ರಸ್ತೆ ಗುಂಡಿಗಳ ವಿರುದ್ದ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕಲಾವಿದ ಬಾದಲ್ ನಂಜುಡಸ್ವಾಮಿ ಮತ್ಸ್ಯಕನ್ಯೆಯನ್ನು ಕರೆತಂದಿದ್ದರು. ಹೌದು ನಗರದ ಪ್ರತಿಷ್ಟಿತ ಎಂ.ಜಿ.ರಸ್ತೆಯಲ್ಲಿನ ಬೃಹತ್ ಗುಂಡಿಯನ್ನು ಕಲಾವಿದ ಬಾದಲ್ ನಂಜುಂಡಸ್ವಾಮಿ ಸ್ವಿಮ್ಮಿಂಗ್ ಪೂಲ್ ಮಾದರಿಯಲ್ಲಿ ಸಿದ್ದಪಡಿಸಿದ್ದರು. ವಿಶೇಷವೆಂದರೆ ಬಾದಲ್ ಅವರ ಈ ಕಾರ್ಯಕ್ಕೆ ನಟಿ ಸೋನುಗೌಡ ಕೂಡ ಸಾಥ್ ನೀಡಿದ್ದರು. ಬಾದಲ್ ಸೃಷ್ಟಿಸಿದ್ದ ರಸ್ತೆಗುಂಡಿಯ ಸ್ವಿಮ್ಮಿಂಗ್ ಪೂಲ್ ನಲ್ಲಿ ನಟಿ ಸೋನುಗೌಡ ಮತ್ಸ್ಯಕನ್ಯೆಯ ರೀತಿಯ ವೇಷ ಧರಿಸಿ ಕುಳಿತು ಕ್ಯಾಮೆರಾಗಳಿಗೆ ಪೋಸ್ ನೀಡಿದರು.
ಈ ಬಗ್ಗೆ ನಟಿ ಸೋನುಗೌಡ ಅವರನ್ನು ಮಾಧ್ಯಮಗಳು ಮಾತಿಗೆಳೆದಾಗ "ನಟಿಯಾಗಿ ನನಗೂ ಸಾಮಾಜಿಕ ಜವಾಬ್ದಾರಿ ಇದೆ. ರಸ್ತೆ ಗುಂಡಿಗಳನ್ನು ಶೀಘ್ರ ಮುಚ್ಚಿ ಸರಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕಳೆದರೆಡು ವಾರಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ದಿಢೀರ್ ರಸ್ತೆಗುಂಡಿಗಳು ಬಾಯಿತೆರೆದಿದ್ದು, ಈಗಾಗಲೇ ಈ ಅಪಾಯಕಾರಿ ರಸ್ತೆಗುಂಡಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಹಲವು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು 15 ದಿನಗಳೊಳಗೆ ರಸ್ತುಗುಂಡಿ ಮುಚ್ಚುವಂತೆ ಆದೇಶ ನೀಡಿದ್ದಾರೆಯಾದರೂ ಆ ಕಾರ್ಯಕ್ಕೆ ಇನ್ನೂ ಚುರುಕು ಮುಟ್ಟಿಲ್ಲ. ನಗರಗ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳ ಪರಿಸ್ಥಿತಿ ಹಾಗೆಯೇ ಇವೆ.