5ನೇ ತರಗತಿಯಲ್ಲಿದ್ದಾಗಲೆ ಐಎಎಸ್ ಅಧಿಕಾರಿ ಆಗುವ ನಿರ್ಧಾರ ಮಾಡಿದ್ದ ನಂದಿನಿ

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) 2016ನೇ ಸಾಲಿನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿರುವ ಕೆ.ಎಸ್. ನಂದಿನಿ ತಾವು ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಐಎಎಸ್ ಆಗುವ ಕನಸು ಕಂಡಿದ್ದರಂತೆ.
ಯುಪಿಎಸ್ ಸಿ ಟಾಪರ್ ನಂದಿನಿ ಹಾಗೂ ಪೋಷಕರು
ಯುಪಿಎಸ್ ಸಿ ಟಾಪರ್ ನಂದಿನಿ ಹಾಗೂ ಪೋಷಕರು

ಕೋಲಾರ:  ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) 2016ನೇ ಸಾಲಿನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿರುವ ಕೆ.ಎಸ್. ನಂದಿನಿ ತಾವು ಐದನೇ ತರಗತಿಯಲ್ಲಿ ವ್ಯಾಸಂಗ  ಮಾಡುತ್ತಿದ್ದಾಗಲೇ ಐಎಎಸ್ ಆಗುವ ಕನಸು ಕಂಡಿದ್ದರಂತೆ.

ಕೋಲಾರದ ಕೆಂಬೋಡಿ ಹಳ್ಳಿಯ ನಿವಾಸಿಯಾದ ಕೆ.ಎಸ್. ನಂದಿನಿ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್​ಸಿ) 2016ನೇ ಸಾಲಿನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಈ  ಹಿಂದೆ ವಿಜಯಲಕ್ಷ್ಮೀ ಬಿದರಿ ಹೊರತು ಪಡಿಸಿದರೆ ಇದುವರೆಗೂ ಕರ್ನಾಟಕದ ಅಭ್ಯರ್ಥಿಗಳು ಯಾರೂ ಪ್ರಥಮ ಸ್ಥಾನ ಪಡೆದಿರಲಿಲ್ಲ. ಇದೀಗ ನಂದಿನಿ ಮೇರು ಸಾಧನೆ ಮಾಡಿದ 2ನೇ ಕನ್ನಡಿಗರೆನಿಸಿದ್ದಾರೆ. ಶಿಕ್ಷಕ ಕೆ. ರಮೇಶ್  ಹಾಗೂ ವಿಮಲಮ್ಮ ಅವರ ಪುತ್ರಿಯಾಗಿರುವ ನಂದಿನಿ ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 2006ರಲ್ಲಿ 10ನೇ ತರಗತಿ ಮುಗಿಸಿ 2008ರಲ್ಲಿ ಮೂಡಬಿದರೆಯಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಬೆಂಗಳೂರಿನ ಎಂ.ಎಸ್. ರಾಮಯ್ಯ  ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದಾರೆ.

ಅಂತೆಯೇ ಕೆಲ ತಿಂಗಳು ಲೋಕೋಪಯೋಗಿ ಇಲಾಖೆಯಲ್ಲಿ ನಂದಿನಿ ಸೇವೆ ಸಲ್ಲಿಸಿದ್ದರು. ಐಎಎಸ್ ಮಾಡುವ ಉದ್ದೇಶದಿಂದ ನಂದಿನಿ ದೆಹಲಿಯ ಕರ್ನಾಟಕ ಭವನಕ್ಕೆ ಸಹಾಯಕ ಇಂಜಿನಿಯರ್ ಆಗಿ ವರ್ಗಾವಣೆಗೊಂಡಿದ್ದರು. 2014ರಲ್ಲಿ ಕೂಡ ಪರೀಕ್ಷೆ ಬರೆದಿದ್ದ ನಂದಿನಿ 849ನೇ ರ್ಯಾಂಕ್ ಪಡೆದಿದ್ದರು. ರ‍್ಯಾಂಕಿಂಗ್ ಕಡಿಮೆ ಬಂದ ಹಿನ್ನೆಲೆಯಲ್ಲಿ ಐಆರ್​ಎಸ್ ಸೇವೆ ಸಿಕ್ಕಿತ್ತು. ಐಎಎಸ್ ಮಾಡಲೇಬೇಕೆಂಬ ಛಲದಿಂದ ದೆಹಲಿಯಲ್ಲಿ ವಿಶೇಷ ಕೋಚಿಂಗ್ ಪಡೆದಿದ್ದ ನಂದಿನಿ ಇದೀಗ ದೇಶಕ್ಕೆ ಮೊದಲ  ರ್ಯಾಂಕ್ ಪಡೆದಿದ್ದಾರೆ. ಸದ್ಯ ಫರಿದಾಬಾದ್​ನಲ್ಲಿ ಐಆರ್​ಎಸ್ ತರಬೇತಿ ಪಡೆಯುತ್ತಿದ್ದಾರೆ. ಇವರ ತಂದೆ ರಮೇಶ್ ಕೂಡ ಮಗಳ ವಿದ್ಯಾಭ್ಯಾಸದ ಸಲುವಾಗಿ ನಿಯೋಜನೆ ಮೇರೆಗೆ ದೆಹಲಿಯಲ್ಲಿ ನೆಲೆಸಿದ್ದರು.

