ಗೌರಿ ಲಂಕೇಶ್ ಹತ್ಯೆ ಪ್ರಕರಣ: ರಹಸ್ಯ ಕಾಪಾಡಿದ್ದ ಹಂತಕರು

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಹಂತಕರಿಂದ ಸ್ಫೋಟಕ ಮಾಹಿತಿಗಳು ಬಹಿರಂಗಗೊಳ್ಳುತ್ತಿದ್ದು, ಹತ್ಯೆಗೆ ನಡೆಸಲಾಗಿದ್ದ ಯೋಜನೆ ಹಾಗೂ ತಂತ್ರಗಳ ಕುರಿತು ಆರೋಪಿಗಳು ತನಿಖಾಧಿಕಾರಿಗಳ ಬಳಿ ಬಾಯ್ಬಿಟ್ಟಿದ್ದಾರೆ...
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಹಂತಕರಿಂದ ಸ್ಫೋಟಕ ಮಾಹಿತಿಗಳು ಬಹಿರಂಗಗೊಳ್ಳುತ್ತಿದ್ದು, ಹತ್ಯೆಗೆ ನಡೆಸಲಾಗಿದ್ದ ಯೋಜನೆ ಹಾಗೂ ತಂತ್ರಗಳ ಕುರಿತು ಆರೋಪಿಗಳು ತನಿಖಾಧಿಕಾರಿಗಳ ಬಳಿ ಬಾಯ್ಬಿಟ್ಟಿದ್ದಾರೆ. 
ಹತ್ಯೆಗೆ ದೊಡ್ಡ ಯೋಜನೆಯನ್ನೇ ರೂಪಿಸಿದ್ದ ಬಲ ಪಂಥೀಯ ಸಂಘಟನೆ, ಸಹ ಹಂತಕರ ಕುರಿತು ಹಂತಕರಿಗೇ ಮಾಹಿತಿ ಸಿಗದಂತೆ ಅಲಿಖಿತ ನಿಯಮವೊಂದನ್ನು ರೂಪಿಸಿತ್ತು ಎಂಬುದು ಇದೀಗ ಬಹಿರಂಗಗೊಂಡಿದೆ. 
ಹಂತಕರ ಕುರಿತ ಮಾಹಿತಿಗಳನ್ನು ಗೌಪ್ಯವಾಗಿಟ್ಟಿದ್ದ ಸಂಘಟನೆಗಳೂ ಅಲಿಖಿತ ನಿಯಮಗಳನ್ನು ರೂಪಿಸಿತ್ತು. ನಿಯಮದ ಪ್ರಕಾರ ಗುಂಪಿಗೆ ಸೇರಿದ ವ್ಯಕ್ತಿಯ ಗುರ್ತಿಕೆಯನ್ನು ಬಹಿರಂಗಪಡಿಸುವಂತಿರಲಿಲ್ಲ. ಪ್ರಶ್ನೆಗಳನ್ನು ಕೇಳುವಂತಿರಲಿಲ್ಲ. ಯಾವುದೇ ರೀತಿಯ ಸಭೆಗಳ ಅಗತ್ಯವಿದ್ದರೂ, ಅವುಗಳನ್ನು ಬಸ್ ನಿಲ್ದಾಣಗಳು, ದೇಗುಲಗಳು ಹಾಗೂ ಗೌಪ್ಯ ಸ್ಥಳಗಳಲ್ಲಿ ನಡೆಸಬೇಕಿತ್ತು ಎಂಬುದು ಇಲ್ಲಿನ ನಿಯಮವಾಗಿತ್ತು ಎಂದು ತಿಳಿದುಬಂದಿದೆ. 
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಸಾಹಿತಿ ಪ್ರೊ. ಭಗವಾನ್ ಹತ್ಯೆಗೂ ಸಂಚು ರೂಪಿಸಿದ್ದರು. ವಿಚಾರಣೆ ವೇಳೆ ಈ ಆರೋಪಿಗಳು ಸಂಘಟನೆಯ ನಿಯಮಗಳ ಕುರಿತಂತೆ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. 
ಸಂಘಟನೆಯಲ್ಲಿದ್ದ ಮುಖ್ಯಸ್ಥರು ಸಾಕಷ್ಟು ತಂತ್ರಗಳನ್ನು ರೂಪಿಸಿದ್ದರು. ಪ್ರಕರಣ ಸಂಬಂಧ ಯಾರೇ ಬಂಧನಕ್ಕೊಳಗಾದರೂ, ಇನ್ನುಳಿದ ಹಂತಕರ ಕುರಿತ ಮಾಹಿತಿಗಳು ಲಭ್ಯವಾಗದಂತೆ ನೋಡಿಕೊಂಡಿದ್ದರು ಎಂದು ಹೇಳಿದ್ದಾನೆ. 
