ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಚಿವ ಜಾರ್ಜ್ ರಾಜೀನಾಮೆ ಪಡೆಯಲ್ಲ- ಸಿಎಂ ಸಿದ್ದರಾಮಯ್ಯ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಬೆಂಬಲಕ್ಕೆ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಜಾರ್ಜ್ ಅವರ ರಾಜೀನಾಮೆಯನ್ನು ಪಡೆಯುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಬೆಂಬಲಕ್ಕೆ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ಜಾರ್ಜ್ ಅವರ ರಾಜೀನಾಮೆಯನ್ನು ಪಡೆಯುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ. 

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಜ್ಯದ ಸರ್ಕಾರದ ಸಿಐಡಿ ತಂಡ ಪ್ರಕರಣವನ್ನು ಸಮರ್ಥವಾಗಿ ತನಿಖೆ ನಡೆಸಿ, ಬಿ ರಿಪೋರ್ಟ್ ಸಲ್ಲಿಸಿದೆ. ಹಾಗಾಗಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಸಂಪುಟ ಸಹೋದ್ಯೋಗಿ ಕೆ.ಜೆ. ಜಾರ್ಜ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ಈ ಹಿಂದೆ ಕೂಡ ಇಂತಹುದ್ದೇ ಸಂದರ್ಭ ಎದುರಾಗಿದ್ದಾಗ ಜಾರ್ಜ್ ಅವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಬಿ ರಿಪೋರ್ಟ್ ಸಲ್ಲಿಕೆಯಾದ ನಂತರ ಮತ್ತೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು. ಅಂದು ಜಾರ್ಜ್ ಅವರು ಗೃಹ ಸಚಿವರಾಗಿದ್ದರು. ಹಾಗಾಗಿ ತನಿಖೆಯ ಮೇಲೆ ಪ್ರಭಾವ ಬೀರುತ್ತಾರೆಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದೀಗ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದ್ದು, ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಸಿಬಿಐ ಕೇಂದ್ರ ಸರ್ಕಾರದ ಸ್ವತಂತ್ರ ಸಂಸ್ಥೆಯಾಗಿದ್ದು, ಪ್ರಕರಣದಲ್ಲಿ ಜಾರ್ಜ್ ಅವರು ಪ್ರಭಾವ ಬೀರುವುದು ಅಸಾಧ್ಯ. 

ಜಾರ್ಜ್ ಅವರು ರಾಜೀನಾಮೆ ಸಲ್ಲಿಸುವಂತೆ ಬಿಜೆಪಿ ಆಗ್ರಹಿಸುತ್ತಿರುವುದು ರಾಜಕೀಯ ಪ್ರೇರಿತ. ಜಾರ್ಜ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಜಾರ್ಜ್ ಅವರ ರಾಜೀನಾಮೆಯನ್ನು ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ. 

ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಆದೇಶದಲ್ಲಿ ಜಾರ್ಜ್ ಅವರ ಹೆಸರಿಲ್ಲ. ಅಕ್ಟೋಬರ್ 14 ರಂದು ಸಿಬಿಐ ಎಫ್ಐಆರ್ ದಾಖಲಿಸಿದೆ. ಅ.26 ರಂದು ಕುಶಾಲನಗರ ಠಾಣಾಧಿಕಾರಿಗಳು ಎಫ್ಐಆರ್ ಗೆ ಸಹಿ ಮಾಡಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪುಟದ 20 ಸಚಿವರೂ ತನಿಖೆ ಎದುರಿಸುತ್ತಿದ್ದಾರೆ. ಅವರಾರೂ ರಾಜೀನಾಮೆಯನ್ನು ನೀಡಿಲ್ಲ. ಆದರೆ, ಬಿಜೆಪಿಯವರು ಜಾರ್ಜ್ ಅವರ ರಾಜೀನಾಮೆ ಮಾತ್ರ ಒತ್ತಾಯಿಸುತ್ತಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧವೂ ಸೆಕ್ಷನ್ 307, 506ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಹ್ಲಾದ್ 
ಜೋಶಿ, ಯಡಿಯೂರಪ್ಪ, ಶ್ರೀರಾಮುಲು, ನಳಿನ್ ಕುಮಾರ್ ಕಟೀಲ್, ಸಚಿವ ಅನಂತ್ ಕುಮಾರ್ ಹೆಗ್ಡೆಯವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಅವರ ರಾಜೀನಾಮೆಯನ್ನು ಪಡೆಯಲಿ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com