ಇನ್ನು ತಮ್ಮ ಮಗಳ ಸಾಧನೆ ಕುರಿತಂತೆ ಮಾತನಾಡಿರುವ ತಂದೆ ರಮೇಶ್ ಅವರು, ನಂದಿನಿ 5ನೇ ತರಗತಿಯಲ್ಲಿ ಓದುತ್ತಿಗಾಲೇ ಐಎಎಸ್ ಆಗುವ ಕನಸು ಕಂಡಿದ್ದಳು. ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರ  ಪ್ರೇರಣೆಯಿಂದ ನಂದಿನಿ ಐಎಎಸ್ ಮಾಡಲು ಪಣತೊಟ್ಟಿದ್ದಳು. ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಗುರಿ ಸಾಧಿಸಿದ್ದಾಳೆ. ಅವಳ ಸಾಧನೆ ಖುಷಿ ತಂದಿದೆ ಎಂದು ಹೇಳಿದ್ದಾರೆ.

ಇನ್ನು ಯುಪಿಎಸ್ ಸಿಯಲ್ಲಿ ಅಗ್ರ ಸ್ಥಾನ ಸಂಪಾದಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿರುವ ನಂದಿನಿ, "ಶಾಲಾ ಶಿಕ್ಷಕರಾಗಿರುವ ತಂದೆ ರಮೇಶ್ ಸಾಕ್ಷರತಾ ಅಭಿಯಾನದ ಸಂಯೋಜಕರಾಗಿದ್ದ ಸಂದರ್ಭದಲ್ಲಿ ಬೇರೆ ಊರಿಗೆ  ಹೋಗುವಾಗ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಹೇಗೆ ಇರುತ್ತದೆ ಎಂಬುದನ್ನು ಆಗ ತಂದೆಯವರು ವಿವರಿಸುತ್ತಿದ್ದರು. ಅದೇ ನನಗೆ ಐಎಎಸ್‌ ಅಧಿಕಾರಿಯಾಗಲು ಪ್ರೇರಣೆಯಾಗಿತ್ತು.  ನಾಲ್ಕು ವರ್ಷ ತುಂಬಾ ಕಷ್ಟ ಪಟ್ಟು ಅಭ್ಯಾಸ ಮಾಡಿದ್ದೇನೆ. ಆಳ್ವಾಸ್‌ ಮೂಡುಬಿದರೆಯಲ್ಲಿ ಪಿಯುಸಿ ಶಿಕ್ಷಣ ಪಡೆಯುತ್ತಿದ್ದಾಗ, ಅಲ್ಲಿನ ಶಿಕ್ಷಣ ವ್ಯವಸ್ಥೆ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಪರಿಕಲ್ಪನೆ ನನ್ನಲ್ಲಿ ತುಂಬಿದೆ ಎಂದು  ಹೇಳಿದ್ದಾರೆ.

ಅಂತೆಯೇ ಪ್ರಾಥಮಿಕ, ಪ್ರೌಢ, ಪಿಯುಸಿ ಹಾಗೂ ಎಂಜಿನಿಯರಿಂಗ್‌ ಶಿಕ್ಷಣ ನೀಡಿದ ಎಲ್ಲಾ ಸಂಸ್ಥೆಗೂ ಧನ್ಯವಾದ ತಿಳಿಸಿದ ನಂದಿನಿ, ದಿನಕ್ಕೆ ಕನಿಷ್ಠ 8 ರಿಂದ 9 ಗಂಟೆ ಅಭ್ಯಾಸಮಾಡಿದರೆ ಯುಪಿಎಸ್ಸಿ ಪಾಸಾಗುವುದು ಕಷ್ಟವಲ್ಲ.  ಶಾಲಾ ದಿನಗಳಿಂದಲೇ ಗಣಿತ ಹೊರತುಪಡಿಸಿ ಎಲ್ಲಾ ವಿಷಯದಲ್ಲೂ ಟಾಪ್‌ ಬರುತ್ತಿದ್ದೆ. ಗಣಿತಏಕೆ ಕಷ್ಟವಾಗುತಿತ್ತು ಎಂಬುದು ಇಂದಿಗೂ ನನಗೆ ಯಕ್ಷಪ್ರಶ್ನೆಯಾಗೆಯೇ ಉಳಿದಿದೆ. ಮನಸ್ಸು ಮತ್ತು ಶ್ರಮಪಟ್ಟು ಪ್ರಯತ್ನಿಸಿದರೆ  ಪ್ರತಿಫ‌ಲ ಸಿಕ್ಕೇ ಸಿಗುತ್ತದೆ. ಆದರೆ, ಅದಕ್ಕೆ ಸ್ವಲ್ಪ ಕಾಯಬೇಕಾಗುತ್ತದೆ. 2013ರಲ್ಲಿ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಂಡಿದ್ದೆ. ಆ ವರ್ಷ ತೇರ್ಗಡೆ ಹೊಂದಲು ಸಾಧ್ಯವಾಗಿಲ್ಲ. ಮತ್ತೆ 2014ರಲ್ಲಿ ಬರೆದು 849 ರ್‍ಯಾಂಕ್‌ ಪಡೆದೆ.  2015ರಲ್ಲಿ ಇನ್ನು ಕಡಿಮೆ ರ್‍ಯಾಂಕ್‌ ಬಂತು. ಐಸಿಎಸ್‌ ಸೇರಿದೆ. 2016ರ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಬಂದಿದೆ. ಯಾವುದೇ ಒತ್ತಡ ಇರಲಿಲ್ಲ. ಮನೆಯರು, ಸ್ನೇಹಿತರು ಹೀಗೆ ಎಲ್ಲರೂ ಉತ್ತಮ ಸಹಕಾರ  ನೀಡಿದ್ದಾರೆ ಎಂದು  ನಂದಿನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com