ಉಸಿರಾಟದ ಸಮಸ್ಯೆಯಿರುವವರಿಗೆ ಬೆಂಗಳೂರು ಸಿಟಿ ಯೋಗ್ಯವಲ್ಲ: ವೈದ್ಯರು

ಉದ್ಯಾನ ನಗರಿ ಬೆಂಗಳೂರಿನ ವಾಯುಮಾಲಿನ್ಯ ಮಟ್ಟ ದೆಹಲಿಯಷ್ಟಾಗದಿದ್ದರೂ ಕೂಡ ಉಸಿರಾಟದ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ವಾಯುಮಾಲಿನ್ಯ ಮಟ್ಟ ದೆಹಲಿಯಷ್ಟಾಗದಿದ್ದರೂ ಕೂಡ ಉಸಿರಾಟದ ಶ್ವಾಸಕೋಶದ ತೊಂದರೆಯಿರುವವರಿಗೆ ಬೆಂಗಳೂರು ನಗರ ಉತ್ತಮವಲ್ಲ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. 
ರಾಜೀವ್ ಗಾಂಧಿ ಹೃದ್ರೋಗ ಕಾಯಿಲೆ ಸಂಸ್ಥೆ ಮತ್ತು ಎಸ್ ಡಿಎಸ್ ಕ್ಷಯರೋಗ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಶಶಿಧರ್ ಬುಗ್ಗಿ, ಬೆಂಗಳೂರಿನಲ್ಲಿ ವಾಯುಮಾಲಿನ್ಯಕಾರಕ ಕಾಯಿಲೆಗಳನ್ನು ಹೊಂದಿರುವವರ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಹೇಳುತ್ತಾರೆ.
ದೆಹಲಿಗೆ ಹೋಲಿಸಿದರೆ ಬೆಂಗಳೂರಿನ ಮಾಲಿನ್ಯ ಮಟ್ಟ ಕಡಿಮೆ. ಇಲ್ಲಿ ತೇವಾಂಶವು ಪ್ರಮುಖ ಪಾತ್ರ ವಹಿಸುತ್ತದೆ. ಇವು ಉಸಿರಾಟದ ತೊಂದರೆಯೊಂದಿಗೆ ಹಲವು ರೋಗಗಳಿಗೂ ಕಾರಣವಾಗುತ್ತದೆ. ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಅಸ್ತಮಾ ಮೊದಲಾದ ಕಾಯಿಲೆಗಳಿಗೆ ಕಾರಣವಾಗುತ್ತದೆ. 
ವಾಯುಮಾಲಿನ್ಯ ಹೆಚ್ಚಾಗಿರುವ ನಗರಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎನ್ನುತ್ತಾರೆ ಡಾ. ಬುಗ್ಗಿ. ಬೆಂಗಳೂರಿನಲ್ಲಿ ಸಹ ಇದನ್ನು ಕಾಣಬಹುದು. ಬೆಂಗಳೂರಿನಲ್ಲಿ ನಿರ್ಮಾಣ ಕಟ್ಟಡಗಳಿಂದ ಬರುವ ಧೂಳು, ವಾಹನಗಳಿಂದ ಬರುವ ಹೊಗೆ ಮಾಲಿನ್ಯ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ವಾಹನಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಡಾ.ಬುಗ್ಗಿ.
ಈ ಮಧ್ಯೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಸಮಾಲೋಚಕ ಶ್ವಾಸಕೋಶಶಾಸ್ತ್ರಜ್ಞ ಡಾ.ಹೀರೆಣಪ್ಪ ಬಿ.ಉಂಡೂರು, ದೆಹಲಿಗೆ ಹೋಲಿಸಿದರೆ ಉಸಿರಾಟಕ್ಕೆ ಬೆಂಗಳೂರು ನಗರ ಸುರಕ್ಷಿತ ನಗರ. ಧೂಳು ಮತ್ತು ಹೊಗೆಯಿಂದ ಸಾಮಾನ್ಯವಾಗಿ ಉಸಿರಾಟದ ತೊಂದರೆ ಬರುತ್ತದೆ. ಇಂತಹ ಸಂದರ್ಭದಲ್ಲಿ ವಾಯು ಸ್ವಚ್ಛತೆ ಕ್ರಮಗಳು ಸ್ವಲ್ಪ ಸಹಾಯವಾಗಬಹುದು. ನಗರಗಳಲ್ಲಿ ಜನರು ಹೆಚ್ಚಾಗಿ ಹೊರಗೆ ಸಮಯಗಳನ್ನು ಕಳೆಯುತ್ತಾರೆ. ಹೀಗಾಗಿ ನಗರದ ಗಾಳಿಯ ಬಗ್ಗೆ ಹೆಚ್ಚು ಗಮನ ಹರಿಸುವುದು ಒಳಿತು ಎನ್ನುತ್ತಾರೆ ಡಾ. ಉಂಡೂರ್.
ಕಳಪೆ ರಸ್ತೆಗಳು ನಗರದ ಮಾಲಿನ್ಯ ಪ್ರಮಾಣವನ್ನು ಮತ್ತಷ್ಟು ಹದಗೆಡಿಸುತ್ತದೆ. 
ಇನ್ನೊಂದೆಡೆ ಪರಿಸರತಜ್ಞರು ಬೆಂಗಳೂರಿನ ವಾಯುಮಾಲಿನ್ಯ ಮಟ್ಟ ಇನ್ನು ನಾಲ್ಕೈದು ವರ್ಷಗಳಲ್ಲಿ ದೆಹಲಿಯಂತಾಗಬಹುದು ಎನ್ನುತ್ತಾರೆ. ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಮತ್ತು ನಗರದ ಸುತ್ತ ಹಸಿರು ಕಣ್ಮರೆಯಾಗುತ್ತಿರುವುದು ಇದಕ್ಕೆ ಕಾರಣವಾಗಿದೆ ಎನ್ನುತ್ತಾರೆ ಪರಿಸರವಾದಿ ದುರ್ಗೇಶ್ ಅಗ್ರಹರಿ, ಸರ್ಕಾರ ನಗರದ ಹೊರಭಾಗಗಳಲ್ಲಿ ಸ್ಯಾಟಲೈಟ್ ಟೌನ್ ಗಳನ್ನು ಸ್ಥಾಪಿಸಬೇಕು. ಅದನ್ನು ಐಟಿ ಕೇಂದ್ರವನ್ನಾಗಿಯೂ ಮಾಡಬಹುದು ಎನ್ನುತ್ತಾರೆ ಅಗ್ರಹರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com