ನಾಳೆಯಿಂದ 2 ದಿನ ಕಡಲೆಕಾಯಿ ಪರಿಷೆ: ಅಲಂಕಾರದಿಂದ ಕಂಗೊಳಿಸುತ್ತಿದೆ ಬಸವನಗುಡಿ
ಬಡವರ ಬಾದಾಮಿ ರಾಶಿ ರಾಶಿ ಕಡಲೆಕಾಯಿ, ಬಾಯಿ ನೀರೂರಿಸುವ ಹಲವಾರು ತಿಂಡಿ, ತಿನಿಸುಗಳು ಹಾಗೂ ಅಲಂಕಾರದಿಂದ ಬಸವನಗುಡಿ ಕಂಗೊಳಿಸುತ್ತಿದ್ದು, ಎಲ್ಲೆಡೆ ನೋಡಿದರೂ ಗ್ರಾಮೀಣ ವಾತಾವರಣ ಬಸವನಗುಡಿಯಲ್ಲಿ ನಿರ್ಮಾಣವಾಗಿದೆ...
ಬೆಂಗಳೂರು: ಬಡವರ ಬಾದಾಮಿ ರಾಶಿ ರಾಶಿ ಕಡಲೆಕಾಯಿ, ಬಾಯಿ ನೀರೂರಿಸುವ ಹಲವಾರು ತಿಂಡಿ, ತಿನಿಸುಗಳು ಹಾಗೂ ಅಲಂಕಾರದಿಂದ ಬಸವನಗುಡಿ ಕಂಗೊಳಿಸುತ್ತಿದ್ದು, ಎಲ್ಲೆಡೆ ನೋಡಿದರೂ ಗ್ರಾಮೀಣ ವಾತಾವರಣ ಬಸವನಗುಡಿಯಲ್ಲಿ ನಿರ್ಮಾಣವಾಗಿದೆ.
ರಾಜಧಾನಿಯ ಬಸವನಗುಡಿಯಲ್ಲಿ ಐತಿಹಾಸಿಕ 2 ದಿನಗಳ ಕಡಲೆಕಾಯಿ ಪರಿಷೆ ನಾಳೆಯಿಂದ ಆರಂಭವಾಗಲಿದ್ದು, ವ್ಯಾಪಾರಕ್ಕೆ ವ್ಯಾಪಾರಿಗಳು ಸಜ್ಜಾಗುತ್ತಿದ್ದಾರೆ.
ಕಾರ್ತೀಕ ಮಾಸದ ಕಡೆಯ ಸೋಮವಾರ ಡಿ.3 ರಂದು ಅಧಿಕತವಾಗಿ ಪರಿಷೆಗೆ ಚಾಲನೆ ದೊರೆಯಲಿದ್ದು, 2 ದಿನಗಳ ಕಾಲ ನಡೆಯುವ ಈ ಪರಿಷೆಗೆ ಬಸವನಗುಡಿಯಾದ್ಯಂತ ಸಂಭ್ರಮ ಮನೆ ಮಾಡಿದೆ.
ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳೆಲ್ಲಾ ಪರಿಷೆಗೆ ಸಜ್ಜುಗೊಂಡಿದ್ದು, ವ್ಯಾಪಾರಿಗಳಿಂದ ತುಂಬಿ ಹೋಗಿದೆ. ಇನ್ನು ಪರಿಷೆಗೆ ಆಗಮಿಸುವ ಜನರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ದೇವಸ್ಥಾನದ ಮಂಡಳಿ ಹಾಗೂ ಮುಂಜರಾಯಿ ಇಲಾಖೆ ಸಕಲ ಸಿದ್ಧತೆಗಳನ್ನು ನಡೆಸಿದೆ.
ಪ್ರತಿ ವರ್ಷದಂತೆ ಕಡಲೆಕಾಯಿ ಪರಿಷೆ ಪ್ರಯುಕ್ತ ಬ್ಯೂಗಲ್ ರಾಕ್, ನರಸಿಂಹ ಸ್ವಾಮಿ ಉದ್ಯಾನದಲ್ಲಿ ಡಿ.3 ಹಾಗೂ 4ರಂದು ಸಂಜೆ 6ರಿಂದ 10ಗಂಟೆವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದೇವಸ್ಥಾನದ ಸುತ್ತಮುತ್ತಲ ರಸ್ತೆಗಳಲ್ಲಿ ಈಗಾಗಲೇ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ. ಪಾದಚಾರಿ ಮಾರ್ಗಗಳು ಮಕ್ಕಳ ಆಟದ ಸಾಮಾಗ್ರಿಗಳು, ಅಲಂಕಾರಿಕ ವಸ್ತುಗಳು, ತಿಂಡಿ ತಿನಿಸುಗಳು ವ್ಯಾಪಾರಿಗಳು ಸೇರಿದಂತೆ ವಿವಿಧ ವ್ಯಾಪಾರಿಗಳ ತಾಣವಾಗಿ ಮಾರ್ಪಟ್ಟಿದೆ. ನಾನಾ ಭಾಗಗಳ ರೈತರು ಮಳಿಗೆಗಳನ್ನು ಹಾಕಿದ್ದಾರೆ.