ಪ್ರವಾಹ ಆಯ್ತು, ಕೊಡಗು ರೈತರಿಗೆ ಈಗ ಕೀಟಗಳ ಬಾಧೆ!
ಮಡಿಕೇರಿ: ತೀವ್ರ ಮಳೆ, ಪ್ರವಾಹ ಮತ್ತು ಭೂ ಕುಸಿತ ನಂತರ ಇದೀಗ ಕೊಡಗು ಜಿಲ್ಲೆಯಲ್ಲಿ ಕೀಟಗಳಿಂದ ಜನರಿಗೆ ತೊಂದರೆ ಉಂಟಾಗುತ್ತಿದೆ. ಇದರಿಂದ ಕೆಲವು ಕೃಷಿ ಬೆಳೆಗಳಿಗೆ ಹಾನಿಯುಂಟಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇಲ್ಲಿನ ರೈತರು ಮತ್ತು ಎಸ್ಟೇಟ್ ಮಾಲಿಕರ ಬೇಡಿಕೆಗಳನ್ನು ಸರ್ಕಾರ ಪೂರೈಸಬೇಕಾಗಿದೆ. ಕಾಫಿ, ಭತ್ತ, ಕಾಳುಮೆಣಸು ಬೆಳೆಗಳ ಸಮಸ್ಯೆಗಳಿಂದ ರೈತರು ಆತಂಕಕ್ಕೊಳಗಾಗುವ ಪರಿಸ್ಥಿತಿಯಿದೆ.
ಕೀಟನಾಶಕಗಳನ್ನು ಸಿಂಪಡಿಸಿ, ತೇವಗೊಂಡಿರುವ ಎಲೆಗಳನ್ನು ಸ್ವಚ್ಛಗೊಳಿಸುವುದು ತಕ್ಷಣದ ಅಗತ್ಯವಾಗಿದೆ. ಎಲೆಗಳು ಮತ್ತು ಕಾಫಿ ಹಣ್ಣುಗಳನ್ನು ಕೊಳೆಯುವ ಮೂಲಕ ಶಿಲೀಂಧ್ರ ಸೋಂಕು ಉಂಟಾಗುತ್ತದೆ.ಈ ರೋಗ ಎಲ್ಲಾ ಬೆಳೆಗಳಿಗೆ ಹರಡಿ ತೀವ್ರ ಬೆಳೆನಾಶವಾಗಲಿದೆ ಎನ್ನುತ್ತಾರೆ ನಿವೃತ್ತ ಕೃಷಿ ವಿಜ್ಞಾನಿ ಡಾ ಜೆ ವೆಂಕಟೇಶ್.
ಪ್ರವಾಹ ಪೀಡಿತ ಪ್ರದೇಶಗಳ ಪುನರ್ವಸತಿ ಮತ್ತು ಕುಸಿತಗೊಂಡ ಭೂಮಿಯು ಸಹಜ ಸ್ಥಿತಿಗೆ ಮರಳಿದರೆ ಕೃಷಿಕಾರ್ಯ ಮತ್ತೆ ಆರಂಭವಾಗಬೇಕಿದೆ. ನೀರಿನ ಹರಿವನ್ನು ಮತ್ತು ನೈಸರ್ಗಿಕ ಹೊಳೆಗಳನ್ನು ಗುರುತುಹಿಡಿದು ಭೂಮಿಯ ಸಮೀಕ್ಷೆ ಮಾಡಬೇಕಾಗುತ್ತದೆ. ಆ ಪ್ರದೇಶಕ್ಕೆ ಹೊಂದುವ ಬೆಳೆಗಳನ್ನು ನೆಟ್ಟು, ಯಾವ ರೀತಿಯ ಮಣ್ಣಿನಲ್ಲಿ ಸಹಜವಾಗಿ ಬೆಳೆಯಬಹುದಾದ ಸಾಂಬಾರು ಪದಾರ್ಥಗಳನ್ನು ಬೆಳೆಸಬೇಕಾಗುತ್ತದೆ. ಈ ಸಾಂಬಾರು ಪದಾರ್ಥ ಬೆಳೆಗಳಿಗೆ ಕಡಿಮೆ ನೀರು ಮತ್ತು ಪೌಷ್ಟಿಕಾಂಶ ಸಾಕಾಗುತ್ತದೆ ಎನ್ನುತ್ತಾರೆ ಪರಿಸರತಜ್ಞ ಎಎನ್ ಯಲ್ಲಪ್ಪ ರೆಡ್ಡಿ.
ಸರ್ಕಾರದ ಇಲಾಖೆಗಳು ಮುಂದಿನ 6-7ತಿಂಗಳು ಸರಿಯಾಗಿ ಕೆಲಸ ಮಾಡಬೇಕಾಗುತ್ತದೆ. ವೈಜ್ಞಾನಿಕ ವಿಧಾನಗಳ ಮೂಲಕ ಭೂ ಕುಸಿತಕ್ಕೊಳಗಾದ ಭೂಮಿಯನ್ನು ನಿಧಾನವಾಗಿ ಮರುಪಡೆಯಬಹುದು. ಅದಕ್ಕೆ ಕಡಿಮೆಯೆಂದರೂ 2-3 ವರ್ಷ ಬೇಕಾಗಬಹುದು ಎನ್ನುತ್ತಾರೆ ಜಿಕೆವಿಕೆ ನಿವೃತ್ತ ಪ್ರಾಧಾಪ್ಯಕ ಬಾಲಕೃಷ್ಣ ಗೌಡ.
ಪ್ರವಾಹಪೀಡಿತ ರೈತರಿಗೆ ಮೊದಲಿನಂತೆ ತಮ್ಮ ಭೂಮಿಯಲ್ಲಿ ಇಳುವರಿ ಸಿಗಲಿಕ್ಕಿಲ್ಲ. ಆದರೆ ಕೆಲ ಸಮಯಗಳು ಕಳೆದ ನಂತರ ತಳಮಟ್ಟದಿಂದ ಬೆಳೆ ಬೆಳೆಯಲು ಸಾಧ್ಯವಿದೆ ಎನ್ನುತ್ತಾರೆ ಅವರು.
ತಜ್ಞರ ಪ್ರಕಾರ, ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರೈತರ ಒಳಿತಿಗೆ ಭೂಮಿಯ ಸಮೀಕ್ಷೆ ನಡೆಸಬೇಕು ಎಂದು ತಜ್ಞರು ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