ಬೆಂಗಳೂರು: 13 ವರ್ಷದ ಬಾಲಕನೊಬ್ಬ ಕುಂಬಳಗೋಡುವಿನ ರಾಮೋಹಳ್ಳಿಯಲ್ಲಿರುವ ಭೀಮನಕುಪ್ಪೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.
ಕೆರೆಯಲ್ಲಿ ಮುಳುಗಿ ಮೃತಪಟ್ಟ ಬಾಲಕನನ್ನು ಕೂಲಿ ಕಾರ್ಮಿಕರಾಗಿರುವ ಕೃಷ್ಣಪ್ಪ ಮತ್ತು ಲೀಲಾವತಿ ದಂಪತಿಯ ಪುತ್ರ ಚಂದನ್ ಎಂದು ಗುರುತಿಸಲಾಗಿದ್ದು, ನಿನ್ನೆ ನೀರುಪಾಲಾಗಿದ್ದ ಬಾಲಕನ ಮೃತದೇಹವನ್ನು ಇಂದು ಅಗ್ನಿ ಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ.
ಕೆಂಗೇರಿ ಸಮೀಪದ ವಿನಾಯಕನಗರ ನಿವಾಸಿಯಾಗಿದ್ದ ಚಂದನ್ ಎಲ್ ಎನ್ ಆರ್ ಪಬ್ಲಿಕ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ 12.30 ರ ಸುಮಾರಿಗೆ ತನ್ನ ಇಬ್ಬರು ಸ್ನೇಹಿತರಾದ ದರ್ಶನ್ ಮತ್ತು ರಾಹುಲ್ ನ ಭೇಟಿಯಾಗುವುದಾಗಿ ತೆರಳಿದ್ದ ಚಂದನ್ ಸಂಜೆಯಾದರೂ ವಾಪಸ್ ಮನೆಗೆ ಬರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಭೀಮನಕುಪ್ಪೆ ಕೆರೆ ಬಳಿ ಚಂದನ್ ಸೈಕಲ್ ಹಾಗೂ ಆತನ ಬಟ್ಟೆಗಳು ಪತ್ತೆಯಾಗಿವೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಿನ್ನೆಯಿಂದ ಬಾಲಕನಿಗಾಗಿ ಹುಡುಕಾಟ ನಡೆಸಿದ್ದ ಅಗ್ನಿ ಶಾಮಕ ಸಿಬ್ಬಂದಿ ಇಂದು ಬೆಳಗ್ಗೆ 10 ಗಂಟೆಗೆ ಮೃತದೇಹ ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.