ಡಿಜೆ ಹಳ್ಳಿ ವಾರ್ಡ್ ಕಾರ್ಪೊರೇಟರ್'ಗೆ ಬಿಬಿಎಂಪಿ ಮೇಯರ್ ಪಟ್ಟ?

ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮೇಯರ್ ಹುದ್ದೆಗೆ ಪಕ್ಷದ ವಿವಿಧ ಬಣಗಳ ನಡುವೆ ತೀವ್ರ ಪೈಪೋಟಿ ತೀವ್ರಗೊಂಡಿದೆ...
ಬಿಬಿಎಂಪಿ (ಸಂಗ್ರಹ ಚಿತ್ರ)
ಬಿಬಿಎಂಪಿ (ಸಂಗ್ರಹ ಚಿತ್ರ)
ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಮೇಯರ್ ಹುದ್ದೆಗೆ ಪಕ್ಷದ ವಿವಿಧ ಬಣಗಳ ನಡುವೆ ತೀವ್ರ ಪೈಪೋಟಿ ತೀವ್ರಗೊಂಡಿದೆ.  
ಡಿ.ಜೆ. ಹಳ್ಳಿ ವಾರ್ಡ್ ನ ಸಂಪತ್ ಕುಮಾರ್ ಹಾಗೂ ಸುಭಾಷ್ ನಗರ ವಾರ್ಡ್ ನ ಗೋವಿಂದ ರಾಜು, ಬೇಗೂರೂ ವಾರ್ಡ್ ನ ಆಂಜನಪ್ಪ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಲಕ್ಷ್ಮೀದೇವಿ ವಾರ್ಡ್ನ ಎಂ.ವೇಲುನಾಯ್ಕರ್ ನಡುವೆ ತೀವ್ರ ಪೈಪೋಟಿಯಿದೆ. 
ಸಚಿವರಾದ ಡಿ.ಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್ ಮೊದಲಾದವರು ಸಂಪತ್ ರಾಜ್ ಪರವಾಗಿದ್ದರೆ, ಕೆಪಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾಮ್ ಅವರು ಗೋವಿಂದ ರಾಜ್ ಪರ ಲಾಬಿ ನಡೆಸಿದ್ದಾರೆ. ಇನ್ನು ಆಂಜನಪ್ಪ ಹಾಗೂ ವೇಲು ನಾಯ್ಕರ್ ಪರವಾಗಿ ಸಂಸದ ಡಿ.ಕೆ.ಸುರೇಶ್ ಪ್ರಬಲವಾಗಿ ನಿಂತಿದ್ದಾರೆ. 
ಇದೀಗ ಸುರೇಶ್ ಅವರೊಂದಿಗೆ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಮುನಿರತ್ನ ಕೂಡ ಸೇರಿಕೊಂಡಿದ್ದು, ಬಿಬಿಎಂಪಿಗೆ ಹೊಸದಾಗಿ ಸೇರಿದ 110 ಗ್ರಾಮಗಳ ವ್ಯಾಪ್ತಿಯಿಂದಲೇ ಮೇಯರ್ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಇಲ್ಲದೇ ಹೋದರೆ ತಾವು ಹಾಗೂ ತಮ್ಮ ಬೆಂಬಲಿಗರು ಮೇಯರ್ ಚುನಾವಣೆಯನ್ನೇ ಬಹಿಷ್ಕರಿಸುವುದಾಗಿ ಬೆದರಿಗೆ ಹಾಗಿದ್ದಾರೆಂದು ಹೇಳಲಾಗುತ್ತಿದೆ. 
ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರೆ ಪ್ರಮುಖ ನಾಯಕರ ಬೆಂಬಲವನ್ನು ಪಡೆದುಕೊಂಡಿರುವ ಸಂಪತ್ ಕುಮಾರ್ ಅವರೇ ಬಿಬಿಎಂಪಿ ಮೇಯರ್ ಪಟ್ಟವನ್ನು ಅಲಂಕರಿಸಲಿದ್ದಾರೆಂಬ ಮಾತುಗಳು ಬಲವಾಗಿ ಕೇಳಿಬರತೊಡಗಿವೆ. 
