ಸಿಎಂ ನಗರ ಪ್ರದಕ್ಷಿಣೆಗೂ ಮುನ್ನ ರಸ್ತೆಗಳ ಗುಂಡಿಗಳನ್ನು ಮುಚ್ಚಿ: ಅಧಿಕಾರಿಗಳಿಗೆ ಮೇಯರ್ ಸೂಚನೆ

ನ.6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆಗೆ ಹೊರಡುತ್ತಿದ್ದು, ಮುಖ್ಯಂತ್ರಿಗಳ ನಗರ ಪ್ರದಕ್ಷಿಣೆಗೂ ಮುನ್ನ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು ಮಂಗಳವಾರ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ನ.6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಗರ ಪ್ರದಕ್ಷಿಣೆಗೆ ಹೊರಡುತ್ತಿದ್ದು, ಮುಖ್ಯಂತ್ರಿಗಳ ನಗರ ಪ್ರದಕ್ಷಿಣೆಗೂ ಮುನ್ನ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು ಮಂಗಳವಾರ ಸೂಚನೆ ನೀಡಿದ್ದಾರೆ. 

ಭಾರೀ ಮಳೆಯಿಂದಾಗಿ ನಗರದ ರಸ್ತೆಗಳು ಗುಂಡಿಮಯವಾಗಿದ್ದು, ಈ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರ ಆಕ್ರೋಶ ಹಿನ್ನಲೆಯಲ್ಲಿ ನಗರದ ರಸ್ತೆಗಳನ್ನು ಗುಂಡಿಮುಕ್ತವಾಗಿಸುವಂತೆ ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿಗೆ ಗಡುವು ನೀಡಿದ್ದಾರೆ. 

ಈ ಹಿನ್ನಲೆಯಲ್ಲಿ ಬಿಬಿಎಂಪಿ ಆಡಳಿತ ಮಂಡಳಿ ಭಾನುವಾರ ಸಭೆಯನ್ನು ನಡೆಸಿದೆ. ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಮೇಯರ್ ಸಂಪತ್ ರಾಜ್ ಅವರು ಸಭೆ ನಡೆಸಿದ್ದು, ಸಭೆಯಲ್ಲಿ ನ.6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರ ಪ್ರದಕ್ಷಿಣೆ ನಡೆಸಲಿದ್ದು, ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆಗೆ ಹೊರಡುವುದಕ್ಕೂ ಮುನ್ನ ರಸ್ತೆಗಳನ್ನು ಗುಂಡಿಗಳಿಂದ ಮುಕ್ತಿಗೊಳಿಸುವಂತೆ ಎಲ್ಲಾ ಬಿಬಿಎಂಪಿ ವಾರ್ಡ್ ಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. 

ಕೇವಲ ರಸ್ತೆಗಳ ಗುಂಡಿಗಳಷ್ಟೇ ಅಲ್ಲದೆ, ಮಳೆ ಬಂದಾಗ ಎದುರಾಗುವ ಪ್ರವಾಹಗಳು, ಕೊಳಚೆ ನೀರು ನಿರ್ವಹಣೆ, ಪೌರಕಾರ್ಮಿಕರ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 

ನಗರದಲ್ಲಿ ಒಟ್ಟು 20,000 ರಸ್ತೆ ಗುಂಡಿಗಳಿದ್ದು, ಈ ವರೆಗೂ ಕೇವಲ 4,000 ಗುಂಡಿಗಳನ್ನಷ್ಟೇ ಮುಚ್ಚಲಾಗಿದೆ ಎಂದು ವಾರ್ಡ್ ಇಂಜಿನಿಯರ್ ಗಳು ಹೇಳಿದ್ದಾರೆ. ಈ ಹೇಳಿಕೆಯನ್ನು ಕೌನ್ಸಿಲರ್'ಗಳು ತಿರಸ್ಕರಿಸಿದ್ದಾರೆ. ಬಳಿಕ ಪ್ರತಿಕ್ರಿಯೆನೀಡಿರುವ ಮೇಯರ್ ಅವರು ಇಂಜಿನಿಯರ್ ಗಳಿಗೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದು, ನ.6 ರಂದು ನಗರದ ರಸ್ತೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶೀಲನೆ ನಡೆಸುತ್ತಿದ್ದು, ಒಂದು ವೇಳೆ ರಸ್ತೆಗಳಲ್ಲಿ ಗುಂಡಿಗಳು ಹಾಗೆಯೇ ಇದ್ದಿದ್ದೇ ಆದರೆ, ಸಂಬಂಧಪಟ್ಟಂದ ಇಂಜಿನಿಯರ್ ಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದಿಲ್ಲ: ಬಿಬಿಎಂಪಿ ಆಯುಕ್ತ
ಪೌರ ಕಾರ್ಮಿಕರ ಸಂಖ್ಯೆಯನ್ನು ಕಡಿತ ಮಾಡುವುದಾಗಲೀ ಅಥವಾ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಯಾರನ್ನೂ ಕೆಲಸದಿಂದ ತೆಗೆದು ಹಾಕುವುದಿಲ್ಲ. ಕಸ ವಿಲೇವಾರಿ ಎಂದಿನಂತೆ ನಡೆಯಲಿದ್ದು, ನಗರದ ಜನರು ಆತಂಕ ಪಡುವ ಅಗತ್ಯವಿಲ್ಲವೆಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಸ್ಪಷ್ಟಪಡಿಸಿದ್ದಾರೆ. 

