ಕೊಡಗಿನಲ್ಲಿ ಮಳೆ ಅವಾಂತರ: 300ಕ್ಕೂ ಹೆಚ್ಚು ಜನ ರಕ್ಷಣೆಯ ನಿರೀಕ್ಷೆಯಲ್ಲಿ

ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು,300ಕ್ಕೂ ಹೆಚ್ಚು ಜನ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಕೊಡಗು: ಕರ್ನಾಟಕದ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಯಲ್ಲಿ  ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, 300ಕ್ಕೂ ಹೆಚ್ಚು ಜನ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ. ಹಲವು ಜನರು ಸಂಪರ್ಕಕ್ಕೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಲವೆಡೆ ಭೂಕುಸಿತಗಳು ಮುಂದುವರಿದಿದ್ದು,  ಶಿರಂಗಲಾ, ಮಾಂದಾಲ್ ಪಟ್ಟಿ, ಮುಕ್ಕೊಡ್ಲು,  ಹತ್ತಿಹೊಳೆ, ಕಲ್ಲೂರು, ಮುವತೊಕ್ಲು ಮೊದಲಾದ  ಗುಡ್ಡಪ್ರದೇಶದ ಜನರು  ಜಿಲ್ಲೆಯ ನಡುವೆ ಸಂಪರ್ಕ ಕಡಿತಗೊಂಡಿದ್ದು, ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

ಈ ಮಧ್ಯೆ ಕಾಟಕೇರಿಯಲ್ಲಿ  ನಿನ್ನೆ ಗುಡ್ಡ  ಕುಸಿತದಿಂದಾಗಿ ಮೂವರು ಮೃತಪಟ್ಟಿದ್ದರೆ ಇಂದು ಬೆಳಗ್ಗೆ ಮುವತೊಕ್ಲುವಿನಲ್ಲಿ 64 ವರ್ಷದ ಮುಕ್ಕಟಿರಾ ಸಾಬು ಉತ್ತಪ್ಪ ಎಂಬವರು ಮೃತಪಟ್ಟಿದ್ದಾರೆ.

ಮುಕೊಡ್ಲುವಿನಲ್ಲಿ ಭೂಕುಸಿತದ ಭೀತಿಂದ ಮಗುವೊಂದು ಮೃತಪಟ್ಟಿದೆ. ಆದಾಗ್ಯೂ , ಜಿಲ್ಲಾಡಳಿತ ಸಂಕಷ್ಟಕ್ಕೆ ಸಿಲುಕಿರುವ, ಸಂಪರ್ಕಕ್ಕೆ ಸಿಗದಿರುವ ಮಂದಿಯ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.

ನಾಗರಿಕ ರಕ್ಷಣಾ ತಂಡ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಕ್ಷಿಪ್ರ ಕಾರ್ಯಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ  ಜಂಟಿ ರಕ್ಷಣಾ ಕಾರ್ಯಾಚರಣೆ  ನಡೆಸುತ್ತಿವೆ. ಮಣ್ಣು ಕುಸಿಯುತ್ತಿರುವುದರಿಂದ ತೆರವು ಕಾರ್ಯಾಚರಣೆಗೂ ಅಡ್ಡಿಯಾಗಿದೆ.

 ಸಂಕಷ್ಟಕ್ಕೆ ಸಿಲುಕಿರುವ ಜನರ ಬಳಿಗೆ ಯಾವುದೇ ವಾಹಗಳು ತೆರಳಲೂ ಸಾಧ್ಯವಾಗುತ್ತಿಲ್ಲ.  ಅಂತಹವರು ಪತ್ತೆಯಾದ ಕೂಡಲೇ  ವೈದ್ಯಕೀಯ ಚಿಕಿತ್ಸೆ ನೀಡಿ  ಹತ್ತಿರದಲ್ಲಿರುವ ಪರಿಹಾರ ಶಿಬಿರಗಳಿಗೆ  ಸ್ಥಳಾಂತರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶ್ರೀ ವಿದ್ಯಾ ತಿಳಿಸಿದ್ದಾರೆ.

ಸೇನೆಯ 67 ತುಕಡಿ,  ರಾಜ್ಯ ವಿಪತ್ತು ನಿರ್ವಹಣಾ ಪಡೆಯ 50 ತುಕಡಿ, ಕ್ಷಿಪ್ರ ಕಾರ್ಯ ಪಡೆಯ 60 ಸದಸ್ಯರು  ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದು, ಕಣ್ಣೂರು ಮೂಲಕ ಮುಕ್ಕೊಡ್ಲು ತಲುಪಿ  ಜನರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
 ಹಲವು ಸ್ವಯಂ ಸೇವಾ ಸಂಸ್ಥೆಗಳಿಂದ ಮನೆ ಮಠ ಕಳೆದುಕೊಂಡ ಸಂತ್ರಸ್ತರಿಗೆ ನೆರವು ನೀಡಲಾಗುತ್ತಿದೆ.  ಆದಾಗ್ಯೂ, ಸರ್ಕಾರದಿಂದ ಯಾವುದೇ ರೀತಿಯ ಸಹಾಯ ಈ ಸಂಸ್ಥೆಗಳಿಗೆ ಬಂದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ವೈದ್ಯಕೀಯ ಪರಿಕರಗಳು, ವೈದ್ಯರು ಹಾಗೂ ನರ್ಸ್ ಗಳ ತಂಡ , ಬ್ಲಾಕೆಟ್ ಒದಗಿಸುವಂತೆ  ಮೈಸೂರು, ಮಂಡ್ಯ, ಮತ್ತು ಹಾಸನ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಆರ್. ವಿ. ದೇಶಪಾಂಡೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com