ಬೆಂಗಳೂರು: ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ವೈದ್ಯಕೀಯ ಸೇವೆಗಳಿಗೆ ಸಮಾನವಾಗಿ ದಾದಿಯರು ಇಲ್ಲ, ಇದರಿಂದ ಈಗಿರುವ ದಾದಿಯರಿಗೆ ಹೆಚ್ಚಿನ ಕೆಲಸದ ಹೊರೆಯಾಗುತ್ತಿದೆ ಎಂದು ನಿಮ್ಹಾನ್ಸ್ ನಲ್ಲಿ ದಾದಿಯರು ನಿನ್ನೆಯಿಂದ ಮುಷ್ಕರ ಆರಂಭಿಸಿದ್ದಾರೆ.
ಹೊಸ ಆಪರೇಶನ್ ಥಿಯೇಟರ್ ಆರಂಭಿಸುವ ಯೋಜನೆ ನಿಮ್ಹಾನ್ಸ್ ನಲ್ಲಿ ತೊಂದರೆ ಸೃಷ್ಟಿಸಿದ್ದು ದಾದಿಯರ ಗುಂಪೊಂದು ಅದನ್ನು ವಿರೋಧಿಸಿ ಕೂಡ ಮುಷ್ಕರ ನಡೆಸುತ್ತಿದ್ದಾರೆ.
ನಿಮ್ಹಾನ್ಸ್ ನ ಸುಮಾರು 18 ನರ್ಸ್ ಗಳು ತಮ್ಮ ಕರ್ತವ್ಯವನ್ನು ನಿಲ್ಲಿಸಿ ಮುಷ್ಕರ ಆರಂಭಿಸಿದ್ದಾರೆ. ಅವಶ್ಯಕತೆಯಿದ್ದರೂ ಹೆಚ್ಚಿನ ದಾದಿಯರನ್ನು ನೇಮಕ ಮಾಡುತ್ತಿಲ್ಲ ಎಂದು ದಾದಿಯರ ಆರೋಪವಾಗಿದೆ.
ಮುಷ್ಕರದಿಂದ ಆಸ್ಪತ್ರೆಯ ತುರ್ತು ಸೇವೆಗೆ ಯಾವುದೇ ಪರಿಣಾಮ ಬೀರಿಲ್ಲ. ರೋಗಿಗಳ ಮೇಲೆ ಪೂರ್ವ-ಕಾರ್ಯವಿಧಾನಗಳನ್ನು ಪೂರೈಸಲು ನಿರಾಕರಿಸಿದ್ದರಿಂದ ಐದು ನಿಗದಿತ ಶಸ್ತ್ರಚಿಕಿತ್ಸೆಗಳು ಮುಂದೂಡಲ್ಪಟ್ಟವು. ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿಕೊಂಡರೂ ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ದಾದಿಯರು ಆರೋಪಿಸಿದ್ದಾರೆ.
ನಿಮ್ಹಾನ್ಸ್ ಗೆ ಹೆಚ್ಚುವರಿ ಆರೋಗ್ಯ ಸೇವೆಯನ್ನು ಸೇರಿಸಲಾಗಿದ್ದರೂ ಕೂಡ ಅನುಮೋದನೆಗೊಂಡ 1,278 ಹುದ್ದೆಗಳಲ್ಲಿ 848 ಹುದ್ದೆಗಳು ಖಾಲಿಯಿವೆ. ಇದರಿಂದ ಸೇವೆ ಒದಗಿಸಲು ಕಷ್ಟವಾಗುತ್ತಿದೆ ಎಂದು ದಾದಿಯೊಬ್ಬರು ಹೇಳುತ್ತಾರೆ.