

ಬೆಂಗಳೂರು : ಜ್ಯೋತಿಷ್ಯಶಾಸ್ತ್ರ ಹೇಳಿಕೊಡುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ 41 ವರ್ಷದ ಜ್ಯೋತಿಷಿಯೊಬ್ಬನನ್ನು ಗಂಗಮ್ಮನ ಗುಡಿ ಪೊಲೀಸರು ಬಂಧಿಸಿದ್ದಾರೆ.
ಅಬ್ಬಿಗೆರೆ ಲೇಔಟ್ ನ ನಿವಾಸಿ ದಿನೇಶ್ ಬಂಧಿತ ಆರೋಪಿ. ಈತ ಸಂಖ್ಯಾಶಾಸ್ತ್ರಜ್ಞನಾಗಿಯೂ ಹೆಸರುವಾಸಿಯಾಗಿದ್ದಾನೆ.
ಈತ ಯಾವಾಗಲೂ ಟಿವಿಯಲ್ಲಿ ಬರುತ್ತಿದ್ದರಿಂದ ಆಕರ್ಷಿತರಾದ ಯಶವಂತಪುರದ 28 ವರ್ಷದ ಯುವತಿಯೊಬ್ಬಳು ಆತನನ್ನು ಸಂಪರ್ಕಿಸಿದ್ದಾಳೆ. ನಂತರ ಜ್ಯೋತಿಷ್ಯ ಶಾಸ್ತ್ರ ಹೇಳಿಕೊಡುವುದಾಗಿ ನಂಬಿಸಿ ಆಕೆಯ ಪೋನ್ ನಂಬರ್ ಪಡೆದುಕೊಂಡು ಸಂಪರ್ಕ ಬೆಳೆಸಿಕೊಂಡು ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ.
ಅಲ್ಲದೇ ಈ ವಿಷಯವನ್ನು ಬೇರೆ ಯಾರಿಗಾದರೂ ಹೇಳಿದ್ದಲ್ಲಿ ಕೊಲ್ಲುವುದಾಗಿ ಬೆದರಿಕೆವೊಡ್ಡಿದ ಎಂದು ಪೊಲೀಸರು ಹೇಳಿದ್ದಾರೆ.
ಈ ಮಧ್ಯೆ ದಿನೇಶ್ ಹಣಕಾಸು ಸಮಸ್ಯೆಗೆ ಸಿಲುಕಿದ್ದು, ಮುಂದಿನ ವಾರ ಹಿಂದಿರುಗಿಸುವುದಾಗಿ ಹೇಳಿ 50 ಲಕ್ಷ ರೂ. ಪಡೆದಿದ್ದಾನೆ. ಆ ಹಣ ಕೇಳಲು ಹೋದರೆ ಆಕೆಯ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಹೀಗೆ ಜ್ಯೋತಿಷ್ಯ ಹೇಳಿಕೊಡುವುದಾಗಿ ನಂಬಿಸಿ ಹಲವು ಮಹಿಳೆಯರ ಮೇಲೆ ಆತ ಅತ್ಯಾಚಾರವೆಸಗಿರುವ ಸಂಗತಿ ತಿಳಿದ ಮಹಿಳೆ ದೂರು ದಾಖಲಿಸಿದ್ದಾಳೆ.
ದೂರಿನ ಆಧಾರದ ಮೇಲೆ ದಿನೇಶ್ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆತ ಆಕೆಯ ಮೇಲೆ ಅತ್ಯಾಚಾರವೆಸಗಿರುವುದು ಕಂಡುಬಂದಿದೆ. ಈತನಿಂದ ಅತ್ಯಾಚಾರಕ್ಕೊಳಗಾದ ಇನ್ನಿತರ ಮಹಿಳೆಯರು ದೂರು ಸಲ್ಲಿಸಿದ್ದರೆ ದಿನೇಶ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.