ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಇಲಾಖೆಗಳು ಬೆಳಗಾವಿಗೆ ಸ್ಥಳಾಂತರ: ಸಿಎಂ ಕುಮಾರಸ್ವಾಮಿ

ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಇಲಾಖೆಗಳು ಶೀಘ್ರದಲ್ಲಿಯೇ ಬೆಳಗಾವಿಗೆ ಸ್ಥಳಾಂತರಗೊಳ್ಳಲಿವೆ...
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಇಲಾಖೆಗಳು ಶೀಘ್ರದಲ್ಲಿಯೇ ಬೆಳಗಾವಿಗೆ ಸ್ಥಳಾಂತರಗೊಳ್ಳಲಿವೆ. 
ಉತ್ತರ ಕರ್ನಾಟಕ ಭಾಗದ ಕುರಿತಂತ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪಗಳು ತಮ್ಮ ವರ್ಚಸ್ಸನ್ನು ಹಾಳು ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕದ ಇಲಾಖೆಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿಯವರು ಮಂಗಳವಾರ ಹೇಳಿದ್ದಾರೆ. 
ನಿನ್ನೆಯಷ್ಟೇ ವಿಧಾನಸೌಧದಲ್ಲಿ ಉತ್ತರ ಕರ್ನಾಟಕದ ಹೋರಾಟಗಾರರು ಹಾಗೂ ರೈತ ಮುಖಂಡರ ನಿಯೋಗದೊಂದಿಗೆ ಸಭೆ ನಡೆಸಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಭರಪೂರ ಆಶ್ವಾಸನೆ ನೀಡಿದರು.
ಕರ್ನಾಟಕ ಎಂದಿಗೂ ಅಖಂಡ, ಕರ್ನಾಟಕ ರಾಜ್ಯವನ್ನು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಎಂದು ಪ್ರತ್ಯೇಕವಾಗಿ ಕನಸು ಮನಸ್ಸಿನಲ್ಲಿಯೂ ಊಹಿಸಲು ಸಾಧ್ಯವಿಲ್ಲ. ಉತ್ತ ಕರ್ನಾಟಕ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ನನಗೆ ಒಂದು ವರ್ಷ ಕಾಲಾವಕಾಶ ನೀಡಿ. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ನೀಡುತ್ತೇನೆ ಎಂದು ಹೋರಾಟಗಾರರಿಗೆ ಭರವಸೆ ನೀಡಿದರು. 
ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಸಚಿವಾಲಯಗಳನ್ನು ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಲಾಗಿದೆ. ಯಾವ ಯಾವ ಸಚಿವಾಲಯವನ್ನು ಸ್ಥಳಾಂತರಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಇನ್ನು ಇಬ್ಬರು ಉಪ ಲೋಕಾಯುಕ್ತರ ಪೈಕಿ ಒಬ್ಬರು ಉಪ ಲೋಕಾಯುಕ್ತರನ್ನು ಉತ್ತರ ಕರ್ನಾಟಕಕ್ಕೆ ವರ್ಗಾಯಿಸಲಾಗುವುದು. ರಾಜ್ಯದಲ್ಲಿರುವ ಮಾಹಿತಿ ಆಯುಕ್ತರ ಪೈಕಿ 3 ಆಯುಕ್ತರನ್ನು ಉತ್ತರ ಕರ್ನಾಟಕಕ್ಕೆ ವರ್ಗಾಯಿಸಲಾಗುವದು ಎಂದು ತಿಳಿಸಿದ್ದಾರೆ. 
ಬೆಂಗಳೂರಿನಲ್ಲಿ ಇರುವ ಕೃಷ್ಣ ಭಾಗ್ಯ ಜಲ ನಿಗಮದ ಕಚೇರಿಯನ್ನು ಉತ್ತರ ಕರ್ನಾಟಕ್ಕೆ ವರ್ಗಾಯಿಸಲು ಚಿಂತನೆ ನಡೆಸಿದ್ದೇನೆ. 20 ದಿನದೊಳಗಾಗಿ ಬೆಳಗಾವಿಯಲ್ಲಿ ಆ ಭಾಗದ ಪ್ರತಿನಿಧಿಗಳ ಜೊತೆಗೆ ಸಭೆ ನಡೆಸಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೈಗೊಳ್ಳಲಿರುವ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com