ಬಿಬಿಎಂಪಿ ಮೇಯರ್ ಚುನಾವಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಾಯಕರೊಬ್ಬರು, ಸಂಪತ್ ಕುಮಾರ್ ಅವರೇ ಬಿಬಿಎಂಪಿ ಮೇಯರ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ನಿಲ್ಲಬೇಕಿರುವ ಅಭ್ಯರ್ಥಿಗಳ ಕುರಿತಂತೆ ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
2015 ರ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಗೆದ್ದಿತ್ತು. (ಒಬ್ಬ ಸ್ವತಂತ್ರ ಅಭ್ಯರ್ಥಿ ಬಿಜೆಪಿಗೆ ಬೆಂಬಲ ನೀಡಿದ್ದರು), ಕಾಂಗ್ರೆಸ್ 76, ಜೆಡಿಎಸ್ ಗೆ 14 ಸ್ಥಾನ ಮತ್ತು ಸ್ವತಂತ್ರ ಅಭ್ಯರ್ಥಿಗಳು 7 ಸ್ಥಾನಗಳನ್ನು ಗೆದ್ದಿದ್ದರು. ಎಂಎಲ್ಎ, ಎಮ್ಎಲ್ಸಿಗಳು ಮತ್ತು ಸಂಸದರು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡಲು ಮತ ಚಲಾಯಿಸುವ ಅಧಿಕಾರವನ್ನು ಹೊಂದಿದ್ದು, ಜೆಡಿ(ಎಸ್) ಸಹಾಯದಿಂದ ಉನ್ನತ ಸ್ಥಾನ ಪಡೆದುಕೊಳ್ಳಲು ಕಳೆದ ಸಾಲಿನಲ್ಲಿ  ಕಾಂಗ್ರೆಸ್ ಯಶಸ್ವಿಯಾಗಿತ್ತು. 
ಈ ಹಿಂದೆ ಜೆಡಿಎಸ್ ಬೆಂಬಲದಿಂದ ಕಾಂಗ್ರೆಸ್ ಬಿಬಿಎಂಪಿ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರಿಂದ, ಈ ಬಾರಿಯೂ ಮೈತ್ರಿ ಮುಂದುವರೆಯುವುದರಿಂದ ಜೆಡಿಎಸ್ ಗೆ ಮೇಯರ್ ಸ್ಥಾನವನ್ನು ನೀಡುವಂತೆ ಪಟ್ಟಿ ಹಿಡಿದಿತ್ತು. ಬಳಿಕ ಕಾಂಗ್ರೆಸ್ ಹಿರಿಯ ನಾಯಕರು ಸಭೆ ನಡೆಸಿ ಸಮಸ್ಯೆಯನ್ನು ನಿವಾರಿಸಿದ್ದರು. 
ನಿನ್ನೆ ಕೂಡ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಕೆಪಿಸಿಸಿ ಕಚೇರಿಯಲ್ಲಿ ಪಾಲಿಕೆ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಕಾರಣ ಇಂದೂ ಕೂಡ ಸಭೆಯನ್ನು ನಡೆಸಲಾಗುತ್ತಿದೆ. ಇಂದು ನಡೆಯಲಿರುವ ಸಭೆಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ರೋಷನ್ ಬೇಗ್, ಕೃಷ್ಣ ಬೈರೇಗೌಡ, ಎಂ.ಆರ್. ಸೀತಾರಾಮ್ ಮತ್ತು ಇತರೆ ನಾಯಕರು ಹಾಜರಾಗಲಿದ್ದಾರೆಂದು ಹೇಳಲಾಗುತ್ತಿದೆ. ಈ ಸಭೆ ಮುಕ್ತಾಯಗೊಂಡ ಬಳಿಕ ಮತ್ತೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈ ವೇಳೆ ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳಿ ತಿಳಿಸಿವೆ. 
ಡಿ.ಜೆ.ಹಳ್ಳಿ ವಾರ್ಡ್ ಸದಸ್ಯ ಸಂಪತ್ ರಾಜ್ ಮಾತನಾಡಿ, ನಾನು ಎರಡು ಬಾರಿ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ನನಗೆ ಅವಕಾಶ ನೀಡಬೇಕೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com