘಟನೆ ದುಬಾರೆ ಆನೆ ಶಿಬಿರದಲ್ಲಿ ನಡೆದಿದೆ.
ತನ್ನ ಶಾಂತ ಸ್ವಭಾವದಿಂದಲೇ ಖ್ಯಾತಿ ಗಳಿಸಿರುವ ದಸರಾ ಆನೆ ವಿಜಯಾ ಸಂತತಿಯ ಕಾರ್ತಿಕ್ ಎಂಬ ಕೇವಲ ಒಂದು ತಿಂಗಳಲ್ಲಿ ತನ್ನ ಇಬ್ಬರು ಮಾವುತರನ್ನು ಕೊಂದು ಹಾಕಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೇವಲ 7 ವರ್ಷ ಪ್ರಾಯದ ಕಾರ್ತಿಕ್ ಆನೆ ಕಳೆದ ಏಪ್ರಿಲ್ 17ರಂದು ಅಣ್ಣು ಎಂಬ ಮಾವುತನನ್ನು ತಿವಿದು ಕೊಂದು ಹಾಕಿತ್ತು. ಇದಾದ ಕೆಲವೇ ದಿನಗಳಲ್ಲಿ ಅಂದರೆ ಕಳೆದ ಗುರುವಾರ ಮಣಿ ಎಂಬ ಮಾವುತನನ್ನು ಕೊಂದು ಹಾಕಿದೆ.
ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ತಜ್ಞರು ಅಭಿಪ್ರಾಯಪಟ್ಟಿರುವಂತೆ ಯಾವುದೇ ಅನೆ ಅದರಲ್ಲೂ ಪ್ರಮುಖವಾಗಿ ಪಳಗಿದ ಆನೆಗಳು ಸಾಮಾನ್ಯವಾಗಿ ಯಾರ ಮೇಲೂ ದಾಳಿ ಮಾಡುವುದಿಲ್ಲ. ಒಂದು ಅವುಗಳಿಗೆ ಪ್ರಚೋದನೆಯಾಗಿದ್ದರೆ ಅಥವಾ ಅವು ಮದ್ಯದಂತಹ ದ್ರವ್ಯಗಳನ್ನು ಸೇವಿಸಿದ್ದರೆ, ಇಲ್ಲವೇ ಮದವೇರಿದ್ದರೆ ಮಾತ್ರ ಹೀಗೆ ಆಕ್ರೋಶ ಭರಿತವಾಗಿ ವರ್ತಿಸುತ್ತವೆ. ಇಲ್ಲವಾದಲ್ಲಿ ಆನೆಗಳು ಬಹುತೇಕ ಶಾಂತ ಸ್ವಭಾವಿ ಪ್ರಾಣಿ ಎಂದು ಹೇಳಿದ್ದಾರೆ.
1998ರಲ್ಲಿ ವಿಜಯ ಆನೆಯನ್ನು ಕಟ್ಟೇಪುರ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹಿಡಿದು ದುಬಾರೆ ಆನೆ ಶಿಬಿರಕ್ಕೆ ತಂದು ಪಳಗಿಸಲಾಗಿತ್ತು, ಬಳಿಕ ಆನೆಯ ಶಾಂತ ಸ್ವಭಾವವನ್ನು ಕಂಡು ಅದನ್ನು ದಸರಾ ಮೆರವಣಿಗೆಗೆ ಸೇರಿಸಲಾಗಿತ್ತು. ಇದರ ಸಂತತಿಯೇ ಕಾರ್ತಿಕ್ ಆನೆಯಾಗಿದ್ದು, ಇದೇ ಆನೆ ಇದೀಗ ಇಬ್ಬರು ಮಾವುತರನ್ನು ಕೊಂದು ಹಾಕಿದೆ.
