ಯುವ ಬ್ರಿಗೇಡ್ ನಿಂದ ಕಾವೇರಿ ಶುದ್ಧೀಕರಣ, ಟನ್‍ಗಟ್ಟಲೆ ತ್ಯಾಜ್ಯ ಹೊರಕ್ಕೆ!

ಇಡೀ ದೇಶ ಗಂಗಾನದಿ ಸ್ವಚ್ಛತೆಯ ಕುರಿತು ಮಾತನಾಡುತ್ತಿದ್ದರೆ ಇತ್ತ ರಾಜ್ಯದ ಯುವ ಬ್ರಿಗೇಡ್ ತಂಡ ಸದ್ದಿಲ್ಲದೇ ಕಾವೇರಿ ನದಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದೆ.
ಕಾವೇರಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸ್ವಯಂ ಸೇವಕರು
ಕಾವೇರಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಸ್ವಯಂ ಸೇವಕರು
ಬೆಂಗಳೂರು: ಇಡೀ ದೇಶ ಗಂಗಾನದಿ ಸ್ವಚ್ಛತೆಯ ಕುರಿತು ಮಾತನಾಡುತ್ತಿದ್ದರೆ ಇತ್ತ ರಾಜ್ಯದ ಯುವ ಬ್ರಿಗೇಡ್ ತಂಡ ಸದ್ದಿಲ್ಲದೇ ಕಾವೇರಿ ನದಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದೆ.
ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರ ಸಾರಥ್ಯದಲ್ಲಿ ಸುಮಾರು 400ಕ್ಕೂ ಹೆಚ್ಚು ಕಾರ್ಯಕರ್ತರು ಕಳೆದ ಐದು ದಿನಗಳಿಂದ ಕಾವೇರಿ ನದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು, ನದಿಯಲ್ಲಿದ್ದ ಟನ್ ಗಟ್ಟಲೆ ತ್ಯಾಜ್ಯವನ್ನು ಹೊರ ತೆಗೆದಿದ್ದಾರೆ. ಮಡಿಕೇರಿಯ ತಲಕಾವೇರಿ ಕ್ಷೇತ್ರದಲ್ಲಿ ಕಳೆದ ಗುರುವಾರ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ಕೆ ಬೆಂಗಳೂರಿಗರೂ ಕೂಡ ಸಾಥ್ ನೀಡಿದ್ದಾರೆ.
ಸ್ವಚ್ಛತಾ ಕಾರ್ಯಕ್ಕಾಗಿ ಕಾವೇರಿ ನದಿ ಹರಿಯುವ ಒಟ್ಟು 7 ಪ್ರದೇಶಗಳನ್ನು ಗುರುತಿಸಿ ಅಲ್ಲಿ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಏಪ್ರಿಲ್ 11ರಿಂದ 15ರವರೆಗಿನ ಸ್ವಚ್ಛತಾ ಕಾರ್ಯದಲ್ಲಿ ಈ ವರೆಗೂ ಸುಮಾರು 60ಟನ್ ತ್ಯಾಜ್ಯವನ್ನು ನದಿಯಿಂದ ಹೊರತೆಗೆಯಲಾಗಿದ್ದು, ಟ್ರಾಕ್ಟರ್ ಗಳ ಮೂಲಕ ಕಾವೇರಿಯಲ್ಲಿದ್ದ ಪ್ಲಾಸ್ಟಿಕ್, ವಸ್ತ್ರಗಳ ರಾಶಿಯನ್ನು ಕಾರ್ಯಕರ್ತರು ಹೊರ ಹಾಕಿದ್ದಾರೆ. 
ಈ ಬಗ್ಗೆ ಮಾತನಾಡಿರುವ ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರು, ಕಾರ್ಯಕರ್ತರು, ಸ್ವಯಂ ಸೇವಕರು ಉತ್ಸಾಹದಿಂದ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಕಾವೇರಿ ನದಿ ಸ್ವಚ್ಛತೆ ಅಭಿಯಾನ ಸಂಬಂಧ ಸುಮಾರು 10 ಸಾವಿರ ಪ್ಯಾಂಪ್ಲೇಟ್ ಗಳನ್ನು ಹಂಚಲಾಗಿತ್ತು. ಇದು ಸುಮಾರು 50 ಸಾವಿರ ಜನರನ್ನು ತಲುಪಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಈ ಕಾರ್ಯಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ತಾವೇ ಸ್ವಯಂಪ್ರೇರಿತರಾಗಿ ಈ ಕಾರ್ಯದಲ್ಲಿ ತೊಡಗಿದ್ದಾರೆ.  ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕವೂ ನಾವು ಈ ಕಾವೇರಿ ನದಿ ಸ್ವಚ್ಛತಾ ಕಾರ್ಯಾಚರಣೆಯನ್ನು ಮುಂದುವರೆಸುತ್ತೇವೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ಕೊಡಗು, ಕುಶಾಲನಗರ, ರಾಮನಾಥ್ ಪುರ, ಶ್ರೀರಂಗ ಪಟ್ಟಣದ ನಿಮಿಷಾಂಬ ದೇಗುಲ, ಪಶ್ಚಿಮ ವಾಹಿನಿ, ಮತ್ತು ಸ್ನಾನ ಘಟ್ಟಗಳಲ್ಲಿ  ಕಾರ್ಯಾಚರಣೆ ನಡೆಸಲಾಗಿತ್ತು. ಕಳೆದ ವರ್ಷ ಕುಶಾಲ ನಗರಕ್ಕೆ ಆಗಮಿಸಿದ್ದಾಗ ಕಾವೇರಿ ನದಿ ಅಪಾರ ಮಟ್ಟದ ತ್ಯಾಜ್ಯಗಳಿಂದ ಮಲಿನವಾಗುತ್ತಿರುವುದು ಕಂಡುಬಂದಿತ್ತು. ಅಂದೇ ಈ ಸ್ವಚ್ಛತಾ ಕಾರ್ಯಾಚರಣೆ ಕುರಿತು  ನಿರ್ಧರಿಸಿ ರೂಪುರೇಷೆ ಸಿದ್ಧಪಡಿಸಿದೆವು ಎಂದು ಅವರು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ
ಇನ್ನು ಯುವ ಬ್ರಿಗೇಡ್ ಕಾರ್ಯಕರ್ತರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ನಾವು ಕೂಡ ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತೇವೆ ಎಂದು ಹಲವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com