ಹಿಂದೂ ಧರ್ಮಕ್ಕಾಗಿ ಏನನ್ನಾದರೂ ಮಾಡಲು ಸಿದ್ಧವಿರುವವರನ್ನು ಪರಿಚಯಿಸುವಂತೆ ಮುಖ್ಯಸ್ಥರು ತಿಳಿಸಿದ್ದರು. ಹೀಗಾಗಿ ನಾನು ನಿಹಾಲ್ ಅಲಿಯಾಸ್ ದಾದಾ (ತಲೆಮರೆಸಿಕೊಂಡಿದ್ದಾನೆ), ಅಮೋಲ್ ಕಾಳೆ ಅಲಿಯಾಸ್ ಭಾಯ್'ಸಾಬ್ ನನ್ನು ಪರಿಚಯ ಮಾಡಿಕೊಟ್ಟಿದ್ದೆ. ಒಮ್ಮೆ ಅವರನ್ನು ಪರಿಚಯಿಸಿದ ಬಳಿಕ ನಾನು ಅವರ ಬಗ್ಗೆ ವಿಚಾರಿಸುವಂತಿರಲಿಲ್ಲ ಹಾಗೂ ಅವರನ್ನು ಭೇಟಿ ಮಾಡುವಂತಿರಲಿಲ್ಲ. ಯಾರೇ ಹೊಸ ಸದಸ್ಯನನ್ನು ಭೇಟಿಯಾದರೂ, ಅವರಿಗೆ ನಮ್ಮ ನಿಜವಾದ ಗುರ್ತಿಕೆಯನ್ನು ಹೇಳುವಂತಿರಲಿಲ್ಲ. ಬೇರೆ ಹೆಸರಿನೊಂದಿಗೆ ನಮ್ಮ ಪರಿಚಯ ಮಾಡಿಕೊಳ್ಳಬೇಕಿತ್ತು. ಹೀಗೆಯೇ ಅವರೂ ಕೂಡ ತಮ್ಮ ಗುರ್ತಿಕೆಗಳನ್ನು ಹೇಳುತ್ತಿರಲಿಲ್ಲ. ಭೇಟಿ ವೇಳೆ ಅವರ ವೈಯಕ್ತಿಕ ಮಾಹಿತಿಗಳು, ವಿಳಾಸಗಳನ್ನೂ ಕೇಳುವಂತಿರಲಿಲ್ಲ. ಇದು ಸಂಘಟನೆಯ ನಿಯಮವಾಗಿತ್ತು ಎಂದು ವಿಚಾರಣೆ ವೇಳೆ ಸುಜೀತ್ ಕುಮಾರ್ ಅಲಿಯಾಸ್ ಪ್ರವೀಣ್ ಹೇಳಿಕೊಂಡಿದ್ದಾರೆ. 
ಹೊಸ ಸದಸ್ಯನ ವಿಶ್ವಾಸ ಗಳಿಸಿದ ಬಳಿಕವೇ ನಾವು ನಮ್ಮ ಫೋನ್ ನಂಬರ್ ಗಳನ್ನು ನೀಡಬಹುದಿತ್ತು. ಸಂಘಟನೆಯಲ್ಲಿದ್ದವರು ಹಲವು ಮೊಬೈಲ್ ಸಂಖ್ಯೆಗಳನ್ನು ಬಳಕೆ ಮಾಡುತ್ತಿದ್ದರು. ಗುಂಪುನಲ್ಲಿದ್ದ ನಾಯಕರು ಸದಸ್ಯರೊಂದಿಗೆ ಫೋನ್ ಗಳಲ್ಲಿ ಮಾತನಾಡದಂತೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ನೀಡದಂತೆ ತಿಳಿಸುತ್ತಿಲ್ಲ. ಪ್ರತೀ ಸದಸ್ಯರೊಂದಿಗೆ ಮಾತನಾಡುವಾಗಲೂ ಬೇರೆ ಬೇರೆ ಸಿಮ್ ಕಾರ್ಡ್ ಗಳನ್ನು ಬಳಕೆ ಮಾಡಬೇಕಿತ್ತು. ಒಂದೇ ಸಂಖ್ಯೆಯನ್ನು ಇಬ್ಬರು ಸದಸ್ಯರೊಂದಿಗೆ ಮಾತನಾಡಲು ಬಳಸುವಂತಿರಲಿಲ್ಲ. ಗೌಪ್ಯತೆ ಕಾಪಾಡುವುದು ಸಂಘಟನೆ ಪ್ರಮುಖ ಅಂಶವಾಗಿತ್ತು. ಹೊಸ ಸದಸ್ಯನನ್ನು ಭೇಟಿಯಾದ ಬಳಿಕ ಆತನೊಂದಿಗೆ ಮಾತನಾಡಬೇಕಿದ್ದರೆ, ಸಾರ್ವಜನಿಕ ಫೋನ್ ಗಳ ಮುಖಾಂತರ ಮಾತನಾಡಬೇಕಿತ್ತು. ನೂತನವಾಗಿ ಸೇರ್ಪಡೆಗೊಂಡ ವ್ಯಕ್ತಿ ನಮ್ಮ ಸಂಘಟನೆಯ ಸದಸ್ಯನಾಗಿದ್ದಾನೆಂದು ಖಾತರಿಯಾದ ಬಳಿಕವಷ್ಟೇ ಮೊಬೈಲ್ ಸಂಖ್ಯೆಗಳನ್ನು ನೀಡುತ್ತಿದ್ದೆವು. ಮಾತನಾಡುವಾಗ ಕೋಡ್ ನೇಮ್ ಗಳನ್ನು ಹೇಳಬೇಕಿತ್ತು. 
ಗುಂಪಿನ ಸದಸ್ಯರು ಕೇವಲ ಬಸ್ ನಿಲ್ದಾಣಗಳು, ದೇಗುಲಗಳು ಹಾಗೂ ವಿವಿಧ ಸ್ಥಳಗಳ ಗೌಪ್ಯ ಪ್ರದೇಶಗಳಲ್ಲಿ ಅಷ್ಟೇ ಭೇಟಿಯಾಗಬೇಕಿತ್ತು ಎಂದು ಸುಜೀತ್ ಹೇಳಿಕೊಂಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com