ಬೆಂಗಳೂರು : ಹೊರವಲಯದಲ್ಲಿ ಒಲಾ ಕ್ಯಾಬ್ ಡ್ರೈವರ್ ನನ್ನು ಹತ್ಯೆ ಮಾಡಿ ಬಳಿಕ ಕಾರು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ ಮೂವರು ಹಂತಕರನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಿನ್ ಸಂನ್ ಸೋಮನ್ (23) ಹತ್ಯೆಯಾದವರು. ಮುನಿನಂಜಪ್ಪ ಬ್ಲಾಕ್ ನಿವಾಸಿಯಾದ ಇವರು ಮಾ.18 ರಂದು ನಾಪತ್ತೆಯಾಗಿದ್ದರು. ಹೊಸೂರಿನಲ್ಲಿ ಒಳಚರಂಡಿಯೊಂದರಲ್ಲಿ ಕೆಲದಿನಗಳ ಹಿಂದೆ ಇವರು ದೇಹ ಪತ್ತೆಯಾಗಿತ್ತು.
ದೀಮನ್ ಶಂಕರ್ ದಾಸ್ (26) ಆತನ ಸಹೋದರ ಅರುಪ್ ಶಂಕರ್ ದಾಸ್ (36) ಮತ್ತು ಅವರ ಗೆಳೆಯ ಭರತ್ ಪ್ರಧಾನ್ (22) ಬಂಧಿತ ಆರೋಪಿಗಳು. ಆಸ್ಸಾಂ, ಹಾಗೂ ಒಡಿಶಾ ಮೂಲದವರಾದ ಇವರು ಕಳೆದ 8 ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದರು. ನಂತರ ಅಪರಾಧ ಕೆಲಸಕ್ಕೆ ಇಳಿದಿದ್ದರು.
ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಉದ್ದಮಿ ಜಂತು ದಾಸ್ ಎಂಬವರ ಅಪಹರಣ ಪ್ರಕರಣದಲ್ಲೂ ಇವರು ಭಾಗಿಯಾಗಿರುವ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಾ.18 ರಂದು ನಾಗವಾರ ಮುಖ್ಯರಸ್ತೆಯ ವೀರನಪಾಳ್ಯದಲ್ಲಿ ನಿಂತಿದ್ದ ಈ ಆರೋಪಿಗಳು, ಕ್ಯಾಬ್ ಡ್ರೈವರ್ ಬಳಿ ಡ್ರಾಪ್ ಕೇಳಿದ್ದಾರೆ. ನಂತರ 1500 ಹಣ ಕಿತ್ತು ಎಲೆಕ್ಟ್ರಾನಿಕ್ ಸಿಟಿಗೆ ಡ್ರಾಪ್ ಮಾಡು ಅಂತಾ ಕೇಳಿದ್ದಾರೆ. ನಂತರ ಸಂಶಯ ಹೆಚ್ಚಾದ ಹಿನ್ನೆಲೆಯಲ್ಲಿ ಸೋಮನ್ ಕಾರು ನಿಲ್ಲಿಸದೆ ಚಲಿಸುತ್ತಿದ್ದಾಗ ಭರತ್ ಚಾಕು ತೋರಿಸಿ ಕಾರು ನಿಲ್ಲಿಸುವಂತೆ ಒತ್ತಾಯಿಸಿದ್ದಾನೆ.
ನಂತರ ಸೋಮನ್ ಕಾರು ನಿಲ್ಲಿಸಲು ಯತ್ನಿಸುತ್ತಿದ್ದಂತೆ ಅರೂಪ್ ಟವಲ್ ನಿಂದ ಆತನ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ. ನಂತರ ಕೃಷ್ಣಗಿರಿ ಕಡೆಗೆ ಕಾರನ್ನು ಚಲಾಯಿಸಿಕೊಂಡು ಹೋಗಿದ್ದು, ಮಾರ್ಗಮಧ್ಯೆದಲ್ಲಿ ಮೃತದೇಹವನ್ನು ಬಿಸಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
Advertisement