ಟ್ವಿಟರ್ ನಲ್ಲಿ ಟ್ರೋಲ್: ಸಂಸದ ಪ್ರತಾಪ್ ಸಿಂಹಗೆ ನಟ ಪ್ರಕಾಶ್ ರಾಜ್ ಮಾನನಷ್ಟ ಮೊಕದ್ದಮೆ ನೋಟಿಸ್

ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಗುರುವಾರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಗುರುವಾರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಗುರಿ ಮಾಡಿಕೊಂಡು ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕಿರುವ ಹಿನ್ನಲೆಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿರುವುದಾಗಿ ನಟ ಪ್ರಕಾಶ್ ರೈ ಹೇಳಿದ್ದಾರೆ. ಈ ಬಗ್ಗೆ ಇಂದು  ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರೈ, ನನ್ನ ಹೋರಾಟ ಒಂದು ಪಕ್ಷದ ವಿರುದ್ಧವಲ್ಲ...ಬದಲಿಗೆ ಓರ್ವ ವ್ಯಕ್ತಿಯ ವಿರುದ್ಧ ಎಂದು ಹೇಳಿದರು.
"ಸಂಸದ ಪ್ರತಾಪ್ ಸಿಂಹ ಅವರಿಗೆ ನಾನು ಇಂದು ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಟ್ರೋಲ್ ಮಾಡಿದ ಹಿನ್ನಲೆಯಲ್ಲಿ ಮತ್ತು ನನ್ನ ವೈಯುಕ್ತಿಕ  ಜೀವನದ ಬಗ್ಗೆ ಅಪಹಾಸ್ಯ ಮಾಡಿದ ಕಾರಣಕ್ಕೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿದ್ದೇನೆ. ಈ ನೋಟಿಸ್ ಗೆ ಅವರು ಉತ್ತರಿಸದಿದ್ದರೆ ಮುಂದಿನ ಕ್ರಮ ಜರುಗಿಸಬೇಕಾಗುತ್ತದೆ, ನನ್ನ ಬಗ್ಗೆ ಪ್ರತಾಪ್ ನೀಡಿರುವ  ಅವಹೇಳನಕಾರಿ ಹೇಳಿಕೆಗಳ ಸಂಬಂಧ ಅವರು ಈ ಕೂಡಲೇ ಬಹಿರಂಗ ಮತ್ತು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಪ್ರಕಾಶ್ ರೈ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ನಾನು ಸರ್ಕಾರವನ್ನು ಪ್ರಶ್ನೆ ಮಾಡಿದರೆ ನನ್ನ ತಾಯಿಯ ಧರ್ಮದ ಬಗ್ಗೆ ಮಾತನಾಡುತ್ತಾರೆ. ನಿಜ ಜೀವನದಲ್ಲೂ ನನ್ನ ಖಳನಟ ಎಂದು ಕರೆಯುತ್ತಾರೆ. ಪ್ರತಾಪ್ ಸಿಂಹ ಅವರಿಗೆ ಪುತ್ರಶೋಕ ಏನೆಂದು ತಿಳಿದಿಲ್ಲ ಎಂದು   ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು ಕೆಲ ರಾಜಕೀಯ ಪಕ್ಷಗಳು ಆನ್ ಲೈನ್ ಟ್ರೋಲ್ ಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿವೆ ಎಂದು ಕಿಡಿಕಾರಿದರು.
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಬಳಿಕ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದ ನಟ ಪ್ರಕಾಶ್ ರೈ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಈ ಟ್ರೋಲ್ ಗಳ ವಿರುದ್ಧ ನಟ ಪ್ರಕಾಶ್ ರೈ, #justAsking ಹೋರಾಟ  ಆರಂಭಿಸಿದ್ದಾರೆ.
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಉತ್ತರ, ವೈಯುಕ್ತಿಕ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ
ಇದೇ ವೇಳೆ ಪ್ರಕಾಶ್ ರೈ ಅವರ ನೋಟಿಸ್  ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಪ್ರಕಾಶ್ ರೈ ವಿರುದ್ಧ ತಾವು ಯಾವುದೇ ವೈಯುಕ್ತಿಕ ಹೇಳಿಕೆ ಅಥವಾ ಮಾನಹಾನಿ  ಹೇಳಿಕೆಗಳನ್ನು ನೀಡಿಲ್ಲ. ಅವರ ಹೇಳಿಕೆ ಸಂಬಂಧ ಬಂದ ಪ್ರತಿಕ್ರಿಯೆಗಳನ್ನು ಮಾತ್ರ ಟ್ವಿಟರ್ ನಲ್ಲಿ ರಿಪೋಸ್ಟ್ ಮಾಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಪ್ರಕಾಶ್ ರೈ ಅವರಿಗೆ ಅಭದ್ರತೆ ಕಾಡುತ್ತಿದ್ದರೆ ಅವರು ತಮ್ಮ ನಿವಾಸ  ಇರುವ ತೆಲಂಗಾಣದ ಸಿಎಂ ಕೆ ಚಂದ್ರಶೇಖರ ರಾವ್ ಅವರ ಬಳಿ ಮನವಿ ಮಾಡಲಿ. ಅವರಿಗೆ ಮೈಸೂರು ಜನತೆ ಮತ್ತು ಯುವಕರ ಬಗ್ಗೆ ಕಳಕಳಿ ಇದ್ದರೆ ರಾಜಕೀಯಕ್ಕೆ ಬರಲಿ ಯಾರಿಗೆ ಜನ ಮನ್ನಣೆ ಇದೆ ನೋಡೋಣ ಎಂದು  ತಿರುಗೇಟು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com