ಪೌರ ಕಾರ್ಮಿಕರ ಕಾಯಂ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನವಿಲ್ಲ. ಹೀಗಾಗಿ ಎಂದಿನಂತೆಯೇ ಕಸ ವಿಲೇವಾರಿ ನಡೆಯಲಿದೆ. ನಗರದ ಜನರು ಆತಂಕಪಡು ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ಕಸ ಯಂತ್ರ ಖರೀದಿಯಲ್ಲಿ ಅವ್ಯವಹಾರ: ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹ

ನಗರದ ಕಸ ಗುಡಿಸುವ ಯಂತ್ರ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ವಹಿಸುವಂತೆ ಬಿಬಿಎಂಪಿ ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. 

ನಿನ್ನೆ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿಯವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 

ನಗರದ ವಿವಿದೆಡೆ ಸ್ಥಾಪಿಸಲಾಗಿದ್ದ ಕಸ ಸಂಸ್ಕರಣೆ ಘಟಕಗಳಲ್ಲಿ ಪ್ರತಿ ದಿನ 2700 ಟನ್ ಕಸ ಸಂಸ್ಕರಣೆಯಾಗುತ್ತಿದೆ. ಇದಕ್ಕಾಗಿ ನಗರೋತ್ಥಾನ ಯೋಜನೆಯಡಿ ಅನುದಾನ ನೀಡಿದೆ. ಈಗ ತ್ಯಾಜ್ಯ ಸಂಸ್ಕರಣೆಗಾಗಿ ಪ್ರತಿ ಟನ್ ಗೆ ರೂ.1,500 ರಂತೆ ರೂ.19 ಸಾವಿರ ವರೆಗೆ ವ್ಯಯಿಸಲಾಗುತ್ತಿದೆ. ಇದೆಲ್ಲವನ್ನೂ ಗಮಿಸಿದರೆ ರೂ.500 ಕೋಟಿ ಹೆಚ್ಚಿನ ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದಾರೆ. 

ಪ್ರತಿಪಕ್ಷದ ಈ ಆರೋಪಿಗಳಿಗೆ ಸ್ಪಷ್ಟನೆ ನೀಡಿದ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಅವರು, ಯಂತ್ರ ಖರೀದಿ ಟೆಂಡರ್ ಪ್ರಕ್ರಿಯೆ 2012ರಲ್ಲಿ ಪ್ರಾರಂಭವಾಗಿದ್ದು, 2015ರಲ್ಲಿ ಟೆಂಡರ್ ಕರೆಯಲಾಗಿತ್ತು. ಸ್ವಯಂಚಾಲಿತ ಯಂತ್ರಗಳಿಗೆ ಹೆಚ್ಚು ವೆಚ್ಚವಾಗುವುದರಿಂದ ಟ್ರಕ್ ಯಂತ್ರಗಳ ಖರೀದಿಗೆ ತೀರ್ಮಾನ ಕೈಗೊಳ್ಳಲಾಗಿಯಿತು. ಆದರೆ, ಯಂತ್ರಗಳ ಖರೀದಿಗೆ ಈ ವರೆಗೂ ನಯಾಪೈಸೆ ಹಣ ನೀಡಿಲ್ಲ. ಬದಲಾಗಿ ಯಂತ್ರಗಳ ನಿರ್ವಹಣೆಗಾಗಿ 5 ವರ್ಷಗಳ ಅವಧಿಗೆ ರೂ.5.27 ಕೋಟಿ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಯಾವುದ ಪ್ರಕ್ರಿಯೆ ನಡೆದಿಲ್ಲ. ತನಿಖೆ ನಡೆಸಿದರೆ ಅದಕ್ಕೂ ನಾನು ಸಿದ್ಧನಿದ್ದೇನೆಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com