ಮೆಜೆಸ್ಟಿಕ್ ಸುತ್ತಮುತ್ತಲಿನ ಹೋಟೆಲ್‌ ಗಳು ಇನ್ಮುಂದೆ 24/7 ತೆರೆಯಬಹುದು!

ರಾಜಧಾನಿ ಬೆಂಗಳೂರಿನ ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಇನ್ನು ಮುಂದೆ 24 ಗಂಟೆಯೂ ಹೊಟೆಲ್ ಮತ್ತು ರೆಸ್ಟೋರೆಂಟ್ ಗಳು ಕಾರ್ಯ ನಿರ್ವಹಿಸಲಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಇನ್ನು ಮುಂದೆ 24 ಗಂಟೆಯೂ ಹೊಟೆಲ್ ಮತ್ತು ರೆಸ್ಟೋರೆಂಟ್ ಗಳು ಕಾರ್ಯ ನಿರ್ವಹಿಸಲಿವೆ.
ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರು ಹೊಸ ಆದೇಶ ನೀಡಿದ್ದು, ನಗರದ ಮೆಜೆಸ್ಟಿಕ್‌ ನ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಗಳಲ್ಲಿ ದಿನದ 24 ಗಂಟೆಯೂ ಪ್ರಯಾಣಿಕರ ದಟ್ಟಣೆ  ಇರುವುದರಿಂದ, ಆ ನಿಲ್ದಾಣಗಳ ಹೋಟೆಲ್‌ ಗಳಿಗೆ ದಿನದ 24 ಗಂಟೆಯೂ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. 
ಪ್ರಸ್ತುತ ಇರುವ ನಿಯಮದಂತೆ ರಾತ್ರಿ 1ಗಂಟೆಗೆ ಎಲ್ಲ ಬಗೆಯ ಹೋಟೆಲ್‌ ಗಳನ್ನು ಬಂದ್‌ ಮಾಡಲಾಗುತ್ತಿತ್ತು. ಹೀಗಾಗಿ ತಡರಾತ್ರಿ ನಿಲ್ದಾಣದಲ್ಲಿ ಬಸ್‌ ಹಾಗೂ ರೈಲುಗಳಿಗಾಗಿ ಕಾಯುವ ಪ್ರಯಾಣಿಕರಿಗೆ ಆಹಾರ ಸಿಗುತ್ತಿರಲಿಲ್ಲ.  ಇದೇ ಕಾರಣಕ್ಕೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಟಿ.ಸುನೀಲ್‌ ಕುಮಾರ್‌ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚರ್ಚಿಸಲು ನಗರ ಪೊಲೀಸ್‌ ಕಮಿಷನರ್‌ ಅವರನ್ನು  ಭೇಟಿಯಾಗಿದ್ದ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು, ಬಸ್‌ ನಿಲ್ದಾಣದ ಹೋಟೆಲ್‌ ಗಳಿಗಾದರೂ ದಿನದ 24 ಗಂಟೆ ವಹಿವಾಟು ನಡೆಸಲು ಅನುಮತಿ ನೀಡುವಂತೆ ಕೋರಿದ್ದರು. ಅದಕ್ಕೆ ಸ್ಪಂದಿಸಿರುವ ಸುನಿಲ್  ಕುಮಾರ್ ಅವರು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯುಕ್ತ ಟಿ ಸುನಿಲ್ ಕುಮಾರ್ ಅವರು, ದರ್ಶಿನಿಗಳಿಗೆ ಮಾತ್ರ ಅನ್ವಯ: ‘ಪ್ರಯಾಣಿಕರಿಗೆ ದಿನದ 24 ಗಂಟೆಯೂ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದೇವೆ. ಇದು  ದರ್ಶಿನಿಗಳಿಗೆ ಮಾತ್ರ ಅನ್ವಯವಾಗಲಿದೆ. ಪಂಚತಾರಾ ಹೋಟೆಲ್‌ ಸೇರಿ ಇತರೆ ಹೋಟೆಲ್‌ಗಳಿಗೆ ಅನ್ವಯಿಸುವುದಿಲ್ಲ. ಅಂತೆಯೇ ಸಮಯದ ನಿರ್ಬಂಧ ಬಗ್ಗೆ ಹೋಟೆಲ್‌ ಮಾಲೀಕರು ಹಾಗೂ ಸಿಬ್ಬಂದಿ ಮೇಲೆ ಕ್ರಮ ಜರುಗಿಸದಂತೆ  ಪೊಲೀಸರಿಗೆ ಸೂಚಿಸಿದ್ದೇನೆ. ಆದರೂ ಯಾರಾದರೂ ಕಿರುಕುಳ ನೀಡಿದರೆ, ಹೋಟೆಲ್‌ ಮಾಲೀಕರು ದೂರು ನೀಡಬಹುದು.  ಆದರೆ ದರ್ಶಿನಿಗಳು ಮದ್ಯ ಮಾರಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com