ಹಾಸನಾಂಬೆಗೆ ಹರಿದು ಬಂದ ಜನಸಾಗರ; ದೇಗುಲಕ್ಕೆ 4.14 ಕೋಟಿ ರೂ. ಆದಾಯ

ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ವಾರ್ಷಿಕ ದರ್ಶನೋತ್ಸವಕ್ಕೆ ಅಧಿಕೃತವಾಗಿ ತೆರೆಬಿದ್ದಿದ್ದು, 11 ದಿನಗಳ ಕಾಲ ನಡೆದ ಉತ್ಸವದ ವೇಳೆ ದೇವಿಗೆ ನಾನಾ ರೂಪದಲ್ಲಿ ಒಟ್ಟು 4.14 ಕೋಟಿ ರೂ. ಗಳು ಸಂಗ್ರಹವಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.
ಹಾಸನಾಂಬೆ ದೇಗುಲ
ಹಾಸನಾಂಬೆ ದೇಗುಲ
ಹಾಸನ: ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ವಾರ್ಷಿಕ ದರ್ಶನೋತ್ಸವಕ್ಕೆ ಅಧಿಕೃತವಾಗಿ ತೆರೆಬಿದ್ದಿದ್ದು, 11 ದಿನಗಳ ಕಾಲ ನಡೆದ ಉತ್ಸವದ ವೇಳೆ ದೇವಿಗೆ ನಾನಾ ರೂಪದಲ್ಲಿ ಒಟ್ಟು 4.14 ಕೋಟಿ ರೂ. ಗಳು  ಸಂಗ್ರಹವಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.
ಪ್ರಸಕ್ತ ಸಾಲಿನ ಹಾಸನಾಂಬ ದೇವಿ ಉತ್ಸವದಲ್ಲಿ ಸುಮಾರು ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದು, ದೇವಿಗೆ ಕಾಣಿಕೆ ರೂಪದಲ್ಲಿ ನೀಡುವ ಧನ ಹಾಗೂ ವಿಶೇಷ ದರ್ಶನದ ಟಿಕೆಟ್‌ ಮಾರಾಟದಿಂದ ದೇವಾಲಯಕ್ಕೆ ಬರುತ್ತಿರುವ  ಆದಾಯ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇನ್ನು ಹಾಸನಾಂಬ ದೇವಾಲಯದ ಆವರಣದಲ್ಲಿ ಇರಿಸಲಾಗಿದ್ದ ಹುಂಡಿಯಿಂದ ಒಟ್ಟು 1.10 ಕೋಟಿ ರೂ. ಹಾಗೂ ಸಿದ್ದೇಶ್ವರ ದೇವಾಲಯದ ಹುಂಡಿಯಿಂದ 7.68 ಲಕ್ಷ ರೂ.  ಸಂಗ್ರಹವಾಗಿದೆ. ಇನ್ನು ಟಿಕೆಟ್‌ ಮಾರಾಟ, ಸೀರೆ ಹರಾಜು, ಲಾಡು ಮಾರಾಟದಿಂದ ಒಟ್ಟು 2.96 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಇನ್ನು ದೇವಾಲಯದ ಇತಿಹಾಸದಲ್ಲೇ ಇದು ಅತೀ ಹೆಚ್ಚಿನ ಪ್ರಮಾಣದ ಆದಾಯವಾಗಿದ್ದು, ಕಳೆದ ವರ್ಷ ನಾನಾ ರೂಪದಲ್ಲಿ 2.36 ಕೋಟಿ ರೂ. ಸಂಗ್ರಹವಾಗಿತ್ತು. ಹಾಸನಾಂಬ ದೇವಾಲಯದ ಹುಂಡಿ ಹಣ ಹಾಗೂ ಸಿದ್ದೇಶ್ವರ  ದೇವಾಲಯದ ಹುಂಡಿ ಹಣ ಎರಡು ಪ್ರತ್ಯೇಕ ಬ್ಯಾಂಕ್‌ ಖಾತೆಗೆ ಜಮೆಯಾಗಲಿದ್ದು, ಹಾಸನಾಂಬ ದೇವಾಲಯದ ಹುಂಡಿ ಹಣ ನಗರದ ಕೆನರಾ ಬ್ಯಾಂಕ್‌ ಮುಖ್ಯ ಶಾಖೆಯಲ್ಲಿರುವ ದೇವಾಲಯದ ಖಾತೆಗೆ ಜಮೆಯಾಗಲಿದೆ.  ಅಂತೆಯೇ ಸಿದ್ದೇಶ್ವರಸ್ವಾಮಿ ಹುಂಡಿಯ ಹಣ ಐಡಿಬಿಐ ಮುಖ್ಯ ಶಾಖೆಗೆ ಜಮೆಯಾಗಲಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
ಚಿನ್ನ - ಬೆಳ್ಳಿ ಇಂದು ತೂಕ
ಇನ್ನು ಕೆಲವು ಭಕ್ತರು ದೇವಾಲಯಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನು ಹುಂಡಿಯಲ್ಲಿ ಹಾಕಿದ್ದು, ಅವುಗಳ ಪರಿಶೀಲನೆ ಹಾಗೂ ಅವುಗಳ ಮೌಲ್ಯಮಾಪನವನ್ನು ಇಂದು ಮಾಡಲಾಗುವುದು. ಚಿನ್ನ ಅಲ್ಪ ಪ್ರಮಾಣದಲ್ಲಿ ಇದ್ದು, ಬೆಳ್ಳಿ  ಹೆಚ್ಚಾಗಿರುವುದರಿಂದ ಚಿನ್ನ, ಬೆಳ್ಳಿ ವರ್ತಕರನ್ನು ಕರೆಸಿ, ಅವರಿಂದ ಪರಿಶೀಲನೆ ಮಾಡಿಸಲಾಗುವುದು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com