ಮೂಲಗಳ ಪ್ರಕಾರ ಹತ್ಯೆ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿರುವ ಹಂತಕರ ದೃಶ್ಯಾವಳಿಗಳು ಹಾಗೂ ಪ್ರತ್ಯದರ್ಶಿಗಳು ನೀಡಿರುವ ಮಾಹಿತಿ ಆಧರಿಸಿ ಹಂತಕರ ರೇಖಾಚಿತ್ರ ಬಿಡಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ನುರಿತ ಚಿತ್ರಕಾರರಿಂದ ಹಂತಕರ ರೇಖಾಚಿತ್ರ ಬಿಡಿಸಲಾಗಿದೆ. ಶೀಘ್ರದಲ್ಲೇ ರೇಖಾಚಿತ್ರದಲ್ಲಿರುವ ಮುಖಚರ್ಯೆ ಹೋಲುವ ವ್ಯಕ್ತಿಗಳಿಗಾಗಿ ಅಧಿಕಾರಿಗಳು ತೀವ್ರ ಶೋಧ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಈ ರೇಖಾಚಿತ್ರವನ್ನು ತನಿಖಾ ತಂಡದ ಅಧಿಕಾರಿಗಳು ವಿಚಾರವಾದಿ ಪನ್ಸಾರೆ, ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೂ ಕಳಿಸಿದ್ದಾರೆ. ಆ ಮೂಲಕ ಹಂತಕನ ಮಾಹಿತಿ ಪಡೆಯುವ ಕೆಲಸ ನಡೆಯುತ್ತಿದೆ. ಇನ್ನು ಈ ರೇಖಾಚಿತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಬಗ್ಗೆ ಅಂತಿಮ ನಿರ್ಧಾರ ಮಾಡಿಲ್ಲ ಎಂದು ತಿಳಿದುಬಂದಿದೆ.
ಇನ್ನು ಅತ್ತ ಘಟನೆ ನಡೆದ ರಾಜರಾಜೇಶ್ವರಿ ನಗರದಲ್ಲೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಹಂತಕರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಅಲ್ಲದೆ ರಾಜರಾಜೇಶ್ವರಿ ನಗರದ ಬೀದಿ ಬೀದಿಗಳಲ್ಲಿ ಹಂತಕರಗಿಗಾಗಿ ಪೊಲೀಸರು ಕರಪತ್ರಗಳನ್ನು ಅಂಟಿಸಿದ್ದು, ಹಂತಕರ ಸುಳಿವು ನೀಡುವಂತೆ ಮನವಿ ಮಾಡಿದ್ದಾರೆ.
ಕಳೆದ ಸೆಪ್ಟೆಂಬರ್ 5ರಂದು ಕಚೇರಿಯಿಂದ ಮನೆಗೆ ವಾಪಸಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಬೈಕ್ ನಲ್ಲಿ ಹಿಂಬಾಲಿಸಿದ್ದ ದುಷ್ಕರ್ಮಿ ಅವರ ಮನೆ ಬಾಗಿಲ ಎದುರಲ್ಲೇ ಗುಂಡಿಟ್ಟು ಹತ್ಯೆಗೈದಿದ್ದರು.