ಇನ್ನು ಕಾರ್ತಿಕ್ ಆನೆಯ ಈ ವಿಚಿತ್ರ ವರ್ತನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲವಾದರೂ, ಮದ್ಯಸೇವನೆಯಿಂದಾಗಿ ಆನೆ ಈ ರೀತಿ ವರ್ತಿಸಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಹೀಗಾಗಿ ದುಬಾರೆ ಆನೆ ಶಿಬಿರದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಈ ಬಗ್ಗೆ ಮಾವುತರಿಂದ ಹೇಳಿಕೆ ಪಡೆಯಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಆನೆಯನ್ನು ಬಂಧಿಸಿ, ಮುಂದಿನ ಮೂರು ತಿಂಗಳ ಕಾಲ ಪುಂಡ ಆನೆಗೆ ನೀಡುವ ಚಿಕಿತ್ಸೆಯನ್ನೇ ಕಾರ್ತಿಕ್ ಆನೆಗೆ ನೀಡಲಾಗುತ್ತದೆ. ಅಂತೆಯೇ ತರಬೇತಿ ನೀಡಲಾಗುತ್ತದೆ ಎಂದು ಸ್ಥಳೀಯ ಡಿಸಿಎಫ್ ಸೂರ್ಯ ಸೇನ್ ತಿಳಿಸಿದ್ದಾರೆ.
ಆನೆ ವರ್ತನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಐಐಎಸ್ ಸಿಯ ಪ್ರಾಣಿ ಶಾಸ್ತ್ರ ವಿಭಾಗದ ತಜ್ಞ ರಮಣ್ ಕುಮಾರ್ ಅವರು, ಆನೆಯ ಈ ರೀತಿಯ ವರ್ತನೆಗೆ ನಿಖರ ಕಾರಣ ಹೇಳಲು ಕಷ್ಟ. ಸಾಮಾನ್ಯನಾಗಿ ಆನೆಗಳು ಶಾಂತ ಸ್ವಭಾವ ಪ್ರಾಣಿಗಳು. ತಮಗೆ ಆಪಾಯವಿದೆ ಎಂಬ ಆಲೋಚನೆ ತಮಗೆ ಬರದ ಹೊರತು ಅವು ಯಾರ ಮೇಲೂ ದಾಳಿ ಮಾಡುವುದಿಲ್ಲ. ಮತ್ತೊಂದು ಅಂಶವೆಂದರೆ ಆನೆಗೆ ಮದವೇರಿದ್ದರೆ, ಅಥವಾ ಆನೆ ಮದ್ಯ ಸೇವಿಸಿದ್ದರೆ ಅದರ ಮೆದುಳಿನ ನಿಯಂತ್ರಣದಲ್ಲಿ ಏರುಪೇರಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಅದು ಆಕ್ರೋಶಗೊಳ್ಳುತ್ತದೆ ಎಂದು ಹೇಳಿದ್ದಾರೆ.
ದುಬಾರೆ ಅನೆ ಶಿಬಿರ ಪ್ರವಾಸೋಧ್ಯಮ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿ ಗಳಿಸಿದ್ದು, ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಶಿಬರಿದಲ್ಲಿ ಸುಮಾರು 30 ಆನೆಗಳಿದ್ದು, ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಳಿಗೂ ಇಲ್ಲಿ ನಿತ್ಯ ತರಬೇತಿ ನೀಡಲಾಗುತ್ತದೆ. ಜನವಸತಿ ಪ್ರದೇಶಗಳಿಗೆ ನುಗ್ಗಿ ಹಾವಳಿ ಇಡುವ ಆನೆಗಳನ್ನು ತಂದು ಇಲ್ಲಿ ಪಳಗಿಸಲಾಗುತ್ತದೆ. ಹೀಗಾಗಿ ಪ್ರವಾಸಿಗರ ಸುರಕ್ಷತೆ ಹಾಗೂ ಕರ್ನಾಟಕ ಪ್ರವಾಸೋಧ್ಯಮ ಅಭಿವೃದ್ಧಿ ದೃಷ್ಟಿಯಿಂದಾಗಿ ಇಂತಹ ಘಟನೆಗಳು ಮಾರಕವಾಗಿದ್ದು, ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